ಸಾಹಿತಿ ಬನ್ನೂರು ರಾಜು ಅವರ ಸಾಹಿತ್ಯ ಸಾಧನೆಗೆ ‘ರಾಜ್ಯ ಕನ್ನಡಾಂಬೆ ರತ್ನ ಪ್ರಶಸ್ತಿ’
ಮೈಸೂರು: ರಾಜ್ಯದ ಪ್ರಮುಖ ಕನ್ನಡ ಸಂಘಟನೆ ಗಳಲ್ಲೊಂದಾದ ನಗರದ ಹೂಟ ಗಳ್ಳಿಯ ಕನ್ನಡಾಂಬೆ ರಕ್ಷಣಾ ವೇದಿಕೆಯು ನಾಡು-ನುಡಿಗೆ ಗಣನೀಯ ಸೇವೆ ಸಲ್ಲಿಸಿದ ನಾಡಿನ ಸಾಧಕರೊಬ್ಬರಿಗೆ ಪ್ರತಿವರ್ಷ ರಾಜ್ಯಮಟ್ಟದಲ್ಲಿ ‘ಕನ್ನಡಾಂಬೆ ರತ್ನ ಪ್ರಶಸ್ತಿ’ ನೀಡಿ ಪುರಸ್ಕರಿಸುತ್ತಿದ್ದು ಅದರಂತೆ ಪ್ರಸ್ತುತ ವರ್ಷ ಬರಹವನ್ನೇ ಬದುಕು ಮಾಡಿಕೊಂಡು ಸಾಹಿತ್ಯ ಮತ್ತು ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ.ರಾಜು ಅವರ ಸಾಹಿತ್ಯ ಸಾಧನೆಯನ್ನು ಪರಿಗಣಿಸಿ ಅವರನ್ನು ಕನ್ನಡಾಂಬೆ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ಜುಲೈ 25ರಂದು ಬೆಳಿಗ್ಗೆ 10.30 ಕ್ಕೆ ಮೈಸೂರು ನಗರದ ಹೊಸಮಠದ ಶ್ರೀ ನಟರಾಜ ಭವನದಲ್ಲಿ ಏರ್ಪಡಿಸಿರುವ ರಾಜ್ಯಮಟ್ಟದ ಕನ್ನಡಾಂಬೆ ರತ್ನ ಪ್ರಶಸ್ತಿ ಪ್ರದಾನ ಮತ್ತು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಮಸ್ತ ಕನ್ನಡಿಗರ ಪರವಾಗಿ ಸಾಹಿತಿ ಬನ್ನೂರು ಕೆ.ರಾಜು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಹೊಸಮಠದ ಶ್ರೀಗಳಾದ ಪೂಜ್ಯಶ್ರೀ ಚಿದಾನಂದ ಸ್ವಾಮಿ ಗಳ ದಿವ್ಯ ಸಾನಿಧ್ಯದಲ್ಲಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರೂ ಆದ ಕನ್ನಡ ಪರ ಹೋರಾಟಗಾರ ಬಿ.ಬಿ. ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭವನ್ನು ಶ್ರೀಅರ್ಜುನ್ ಅವಧೂತ ಮಹಾರಾಜ್ ಗುರೂಜಿ ಅವರು ಉದ್ಘಾಟಿಸುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ, ಚಲನಚಿತ್ರ ನಟರಾದ ಆದಿ ಲೋಕೇಶ್ ಹಾಗೂ ಸುಪ್ರೀತ್, ಪತ್ರಕರ್ತ ಕರ್ಪೂರವಳ್ಳಿ ಮಹಾದೇವ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಶ್ರೀನಟರಾಜ ಪ್ರತಿಷ್ಟಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ ಮತ್ತು ಕ್ರೆಡಿಟ್-ಐ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಪಿ.ವರ್ಷ ಅವರು ಮುಖ್ಯ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ಪ್ರಸ್ತುತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದಿರುವ 35 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್, ಆತ್ಮಾನ್ ವೆಲ್ನೆಸ್ ನ್ಯಾಚುರೋಪತಿ ಮತ್ತು ಫಿಸಿಯೋಥೆರಪಿಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಬಿ. ಸತೀಶ್, ಕರ್ನಾಟಕ ರಾಜ್ಯ ರೈತರ ಹಾಗೂ ಹಸಿರು ಜನಜಾಗೃತಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕಣೆನೂರ್ ಜಗದೀಶ್, ಪಂಚಾಯತ್ ಗ್ರಾಮೀಣ ಮತ್ತು ರೈತ ಸೇವಾ ಸಮಿತಿ ಅಧ್ಯಕ್ಷ ಯಾದವ್ ಹರೀಶ್, ಕರ್ನಾಟಕ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಎಂ. ಸಿ. ಮಹಾದೇವ್, ಮೈಸೂರು ಲಯನ್ ಗೋಲ್ಡನ್ ಸಿಟಿ ಅಧ್ಯಕ್ಷ ಸುರೇಶ್ ಗೋಲ್ಡ್, ಲಿಂಗಾಯತಗೌಡ ಮಹಾಸಭಾ ರಾಜ್ಯಾಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ಪೊಲೀಸ್ ಸೊಸೈಟಿ ನೌಕರರ ಸಂಘದ ಅಧ್ಯಕ್ಷ ರವಿ, ಪತ್ರಕರ್ತ ಸಿ.ಎಂ. ರಾಮು, ಸಪ್ತಗಿರಿ ಬಿಲ್ಡರ್ಸ್ ನ ಮಂಜುನಾಥ್ ಅತಿಥಿಗಳಾಗಿರುವರು. ವಿಶೇಷ ಆಹ್ವಾನಿತರಾಗಿ ಇಲವಾಲ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಭಾ, ಹೂಟಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ, ಗುಂಗ್ರಾಲ್ ಛತ್ರದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಸಿ. ಉಮಾಶಂಕರ್, ಬಿಗ್ ಬಾಸ್ ಖ್ಯಾತಿಯ ಜಾದು ಕಲಾವಿದೆ ಸುಮಾರಾಜ್ ಕುಮಾರ್ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿರುವರು.