ಹುತಾತ್ಮ ಯೋಧರ ಪೋಷಕರಿಂದ ಧ್ವಜಾರೋಹಣ

 

ಮೈಸೂರು:15 ಆಗಸ್ಟ್ 2022

ನಂದಿನಿ ಮೈಸೂರು

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಗ್ರಾ‌ಮೀಣ ಭಾಗದ ಜಲಮೂಲಗಳನ್ನು ಸಂರಕ್ಷಿಸುವ ಸಲುವಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಳ್ಳಲಾದ ‘ಅಮೃತ ಸರೋವರ’ ಕಾರ್ಯಕ್ರಮದಲ್ಲಿ ಮೈಸೂರು ತಾಲ್ಲೂಕಿನಲ್ಲಿ ಅಭಿವೃದ್ಧಿಪಡಿಸಿದ ನಾಲ್ಕು ಕೆರೆ ದಂಡೆಯಲ್ಲಿ ಹುತಾತ್ಮ ಯೋಧರ ಕುಟುಂಬದವರಿಂದ ಧ್ವಜಾರೋಹಣ ನೆರವೇರಿಸಲಾಯಿತು.

ತಾಲ್ಲೂಕಿನ ಗುಂಗ್ರಾಲ್ ಛತ್ರ ಗ್ರಾ.ಪಂ. ವ್ಯಾಪ್ತಿಯ ದಡದಕಲ್ಲಹಳ್ಳಿ ಗ್ರಾಮದ ಬಚ್ಚಲಗೆರೆ, ಡಿ.ಎಂ.ಜಿ.ಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾದಳ್ಳಿ ಕೆರೆ, ಬೀರಿಹುಂಡಿ ಗ್ರಾ.ಪಂ. ವ್ಯಾಪ್ತಿಯ ಕುಮಾರಬೀಡು ಗ್ರಾಮದ ಗೆಂಡೆಕೆರೆ ಹಾಗೂ ಗೋಪಾಲಪುರ ಗ್ರಾ‌.ಪಂ.ವ್ಯಾಪ್ತಿಯ ನಗರ್ತಹಳ್ಳಿ ಕೆರೆಯ ಬಳಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಈ ವೇಳೆ ದಡದಕಲ್ಲಹಳ್ಳಿ ಗ್ರಾಮದ ಬಚ್ಚಲಗೆರೆ ದಂಡೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಹುತಾತ್ಮ ಯೋಧ ಎ.ಪಿ.ಪ್ರಶಾಂತ್ ಅವರ ತಂದೆ ಪೊನ್ನಪ್ಪ ಮಾತನಾಡಿ, ನಮ್ಮ ಹಿರಿಯ ಮಗ ಬಾಲ್ಯದಲ್ಲೇ ಸೇನೆಗೆ ಸೇರಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ. ಈ ಅವಧಿಯಲ್ಲಿ ಎಂಟು ಪದಕಗಳನ್ನು ಪಡೆದುಕೊಂಡಿದ್ದ. ಜಮ್ಮುವಿನ ಸುರಾನ್ ಕೋಟ್ ಜಿಲ್ಲೆಯ ಮಕ್ಸಂದರ್ ಗ್ರಾಮದಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಹುತಾತ್ಮನಾದ ಎಂದು ಸ್ಮರಿಸಿದರು.

ನಮ್ಮ ಮಗ ಸೇನೆಯಲ್ಲಿದ್ದ ಎಂಬುದೇ ನಮಗೆ ಹೆಮ್ಮೆಯ ಸಂಗತಿ. ಆತನ ತಂದೆ ತಾಯಿಯಾಗಿದ್ದಕ್ಕೆ ಇಂತಹ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರಕಿತು. ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ್ದು ಅವಿಸ್ಮರಣೀಯ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಪಂಚಾಯತ್‌ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಕೆ.ಎಂ.ರಘುನಾಥ್ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ 75ನೇ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ಸರ್ಕಾರವು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಜಲಮೂಲ ರಕ್ಷಣೆ ಮಾಡುವಂಥ ಕಾರ್ಯಕ್ರಮಗಳು ಮಹತ್ವದ್ದು ಎಂದು ಹೇಳಿದರು.

ಅಮೃತ ಸರೋವರ ಕಾರ್ಯಕ್ರಮದಡಿ ಗ್ರಾಮೀಣ ಭಾಗದ ಕೆರೆಗಳನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಗ್ರಾ.ಪಂ ವ್ಯಾಪ್ತಿಯ ಕೆರೆಗಳನ್ನು ಉತ್ತಮವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಡಿ.ಗಿರೀಶ್, ಹುತಾತ್ಮ ಯೋಧರ ತಾಯಿ ಸರೋಜ, ಗುಂಗ್ರಾಲ್ ಛತ್ರ ಗ್ರಾ. ಪಂ. ಅಧ್ಯಕ್ಷರಾದ ಲೀಲಾವತಿ, ಉಪಾಧ್ಯಕ್ಷರಾದ ಮಂಜುಳಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್, ಕಾರ್ಯದರ್ಶಿ ದಿವ್ಯಾ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *