ಬೆಂಗಳೂರು: ಪ್ರೀತಿಸಿ ಮದುವೆಯಾಗುವ ಕನಸು ಕಂಡಿದ್ದ ಯುವತಿಯನ್ನು ಲಾಡ್ಜ್ ಕಟ್ಟಡದಿಂದ ತಳ್ಳಿ ಹತ್ಯೆಗೈದ ಆರೋಪದಡಿ ಆಕೆಯ ಪ್ರಿಯಕರನನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರೀತಿ ಹೆಸರಲ್ಲಿ ಅದೆಂತಾ ಅಸಹ್ಯಗಳೆಲ್ಲ ನಡೆದು ಹೋಗಿ ಬಿಡುತ್ತವೆ ಅಂದ್ರೆ ಅದನ್ನ ಊಹೆ ಮಾಡಲೂ ಸಾಧ್ಯವಿಲ್ಲ ಬಿಡಿ.. ಹಾಸನದಿಂದ ಬದುಕು ಹರಸಿ ಬಂದವಳು ಪ್ರಿಯಕರನೆಂಬ ನೀಚನ ನಂಬಿದ್ದಕ್ಕೆ ಬದುಕೇ ಅಂತ್ಯವಾಗಿಬಿಟ್ಟಿದೆ. ಹಾಸನ ಮೂಲದ ಐಶ್ವರ್ಯ, ಸಂತೋಷ್ ಇಬ್ಬರೂ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ರು. ಈ ವೇಳೆ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಂಡಿದೆ. ಕಳೆದ ಹಲವು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಯಿಂದಲೇ ಜೀವನ ಕಳೆದಿದ್ದಾರೆ.
ಈ ಮಧ್ಯೆ ಮದುವೆ ಪ್ರಸ್ತಾಪ ಬಂದಿದೆ. ಇಬ್ಬರ ಪ್ರೀತಿಗೆ ಐಶ್ವರ್ಯ ಕುಟುಂಬಸ್ಥರು ವಿರೋಧ ಮಾಡಿದ್ದಾರೆ. ಆದ್ರೆ ಸಂತೋಷ್ ನನ್ನೆ ಮದುವೆಯಾಗ್ತೀನಿ ಅಂತ ಐಶ್ವರ್ಯ ಹಠ ಹಿಡಿದಿದ್ದಳು. ಬಳಿಕ ಮದುವೆಗೆ ಕುಟುಂಬಸ್ಥರು ಒಪ್ಪಿದ್ರು. ಆದ್ರೆ, ಸಂತೋಷ್ ಮದುವೆಯಾಗಲು ಮೂರು ವರ್ಷ ಸಮಯ ಕೇಳಿದ್ದ. ಮೂರು ವರ್ಷಗಳಾದ್ರು ಮದುವೆಯಾಗದೇ ಸಂತೋಷ್ ಸತಾಯಿಸಿದ್ದ. ನಂತರ ಮದುವೆಗೆ ಮನೆಯಲ್ಲಿ ಒಪ್ಪುತ್ತಿಲ್ಲ ಮದುವೆಯಾಗಲ್ಲ ಅಂದಿದ್ದ. ಎರಡು ಕುಟುಂಬದ ನಡುವೆ ಮಾತುಕತೆಯಾಗಿ ಹೇಗೋ ಮತ್ತೆ ಮದುವೆಗೆ ನಿಶ್ಚಯವಾಗಿದೆ. ಈ ವೇಳೆ ಮತ್ತೆ ಆರು ತಿಂಗಳು ಕಾಲಾವಕಾಶ ಕೇಳಿದ್ದ ಸಂತೋಷ್, ಇತ್ತೀಚೆಗೆ ಮದುವೆಯಾಗಲ್ಲ ಅಂತ ಐಶ್ವರ್ಯ ಮನೆ ಬಳಿ ತೆರಳಿ ಗಲಾಟೆ ಮಾಡಿದ್ದಾನೆ.
ಎಷ್ಟೆಲ್ಲಾ ಆದಮೇಲೆ ಸಹಜವೆಂಬಂತೆ ಸಂತೋಷ್ ನನ್ನ ಐಶ್ವರ್ಯಾ ಅವಾಯ್ಡ್ ಮಾಡಿದ್ದಳು. ಈ ಮಧ್ಯೆ ಮತ್ತೊಬ್ಬನ ಜೊತೆ ಸುತ್ತಾಡುತ್ತಿದ್ದಾಳಂತೆ. ಇದನ್ನ ಆದನಿಗೆ ಸಹಿಸಿಕೊಳ್ಳಲು ಆಗಿಲ್ಲ. ಹೀಗಾಗಿ ಪದೇ ಪದೇ ತನ್ನನ್ನ ಭೇಟಿಯಾಗುವಂತೆ ಸಂತೋಷ್ ಟಾರ್ಚರ್ ಕೊಟ್ಟಿದ್ದಾನೆ. ಹೀಗಾಗಿ ಆತನನ್ನ ನಂಬಿ, ಇಂಟರ್ ವ್ಯೂ ಇದೆ ಅಂತ ಮನೆಯಲ್ಲಿ ಹೇಳಿ ಸಂತೋಷ್ ಭೇಟಿಯಾಗಲ ಐಶ್ವರ್ಯ ಬಂದಿದ್ದಾಳೆ. ಕಳೆದ 19ರಂದು ಅಬ್ಬಿಗೆರೆಯ ಲಾಡ್ಜ್ ನಲ್ಲಿ ಸಂತೋಷ್ ಐಶ್ವರ್ಯ ಮಧ್ಯೆ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ ಲಾಡ್ಜ್ ನ ಮೂರನೇ ಮಹಡಿಯ ಕಿಟಕಿಯಿಂದ ಐಶ್ವರ್ಯ ಳನ್ನ ತಳ್ಳಿಬಿಟ್ಟಿದ್ದಾನೆ. ಕರೆಂಟ್ ಕಂಬದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಐಶ್ವರ್ಯ, ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಗಂಗಮ್ಮನಗುಡಿ ಪೊಲೀಸರ ವಿಚಾರಣೆ ವೇಳೆ ಅಸಲಿ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿ ಸಂತೋಷ್ ನನ್ನ ಬಂಧಿಸಿದ್ದಾರೆ. ಪಾಪ ಪ್ರೀತಿ ಗೀತಿ ಅಂತ ಹೋದವಳ ದುರಂತ ಅಂತ್ಯವಾಗಿಬಿಟ್ಟಿದೆ.