ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ

ಮೈಸೂರು: ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ವ್ಯಸನದ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ಹಾಗೂ ಮಾದಕ ವಸ್ತುಗಳಿಂದ ಮುಕ್ತ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಉದ್ದೇಶದಿಂದ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವತಿಯಿಂದ ಮಾದಕ ವ್ಯಸನ ವಿರೋಧಿ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿತ್ತು.

ಅಕಾಡೆಮಿಯ ಜೀವ ವಿಜ್ಞಾನ ಸ್ಕೂಲ್ ವೃತ್ತದಲ್ಲಿ ಜಾಗೃತಿ ರ‍್ಯಾಲಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಂಯೋಜಕ ಡಾ. ಸತೀಶ್ ಎ.ಡಿ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ರಾಯಭಾರಿಗಳು ರ‍್ಯಾಲಿಯಲ್ಲಿ ಭಾಗವಹಿಸಿ, ಮಾದಕ ವ್ಯಸನದ ವಿರುದ್ಧ ಘೋಷಣೆಗಳನ್ನು ಮೊಳಗಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ಮತ್ತು ಸಾಮೂಹಿಕ ಜಾಗೃತಿಯ ಅಗತ್ಯವನ್ನು ಸಾರಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ವಿಭಾಗದ ಡೀನ್ ಡಾ. ವಿಶಾಲ್ ಕುಮಾರ್ ಗುಪ್ತಾ, ಜೀವ ವಿಜ್ಞಾನ ಸ್ಕೂಲ್‌ನ ಡೀನ್ ಡಾ. ರವೀಶ್ ಕೆ.ಎ., ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಗೋಪಿನಾಥ್ ಟಿ.ಎನ್. ಹಾಗೂ ವೈದ್ಯಕೀಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಷಣ್ಮುಗಪ್ಪ ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಯುವಜನರು ಮಾದಕ ವ್ಯಸನಕ್ಕೆ ಒಳಗಾಗಲು ಕಾರಣವಾಗುವ ಸ್ನೇಹಿತರ ಒತ್ತಡ, ಕುತೂಹಲ ಹಾಗೂ ಹೊಸ ಅನುಭವಗಳನ್ನು ಪಡೆಯುವ ಹಂಬಲದ ಕುರಿತು ವಿವರಿಸಿದರು. ಇಂತಹ ಪ್ರಲೋಭನೆಗಳಿಗೆ ಒಳಗಾಗದೆ ವಿವೇಚನಾಪೂರ್ಣ ನಿರ್ಧಾರಗಳನ್ನು ಕೈಗೊಳ್ಳಬೇಕು. ಮಾದಕ ವ್ಯಸನವನ್ನು ತಡೆಗಟ್ಟಲು ವೈಯಕ್ತಿಕ ಜಾಗೃತಿಯ ಜೊತೆಗೆ ಕುಟುಂಬ, ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜದ ಸಾಮೂಹಿಕ ಹೊಣೆಗಾರಿಕೆಯೂ ಅತ್ಯಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಬೀದಿ ನಾಟಕ ಗಮನ ಸೆಳೆಯಿತು. ಪರಿಣಾಮಕಾರಿ ಸಂಭಾಷಣೆಗಳು ಹಾಗೂ ನೈಜ ಜೀವನದ ಸನ್ನಿವೇಶಗಳ ಮೂಲಕ ಮಾದಕ ವ್ಯಸನದಿಂದ ಉಂಟಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ ಪ್ರದರ್ಶಿಸಲಾಯಿತು. ಸ್ನೇಹಿತರ ಒತ್ತಡಕ್ಕೆ ಮಣಿಯದೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ವ್ಯಸನದಿಂದ ದೂರ ಉಳಿಯುವುದು ಹಾಗೂ ವ್ಯಸನಕ್ಕೆ ಒಳಗಾದವರಿಗೆ ಸೂಕ್ತ ಬೆಂಬಲ ಮತ್ತು ಪುನರ್ವಸತಿ ಒದಗಿಸುವ ಮಹತ್ವವನ್ನು ನಾಟಕದ ಮೂಲಕ ಮನವರಿಕೆ ಮಾಡಿಕೊಡಲಾಯಿತು.

“ಕ್ಷಣಿಕ ಕುತೂಹಲಕ್ಕಾಗಿ ನಿಮ್ಮ ಜೀವನದ ಅನಂತ ಸಾಧ್ಯತೆಗಳನ್ನು ಕಳೆದುಕೊಳ್ಳಬೇಡಿ” ಎಂಬ ಸಂದೇಶವನ್ನು ಸಾರಿದ ಈ ಬೀದಿ ನಾಟಕವು ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಕ್ರಿಯೆ ಮೂಡಿಸಿತು. ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾಗದೆ ತಮ್ಮ ಭವಿಷ್ಯದ ಬಗ್ಗೆ ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿತು.

Leave a Reply

Your email address will not be published. Required fields are marked *