ಗಣಿತ ಜಗತ್ತಿನ ವಿಸ್ಮಯ ಶ್ರೀನಿವಾಸ ರಾಮಾನುಜನ್ : ಸಾಹಿತಿ ಬನ್ನೂರು ರಾಜು

ನಂದಿನಿ ಮೈಸೂರು

ಗಣಿತ ಜಗತ್ತಿನ ವಿಸ್ಮಯ ಶ್ರೀನಿವಾಸ ರಾಮಾನುಜನ್ : ಸಾಹಿತಿ ಬನ್ನೂರು ರಾಜು

ಮೈಸೂರು: ಪ್ರಪಂಚದಲ್ಲಿ ಬಹಳಷ್ಟು ಮಂದಿ ಬದುಕಿದ್ದೂ ಸತ್ತಂತಿರುತ್ತಾರೆ. ಮತ್ತೆ ಕೆಲವರು ಬಹಳ ಅಪರೂಪವೆನ್ನುವಂತೆ ಭೌತಿಕವಾಗಿ ಕಾಲವಾಗಿದ್ದರೂ ವಿಸ್ಮಯದೋಪಾದಿಯ ತಮ್ಮ ಅದ್ಭುತ ಸಾಧನೆಯಿಂದ ಸಾವಿನ ನಂತರವೂ ಜಗತ್ತು ಇರುವ ತನಕವೂ ಶಾಶ್ವತವಾಗಿ ಬದುಕಿರುತ್ತಾರೆ. ಅಂಥವರಲ್ಲಿ ಮೊದಲ ಸಾಲಿನಲ್ಲೇ ಇರುವವರು ಜಗದ್ವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಜೆ ಎಲ್ ಬಿ ರಸ್ತೆಯಲ್ಲಿರುವ ಹಾರ್ಡ್ವೀಕ್ ಪ್ರೌಢಶಾಲೆ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ ಜಗದ್ವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀನಿವಾಸ ರಾಮಾನುಜನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪ್ರಪಂಚದ ಹುಟ್ಟಿನಿಂದಲೂ ಅದರೊಟ್ಟಿಗೆ ಗಣಿತವೂ ಪ್ರಾರಂಭವಾಗಿ ಸಾಗಿ ಬಂದಿದೆ. ಪ್ರತಿಯೊಂದಕ್ಕೂ ಗಣಿತದ ಲೆಕ್ಕಾಚಾರ ಬೇಕೇ ಬೇಕು. ಗಣಿತವಿಲ್ಲದೆ ಬದುಕಿಲ್ಲ. ಗಣಿತವನ್ನು ಕಲಿತವರಿಗೆ ಉಳಿದ ವಿಷಯಗಳೆಲ್ಲಾ ನೀರು ಕುಡಿದಂತೆ. ಆದ್ದರಿಂದ ವಿದ್ಯಾರ್ಥಿಗಳು ರಾಮಾನುಜನ್ ರಂತಹ ಗಣಿತಜ್ಞ ಮಹನೀಯರ ಬದುಕನ್ನು ಮಾದರಿಯಾಗಿಟ್ಟುಕೊಂಡು ಗಣಿತದ ಬಗ್ಗೆ ವಿಶೇಷ ಆಸಕ್ತಿ ಮತ್ತು ಒಲವನ್ನು ಹೊಂದಿ ಕಲಿಯಬೇಕೆಂದರು.
ಗಣಿತ ಬಹಳ ಕಷ್ಟ. ಅದು ಕಬ್ಬಿಣದ ಕಡಲೆ ಎಂಬ ಭಾವನೆ ಬಹಳಷ್ಟು ಮಂದಿಯಲ್ಲಿದೆ. ಆದರೆ ಕನಸು ಮನಸ್ಸಿನಲ್ಲೆಲ್ಲಾ ಅಂಕಿ ಸಂಖ್ಯೆಗಳನ್ನೇ ತುಂಬಿಕೊಂಡು ಗಣಿತವನ್ನೇ ಉಸಿರಾಗಿಸಿಕೊಂಡು ಗಣಿತ ಲೋಕದಲ್ಲಿ ಜಗತ್ತು ಕಂಡರಿಯದಂತಹ ಮಹದದ್ಭುತ ಸಾಧನೆ ಮಾಡಿ ಗಣಿತದಲ್ಲಿ ಅಗಣಿತವನ್ನು ಕಂಡಿದ್ದ ಗಣಿತ ದಾರ್ಶನಿಕ ಶ್ರೀನಿವಾಸ ರಾಮಾನುಜನ್ ಬಗ್ಗೆ ಅರಿತವರಾರೂ ಗಣಿತವನ್ನು ಕಬ್ಬಿಣದ ಕಡಲೆ ಎನ್ನಲಾರರು. ಬದಲಿಗೆ ಗಣಿತ ವೆಂಬುದು ಕಲ್ಲುಸಕ್ಕರೆ ಎಂದು ಖಂಡಿತವಾಗಿಯೂ ಬಾಯಿ ಚಪ್ಪರಿಸುತ್ತಾರೆ.ಕೇವಲ ಮೂವತ್ತೆರಡು ವರ್ಷಗಳು ಮಾತ್ರ ಬದುಕಿದ್ದ ಅಲ್ಪಾಯುಷಿಯಾದರೂ ಶ್ರೀನಿವಾಸ ರಾಮಾನುಜನ್ ಅವರು, ಗಣಿತದಲ್ಲಿ ನೂರು ಜನ್ಮಕ್ಕಾಗುವಷ್ಟು ಸಾಧನೆ ಮಾಡಿ ಅವರು ಎಂದೆಂದಿಗೂ ಜಗತ್ತಿನ ಗಣಿತ ಲೋಕದಲ್ಲಿ ಯಾರೂ ಮುರಿಯದಂತಹ ದಾಖಲೆ ಬರೆದು ಭಾರತದ ಕೀರ್ತಿ ಪತಾಕೆಯನ್ನು ವಿಶ್ವದ ಉದ್ದಗಲಕ್ಕೂ ಹಾರಿಸಿದ್ದಾರೆ. ಹಾಗೆಯೇ ಗಣಿತ ಜಗತ್ತಿನಲ್ಲಿ ಅಮರರಾಗಿದ್ದಾರೆ. ಬಹುಮುಖ್ಯವಾಗಿ ‘ ಪೈ ‘ಎಂಬ ಸಂಖ್ಯೆಯ ನಿರ್ದಿಷ್ಟ ಮೌಲ್ಯವನ್ನು ನಿರ್ಧರಿಸಲು ರಾಮಾನುಜನ್ ಬರೆದಿದ್ದ ವಿಶೇಷ ಸೂತ್ರ ವಿಶ್ವದ ಮಹತ್ವದ ಮೈಲುಗಲ್ಲುಗಳಲ್ಲಿ ಒಂದಾಗಿದೆ. ಮೂವತ್ತೆರಡನೆಯ ಚಿಕ್ಕ ವಯಸ್ಸಿನಲ್ಲಿಯೇ ಅವರು ಸುಮಾರು 3900 ಗಣಿತ ಸೂತ್ರಗಳನ್ನು ರಚಿಸಿದ್ದರಲ್ಲದೆ ಸಾವಿರಾರು ಗಣಿತ ಪ್ರಮೇಯಗಳನ್ನು ಜಗತ್ತಿಗೆ ನೀಡಿದ್ದರು.ಅವರು ಬರೆದು ಪ್ರಕಟಿಸಿದ್ದ ನೂರಾರು ಸಂಶೋಧನಾ ಲೇಖನಗಳು ಮಾತ್ರವಲ್ಲದೆ ನೋಟ್ ಪುಸ್ತಕಗಳಲ್ಲಿ ಅವರು ಬರೆದು ಹೋಗಿದ್ದ ಲೆಕ್ಕವಿಲ್ಲದಷ್ಟು ಗಣಿತ ಸೂತ್ರಗಳು ಹಾಗೂ ಪ್ರಮೇಯಗಳನ್ನು ಕುರಿತು ಇಂದಿಗೂ ದೇಶ ವಿದೇಶಗಳಲ್ಲಿ ಅಧ್ಯಯನಗಳು, ಸಂಶೋಧನೆಗಳು ನಡೆಯುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ಸಂಖ್ಯಾಶಾಸ್ತ್ರಜ್ಞ ಎಸ್. ಜಿ. ಸೀತಾರಾಮ್ ಅವರು ಜಗದ್ವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಬದುಕು, ಸಾಧನೆ, ಸಿದ್ಧಿಯ ಬಗ್ಗೆ ಉಪನ್ಯಾಸ ನೀಡಿದರು. ವಿಶ್ರಾಂತ ಇಂಗ್ಲೀಷ್ ಪ್ರಾಧ್ಯಾಪಕ ಪ್ರೊ. ರಾಮ ನರಸಿಂಹ ಅವರು ವಿದ್ಯಾರ್ಥಿಗಳಿಗೆ ಸುಲಭವಾಗಿ ಇಂಗ್ಲಿಷ್ ಕಲಿಯುವುದರ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ರಾಷ್ಟ್ರೀಯ ಗಣಿತ ದಿನದ ಹಿನ್ನೆಲೆಯಲ್ಲಿ ಗಣಿತ ಬೋಧಕ ಗುರುಭಕ್ತಯ್ಯ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ಖ್ಯಾತ ಶಿಕ್ಷಣ ತಜ್ಞ ಎ.ಸಂಗಪ್ಪ ಅವರು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕಿ ಪುಷ್ಪಲತಾ ಅವರು ಎಲ್ಲರನ್ನು ಸ್ವಾಗತಿಸಿದರು. ಹಾರ್ಡ್ವೀಕ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗುರುಭಕ್ತಯ್ಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಕೃಷ್ಣನಾಯಕ್, ಸಬೀನಾ, ಅಕ್ಕಮಹಾದೇವಿ, ಚಿತ್ರಕಲಾ ಶಿಕ್ಷಕ ಮನೋಹರ್, ಶಿಕ್ಷಣ ಪರ ಚಿಂತಕ ಶ್ರೀಕಂಠ ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *