ನಂದಿನಿ ಮೈಸೂರು
ಚಾಮುಂಡಿಬೆಟ್ಟ ಸ್ವಚ್ಛಗೊಳಿಸಿದ ಮೈಸೂರು ತಾಲ್ಲೂಕು ಪಂಚಾಯತ್ ಸಿಬ್ಬಂದಿ
ಮೈಸೂರು, ಜೂ.13:- ಆಷಾಢ ಮಾಸದ ಹಿನ್ನೆಲೆ ಚಾಮುಂಡಿಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮೈಸೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್ ಅವರ ನೇತೃತ್ವದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಮಂಗಳವಾರ ಸ್ವಚ್ಛತಾ ಕಾರ್ಯ ನೆರವೇರಿಸಿದರು.
ಬೆಟ್ಟದ ಪಾದದಿಂದ ದೇವಾಲಯದವರೆಗೂ ಮೆಟ್ಟಿಲುಗಳನ್ನು ಗುಡಿಸಿ, ಮುಳ್ಳಿನ ಗಿಡ ತೆರವುಗೊಳಿಸಿ, ಮಾರ್ಗ ಮಧ್ಯೆದಲ್ಲಿ ಬಿಸಾಡಿದ್ದ ನೀರಿನ ಬಾಟಲ್, ಪ್ಲಾಸ್ಟಿಕ್ ಪೇಪರ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತ ವಿಲೇವಾರಿ ಮಾಡಿದರು.
ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್ ಅವರು ಮಾತನಾಡಿ, ಆಷಾಢ ಮಾಸದ ದಿನಗಳಂದು ವಾಡಿಕೆಯಂತೆ ಭಕ್ತರು ಹಾಗೂ ವಿವಿಧ ಹರಕೆ ಹೊತ್ತವರು ಮೆಟ್ಟಿಲುಗಳನ್ನು ಹತ್ತುವ ಮೂಲಕ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯುತ್ತಾರೆ. ಈ ಹಿನ್ನೆಲೆ ಬೆಟ್ಟವು ಸ್ವಚ್ಛವಾಗಿರಬೇಕು ಹಾಗೂ ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್ ವಸ್ತುಗಳಿಂದ ಮುಕ್ತಗೊಳಿಸಬೇಕು ಎಂಬ ನಿಟ್ಟಿನಲ್ಲಿ ನಮ್ಮ ಗ್ರಾಮ ಪಂಚಾಯಿತಿಗಳ ಪೌರಕಾರ್ಮಿಕರು, ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಜೊತೆಗೂಡಿ ಸ್ವಚ್ಛಗೊಳಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರ ಮಾರ್ಗದರ್ಶನದಂತೆ ಈ ಹಿಂದೆಯೂ ಚಾಮುಂಡಿಬೆಟ್ಟದಲ್ಲಿ ವರ್ತಕರ ಸಭೆ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆಗೆ ನೀಡದಂತೆ ಮನವರಿಕೆ ಮಾಡಲಾಗಿದೆ. ಅದರಂತೆ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಹಾಗೂ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ನಮ್ಮ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಚ್ಛಗೊಳಿಸಿದ್ದು ಹೆಮ್ಮೆಯ ವಿಚಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್‌ಡಿಎ, ಡಿಇಒ ಗಳು, ಪೌರಕಾರ್ಮಿಕ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.