ಪ್ರತಿಯೊಬ್ಬರೂ ಪ್ರಕೃತಿ ಧರ್ಮ ಪಾಲಿಸಬೇಕು : ಸಾಹಿತಿ ಬನ್ನೂರು ರಾಜು

ನಂದಿನಿ ಮೈಸೂರು

ಪ್ರತಿಯೊಬ್ಬರೂ ಪ್ರಕೃತಿ ಧರ್ಮ ಪಾಲಿಸಬೇಕು : ಸಾಹಿತಿ ಬನ್ನೂರು ರಾಜು

ಮೈಸೂರು : ಮನುಷ್ಯ ಜೀವಿ ಇತರೇ ಜೀವಿಗಳಿಗಿಂತ ಅತ್ಯಂತ ಶ್ರೇಷ್ಠವಾಗಿದ್ದು ದಾಸವರೇಣ್ಯರು ಹೇಳಿರುವಂತೆ ಮಾನವ ಜನ್ಮ ದೊಡ್ಡದು. ಇದನ್ನು ಹಾಳು ಮಾಡಿಕೊಳ್ಳದೆ ಸಾರ್ಥಕವಾಗಿ ಆಯುರಾರೋಗ್ಯದಿಂದ ಬದುಕಿ ಬಾಳಬೇಕೆಂದರೆ ಪರಿಸರ ಮತ್ತು ಪ್ರಕೃತಿಗೆ ಹಾನಿಯಾಗದಂತೆ ಕಾಪಾಡಿಕೊಳ್ಳಬೇಕೆಂದು ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ.ರಾಜು ಹೇಳಿದರು.

ಅತ್ಯುತ್ತಮ ವಿದ್ಯಾರ್ಥಿಗಳನ್ನು ಸೃಷ್ಠಿಸುವ ಶ್ರೇಷ್ಠತಮ ಕಲಿಕಾ ಸ್ಥಳವೆಂದೇ ಹೆಸರಾಗಿರುವ ಜಿಲ್ಲೆಯ ಹುಣಸೂರು ತಾಲೂಕಿನ ಮನುಗನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಮತ್ತು ಮೈಸೂರಿನ ಪ್ರತಿಷ್ಠಿತ ಸಾಹಿತ್ಯ ಮತ್ತು ಶಿಕ್ಷಣ ಸೇವಾ ಸಂಸ್ಥೆಗಳಾದ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗವು ಸಂಯುಕ್ತವಾಗಿ ಮನುಗನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ಪರಿಸರದಲ್ಲಿ ಏನಿಲ್ಲ ಎನ್ನುವಂತಿಲ್ಲದೆ ಇಲ್ಲಿ ಕಲಿಯಲು, ಕಲಿಸಲು, ಕಲಿತು ಬದುಕು ಕಟ್ಟಿಕೊಳ್ಳಲು, ಅನುಭವಿಸಲು, ಅನುಭಾವಿಸಲು ಇಲ್ಲಿ ಎಲ್ಲವೂ ಇದ್ದು ಮನುಷ್ಯ ಜನ್ಮವನ್ನು ಪಾವನಗೊಳಿಸುವ ಮಹಾ ಪಾಠ ಶಾಲೆಯಾಗಿದ್ದು ಇಂತಹ ಪ್ರಕೃತಿಯನ್ನು, ಪರಿಸರವನ್ನು ಪ್ರತಿಯೊಬ್ಬರೂ ಹೆತ್ತ ತಾಯಿ ಯಂತೆ ಸಂರಕ್ಷಿಸಿ ಕೊಳ್ಳ ಬೇಕೆಂದರು.

