ನಂದಿನಿ ಮೈಸೂರು
ಮೇ 2ರಂದು ಸೋಮಣ್ಣ ಪರ ಅಮಿತ್ ಶಾ ಮತಯಾಚನೆ
ಮೈಸೂರು:ಮೈಸೂರಿನ ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಖಾಡಕ್ಕೆ ಇಳಿಯಲಿದ್ದಾರೆ.
ಮೇ 2ರಂದು ಕ್ಷೇತ್ರ ವ್ಯಾಪ್ತಿಯ ಹೊಸಕೋಟೆ ಬಳಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದು, ಅದಕ್ಕಾಗಿ ವೇದಿಕೆಯ ಸಿದ್ದತೆ ