ನಂದಿನಿ ಮೈಸೂರು
ಬಾಲ ಕಾರ್ಮಿಕ ಪದ್ಧತಿ ದೇಶಕ್ಕೆ ಅಪಾಯಕಾರಿ : ಸಾಹಿತಿ ಬನ್ನೂರು ರಾಜು
ಮೈಸೂರು: ಕಾರ್ಮಿಕರು ದೇಶದ ಬಹುದೊಡ್ಡ ಶಕ್ತಿ ಹಾಗೂ ಆಸ್ತಿಯಾಗಿದ್ದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದಾರೆ,ಆದರೆ ಬಾಲ ಕಾರ್ಮಿಕರು ಇದಕ್ಕೆ ವ್ಯತಿರಿಕ್ತವಾಗಿದ್ದು ಎಲ್ಲಾ ರೀತಿಯಲ್ಲೂ ದೇಶಕ್ಕೆ ಮಾರಕವಾಗಿದ್ದು ಅಪಾಯಕಾರಿ ಗಿದ್ದಾರೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಮಕ್ಕಳ ಸಹಾಯವಾಣಿ 1098 ಮೈಸೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ವಿನೋಬಾ ರಸ್ತೆಯಲ್ಲಿರುವ ಕರ್ಣಾಟಕ ಕಲಾ ಮಂದಿರದಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ(ಜೂ.12) ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ಅನೇಕ ಅನಿಷ್ಠ ಪದ್ಧತಿಗಳಿದ್ದು ಅವುಗಳಲ್ಲೊಂದಾದ ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆ ಯಾಗಬೇಕೆಂದರೆ ಅದು ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲವಾಗಿದ್ದು ಪ್ರತಿಯೊಬ್ಬ ನಾಗರೀಕರೂ ಪ್ರಜ್ಞಾವಂತರಾಗಿ ಸರ್ಕಾರದೊಡನೆ ಕೈಜೋಡಿಸಿ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ದೊಡ್ಡ ಮಟ್ಟದಲ್ಲಿ ಜನಜಾಗೃತಿ ಮೂಡಿಸಬೇಕೆಂದರು.
ಬಾಲ ಕಾರ್ಮಿಕ ಪದ್ಧತಿಗೆ ಬಹು ಮುಖ್ಯವಾಗಿ ಅನಕ್ಷರತೆ, ಹಸಿವು, ಬಡತನ, ಅಜ್ಞಾನ ಬಹಳ ಮಟ್ಟಿಗೆ ಕಾರಣವಾಗಿದ್ದು ಒಂದು ಕಾಲಕ್ಕೆ ಇದು ಹೆಚ್ಚಾಗಿ ಕಾಡುತ್ತಿತ್ತು. ಆದರೆ ಈಗ ಕಾಲ ಮೊದಲಿನಂತಿಲ್ಲ. ಇವತ್ತಿನ ಕಾಲ ಘಟ್ಟದಲ್ಲಿ ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಿ ಬಾಲ ಕಾರ್ಮಿಕರಾಗಿ ಬೀದಿಗೆ ಬೀಳಬಾರದೆಂದು ನಮ್ಮ ಸರ್ಕಾರಗಳು ಸಾಕಷ್ಟು ಬಡವರ ನೆರವಿಗೆ ಬರುತ್ತಿದ್ದು ಅದರಲ್ಲೂ ವಿಶೇಷವಾಗಿ ಓದುವ ಮಕ್ಕಳಿಗೆ ಶಿಕ್ಷಣ,ಆರೋಗ್ಯ,ಊಟ,ವಸತಿ, ಪುಸ್ತಕ,ಬಟ್ಟೆ, ಶೂ, ಹೀಗೆ ಎಲ್ಲವನ್ನೂ ಸಂಪೂರ್ಣವಾಗಿ ಉಚಿತವಾಗಿ ಒದಗಿಸುತ್ತಿವೆ. ಹಾಗಾಗಿ ಪೋಷಕರು ಇದನ್ನು ಸದುಪಯೋಗ ಪಡಿಸಿಕೊಂಡು ಓದಬೇಕಾದ ತಮ್ಮ ಮಕ್ಕಳನ್ನು ದುಡಿಮೆಗೆ ದೂಡದೆ ಹಾಗೂ ಅವರು ಶಾಲೆಗೆ ಹೋದರೆಷ್ಟು ಬಿಟ್ಟರೆಷ್ಟೆಂಬ ಉಡಾಫೆಯ ಬೇಜವಾಬ್ದಾರಿ ಮಾಡದೆ ಮಕ್ಕಳನ್ನು ದುಡಿಮೆ ಬಿಡಿಸಿ ಶಾಲೆಗೆ ಸೇರಿಸಿ ಬಾಲ ಕಾರ್ಮಿಕ ಪದ್ಧತಿಗೆ ತಿಲಾಂಜಲಿ ಹೇಳಬೇಕೆಂದು ತಿಳಿಸಿದರು.
ದೀಪ ಹಚ್ಚಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎಸ್. ಸಂಗ್ರೇಶಿ ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆಂಬ ಉದ್ದೇಶದಿಂದ ಕಳೆದ 20 ವರ್ಷದಿಂದ ಪ್ರತಿವರ್ಷ ಜೂನ್ 12ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. 14 ವರ್ಷದಿಂದ 18 ವರ್ಷಗಳ ವಯೋಮಾನದ ಮಕ್ಕಳನ್ನು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಎಂದು ಗುರುತಿಸಲಾಗಿದ್ದು ಇಂತಹ ಮಕ್ಕಳನ್ನು ಯಾವುದೇ ರೀತಿಯ ಮನೆ ಕೆಲಸ, ಕೃಷಿ, ಹೋಟೆಲ್, ಲಾಡ್ಜ್, ಕಾರ್ಖಾನೆಗಳಂತಹ ಅಪಾಯಕಾರಿ ಕೆಲಸಗಳಿಗೆ ಬಳಸಿಕೊಳ್ಳುವಂತಿಲ್ಲ. ಆದ್ದರಿಂದ ಅಂತಹ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ 1983 ರಲ್ಲಿ ಕಾರ್ಮಿಕ ಕಾಯ್ದೆ ಜಾರಿಗೆ ಬಂದಿದ್ದು ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದ ಅವರು, ಇನ್ನೂ ಈ ಪದ್ಧತಿ ಜೀವಂತವಾಗಿದ್ದು ಇದರ ನಿರ್ನಾಮಕ್ಕೆ ಎಲ್ಲರೂ ಪಣ ತೊಡಬೇಕೆಂದು ಹೇಳಿದರು.
ಅಧ್ಯಕ್ಷ ನುಡಿಗಳನ್ನಾಡಿದ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಅವರು ಸಾಮಾಜಿಕ ಪಿಡುಗಾದ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಶಿಕ್ಷಣದ ಅವಶ್ಯಕತೆ ಬಹಳ ಇದೆ. ಮಕ್ಕಳನ್ನು ವಿದ್ಯಾ ವಂತರನ್ನಾಗಿಸಲು ಪೋಷಕರ ಪ್ರೋತ್ಸಾಹ ಅತ್ಯಗತ್ಯ. ಶಾಲೆ ಬಿಡಿಸಿ ಹೊರಗಡೆ ಮಕ್ಕಳಿಂದ ಅಪಾಯಕಾರಿ ಕೆಲಸಗಳನ್ನು ಮಾಡಿಸುವುದು ಅಪರಾಧ. ಇಂತಹದ್ದನ್ನು ತಡೆಗಟ್ಟಬೇಕು. ದೇಶ ಸುಭದ್ರವಾಗಿರಬೇಕಾದರೆ ಮಕ್ಕಳ ಕನಸುಗಳನ್ನು ಸಾಕಾರಗೊಳಿಸುವಂತಹ ವಾತಾವರಣ ನಿರ್ಮಿಸಿ ಅವರಲ್ಲಿ ಸುರಕ್ಷಿತ ಭಾವನೆ ಮೂಡಿಸಬೇಕು.ಹಣವಂತರು ಇಂತಹ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು.ಮೈಸೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ರಾದ ಬಿ. ಜಿ. ದಿನೇಶ್ ಅವರು ಬಾಲ ಕಾರ್ಮಿಕ ಪದ್ಧತಿಯ ಆಗು ಹೋಗುಗಳ ಬಗ್ಗೆ ಸವಿವರವಾಗಿ ಮಾತನಾಡಿದರು. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿಯಾದ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ ಅವರು ನೆರೆದಿದ್ದ ನೂರಾರು ಮಂದಿಗೆ ಪ್ರಮಾಣವಚನ ಬೋಧಿಸಿದರು.
ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋಟ್, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಎಂ. ಗಾಯತ್ರಿ, ಪೊಲೀಸ್ ಅಧೀಕ್ಷಕಿ ಸೀಮಾ ಲಾಟ್ಕರ್, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕಿ ಸರಸ್ವತಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಕಮಲಾ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಜ್ಞಾನ ಜ್ಯೋತಿ ಸಂಸ್ಥೆಯ ಕಾರ್ಯದರ್ಶಿ ಹೇಮಾವತಿ, ಡಾನ್ ಬಾಸ್ಕೋ ಮಕ್ಕಳಾಲಯದ ನಿರ್ದೇಶಕ ಸಿಜು ಥಾಮಸ್, ಮಡಿಲು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ್, ಕಾರ್ಮಿಕ ಅಧಿಕಾರಿಗಳಾದ ರಾಜೇಶ್ ಕೆ.ಜಾಧವ್, ಹೆಚ್.ಪಿ. ಮಲ್ಲಿಕಾರ್ಜುನ,ರವಿಕುಮಾರ್, ಹಿರಿಯ ಕಾರ್ಮಿಕ ನಿರೀಕ್ಷಕ ಜಗನ್ನಾಥ್ ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ವೇದಿಕೆಯಲ್ಲಿ ಗಣ್ಯರು ಬಹುಮಾನ ವಿತರಿಸಿದರು.
ಬಾಲ ಕಾರ್ಮಿಕ ಪದ್ಧತಿಯನ್ನು ವಿರೋಧಿಸಿ ಶಾಲೆಗೆ ಸೇರಿ ಚೆನ್ನಾಗಿ ಕಲಿತು ಸಾಧನೆಯತ್ತ ಮುನ್ನಡೆದು ಇತರರಿಗೆ ಮಾದರಿಯಾಗಿರುವ ವಿದ್ಯಾರ್ಥಿಗಳಾದ ನಯನಕುಮಾರಿ, ಸೌಂದರ್ಯ, ಮತ್ತು ಹ್ಯಾರಿ ಅವರು ಸ್ಪೂರ್ತಿ ದಾಯಕವಾಗಿ ಮಾತನಾಡಿ ತಮ್ಮ ಅನುಭವವನ್ನು ಹಂಚಿಕೊಂಡು ಗಣ್ಯರೊಡನೆ ಎಲ್ಲರ ಮೆಚ್ಚುಗೆ ಗಳಿಸಿದರು.
ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಎದುರಿನ ಓವಲ್ ಮೈದಾನದಿಂದ ಕಲಾಮಂದಿರದವರೆಗೆ ವಿವಿಧ ಶಾಲೆಗಳ ನೂರಾರು ಮಕ್ಕಳಿಂದ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಜಾಥಾ ನಡೆಯಿತು. ಎಲ್ಲಾ ಮಕ್ಕಳು ಜಾಥಾದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ವಿರೋಧಿಸುವ ಬಿತ್ತಿ ಚಿತ್ರಗಳನ್ನು ಹಿಡಿದು ಮಕ್ಕಳ ಸಹಿತ ಸಾರ್ವಜನಿಕರ ಗಮನ ಸೆಳೆದರು. ಒಟ್ಟಾರೆ ಇಡೀ ಕಾರ್ಯಕ್ರಮವನ್ನು ಖ್ಯಾತ ಜಾದು ಕಲಾವಿದೆ ಸುಮಾರಾಜ್ ಕುಮಾರ್ ಅವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿ ವಿಶೇಷವಾಗಿ ನೆರೆದಿದ್ದ ಮಕ್ಕಳನ್ನು ಖುಷಿ ಪಡಿಸಿದರು.