ಇದಕ್ಕೂ ಮುನ್ನ ವಿಶ್ವ ಪರಿಸರ ದಿನಾಚರಣೆಯ ದ್ಯೋತಕವಾಗಿ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರೊಡನೆ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ಘಾಟಿಸಿದ ವಿಶ್ರಾಂತ ಇಂಜಿನಿಯರ್ ಮನುಗನಹಳ್ಳಿ ಎಸ್. ಗೋವಿಂದೇಗೌಡ ಅವರು ಮಾತನಾಡಿ, ಈ ಶಾಲೆಯು ಮನುಗನಹಳ್ಳಿಗೆ ಮಾತ್ರವಲ್ಲದೆ ಇಡೀ ತಾಲ್ಲೂಕಿನ ಕೀರ್ತಿ ಕಳಸದಂತಿದ್ದು ಇಂತಹ ಕೀರ್ತಿಗೆ ವಿದ್ಯಾರ್ಥಿಗಳಿಗೆ ಗುರುಗಳು ಮಾತ್ರವಲ್ಲದೆ ಮಾತೃ ಸ್ವರೂಪದಂತಿರುವ ಶಾಲೆಯ ಎಲ್ಲಾ ಒಂಬತ್ತು ಮಂದಿ ಶಿಕ್ಷಕಿಯರ ಹಾಗು ಶಾಲಾ ಸಿಬ್ಬಂದಿ ವರ್ಗದ ವಿದ್ಯಾರ್ಥಿಪರ ಕಾಳಜಿ ಮತ್ತು ಪರಿಶ್ರಮವೇ ಕಾರಣವೆಂದು ಶಾಲೆಗೆ ಉತ್ತಮ ಫಲಿತಾಂಶ ತಂದು ಕೊಟ್ಟವರೆಲ್ಲರನ್ನೂ ಶ್ಲಾಘಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಚಿತ್ರ ಹಾಗು ನೃತ್ಯ ಕಲಾವಿದೆಯೂ ಆದ ಲೇಖಕಿ ಡಾ.ಜಮುನಾರಾಣಿ ಮಿರ್ಲೆ ಅವರು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲೂ ವಿದ್ಯಾರ್ಥಿ ಬದುಕು ಬಹಳ ಮುಖ್ಯವಾದದ್ದು. ಹಾಗೆಯೇ ಇಲ್ಲಿ ಸಿಗುವ ಗೆಳೆತನವೂ ಅಷ್ಟೇ ಮಹತ್ತರವಾದದ್ದೆಂದ ಅವರು, ಇದಕ್ಕೆ ಪೂರಕವಾಗಿ ಪುಟ್ಟ ಕಥೆಯೊಂದನ್ನು ಹೇಳಿ ಕಲಿಕೆಯ ಹಾದಿಯಲ್ಲಿನ ಒಳ್ಳೆಯ ಸ್ನೇಹದ ಸದುಪಯೋಗದ ಮಹತ್ವವನ್ನು ತಿಳಿಸಿಕೊಟ್ಟರು. ವಿಶ್ರಾಂತ ಶಿಕ್ಷಕಿ ಯೂ ಆದ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಮಾತನಾಡಿ,ಪಠ್ಯದ ಜೊತೆ ಜೊತೆಗೆ ಪತ್ಯೇತರ ಚಟುವಟಿಕೆ ಗಳಲ್ಲೂ ವಿದ್ಯಾರ್ಥಿಗಳು ಆಸಕ್ತಿ ತಾಳಬೇಕೆಂದ ಅವರು, ಸುಂದರವಾದ ಭಾವ ಗೀತೆಯೊಂದನ್ನು ಸುಶ್ರಾವ್ಯವಾ ಗಿ ಹಾಡಿ ಎಲ್ಲರ ಗಮನ ಸೆಳೆದರು.

ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿ ತೇರ್ಗಡೆಯಾಗಿರುವ ಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿಯರಾದ ಸಂಜು, ರಂಜಿತಾ, ಕೆ.ಎಂ.ಸ್ಮಿತಾ, ಹಾಗು ತೇಜಸ್ವಿನಿ ಅವರುಗಳಿಗೆ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ವತಿಯಿಂದ ಮತ್ತು ಮುಖ್ಯ ಶಿಕ್ಷಕಿ ಸಿ.ಎನ್. ಗೀತಾ ಅವರ ಪುತ್ರಿ ಕುಮಾರಿ ವಿಂಧ್ಯಾ ಅವರ ನೆರವಿನಿಂದ ಪ್ರೋತ್ಸಾಹಕರವಾಗಿ ನಗದು ಪುರಸ್ಕಾರ ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಚಿತ್ರ ಕಲಾ ಸ್ಪರ್ಧೆಯಲ್ಲಿ ವಿಜೇತರಾದ 8 ನೇ ತರಗತಿ ವಿದ್ಯಾರ್ಥಿಗಳಾದ ಸತ್ಯಪ್ರಿಯ (ಪ್ರ),ಯಶ್ವಂತ್(ದ್ವಿ), ವರ್ಷಾಗೌಡ (ತೃ), ತನುಶ್ರೀ (ಸ), ಗೀತ ಗಾಯನ ಸ್ಪರ್ಧೆಯಲ್ಲಿ 9ನೇ ತರಗತಿಯ ಶೃತಿ (ಪ್ರ), ಸೋಮಾಚಾರಿ (ದ್ವಿ), ಶ್ರೇಯಶ್ (ತೃ), ಶಿವಕುಮಾರ್ (ಸ), ಭಾಷಣ ಸ್ಪರ್ಧಯಲ್ಲಿ 10ನೇ ತರಗತಿಯ ರಕ್ಷಿತಾ (ಪ್ರ), ರೇವತಿ (ದ್ವಿ), ಸಿ.ಆರ್. ಶ್ವೇತಾ (ತೃ), ಶ್ರೇಯಶ್ (ಸ), ಅವರುಗಳಿಗೆ ಪ್ರಸಿದ್ಧ ಸಂಖ್ಯಾ ಶಾಸ್ತ್ರಜ್ಞ ಎಸ್.ಜಿ. ಸೀತಾರಾಂ ಅವರು ಬಹುಮಾನ ವಿತರಣೆ ಮಾಡಿ ಗೌರವಿಸಿದರು. ನಂತರ ಅವರು ವಿಶ್ವ ಪರಿಸರ ದಿನಾಚರಣೆ ಕುರಿತಂತೆ ಸುದೀರ್ಘವಾದ ಉಪನ್ಯಾಸ ನೀಡಿ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ವೈಜ್ಞಾ ನಿಕವಾಗಿ ಹಲವಾರು ವಿಷಯಗಳನ್ನು ವಿದ್ಯಾರ್ಥಿ ಗಳಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಸ್ತುತ ಪಡಿಸಿದರು.

ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ವಿಶ್ರಾಂತ ಶಿಕ್ಷಕ ಎ.ಸಂಗಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನೇಕ ಉಪಯುಕ್ತ ಮಾಹಿತಿ ಗಳನ್ನು ತಿಳಿಸಿ ಕೊಟ್ಟರಲ್ಲದೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಸಿ.ಎನ್.ಗೀತಾ ಅವರು ಅಧ್ಯಕ್ಷೀಯ ಭಾಷಣ ಮಾಡಿ ಕಲಿಕೆಯ ಬಗ್ಗೆ ಮಕ್ಕಳಿಗೆ ಕಿವಿ ಮಾತು ಹೇಳಿದರು. ಪ್ರಾರಂಭದಲ್ಲಿ ಶಿಕ್ಷಕಿ ಎಂ.ಜಿ. ಪುಷ್ಪ ಅವರು ಪರಿಚಯಾತ್ಮಕವಾಗಿ ಗಣ್ಯರೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕಿ ಎಸ್.ಎಸ್.ಚಂದ್ರಕಲಾ ವಂದನಾರ್ಪಣೆ ಮಾಡಿದರು.ಒಟ್ಟಾರೆ ಇಡೀ ಕಾರ್ಯಕ್ರಮವನ್ನು ಶಿಕ್ಷಕಿ ಜೆ.ವಸಂತಕುಮಾರಿ ಅಚ್ಚುಕಟ್ಟಾಗಿ ನಿರೂಪಿಸಿದರು. ಶಿಕ್ಷಕಿಯರಾದ ಎಚ್. ಶಶಿಕಲಾ, ಎಂ.ಜಿ.ಪುಷ್ಪ, ಸಿ.ಎಸ್.ರಮಾ, ಎಸ್. ಎಸ್. ಚಂದ್ರಕಲಾ, ಸೌಮ್ಯ ಅರವಿಂದ ನಾಯಕ್, ಜೆ.ವಸಂತಕುಮಾರಿ, ಎಚ್.ಸಿ. ಪಲ್ಲವಿ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *