ಮೈಸೂರು:4 ಅಕ್ಟೋಬರ್ 2021
ನ@ದಿನಿ
ಮೈಸೂರಿನ ಉತ್ತನಹಳ್ಳಿ ಗ್ರಾಮದ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಮ್ಮನವರ ದೇವಸ್ಥಾನದ ಕಮಾನು ಬಳಿ ಮದ್ಯದಂಗಡಿ ತೆರೆಯಲು ಉದ್ದೇಶಿಸಿದ್ದು, ಆ ರಸ್ತೆಯಲ್ಲಿ ಓಡಾಡುವ ಗ್ರಾಮಸ್ಥರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಭಕ್ತಾದಿಗಳಿಗೆ ತೊಂದರೆ ಉಂಟಾಗಲಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಉದ್ದೇಶಿಸಿರುವ ಬಾರ್ ಮಾಲೀಕರ ವಿರುದ್ಧ ಸಾರ್ವಜನಿಕರು ಇಂದು ಪ್ರತಿಭಟನೆ ನಡೆಸಿದ್ದಾರೆ.ಸಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ ಸಾರ್ವಜನಿಕರು, ಬಾರ್ ತೆರೆಯದಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತಮ್ಮ ಪ್ರಭಾವವನ್ನು ಬಳಸಿ, ಮಾಲೀಕರು ಬಾರ್ ತೆರೆಯಲು ಮುಂದಾಗಿದ್ದಾರೆ. ಭಕ್ತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಬಾರ್ ತೆರಯಬಾರದು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೇ ಬಾರ್ ಓಪನ್ ಮಾಡಿದ್ದಲ್ಲಿ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಂತರ ಎಪಿಎಂಸಿ ಅಧ್ಯಕ್ಷ ಬಸವರಾಜು ಅವರು, ಈ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕರಾದ ಜಿ.ಟಿ.ದೇವೇಗೌಡ, ಯತೀಂದ್ರ ಸಿದ್ದರಾಮಯ್ಯರಿಗೂ ಕೂಡ ಮನವಿ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಉತ್ತನಹಳ್ಳಿ ಶಿವಣ್ಣ, ಮಂಜುನಾಥ್, ಜ್ಞಾನೇಶ್, ರಂಗಸ್ವಾಮಿ, ಶಿವಬೀರ, ಉತ್ತನಹಳ್ಳಿ ಮಹದೇವಸ್ವಾಮಿ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.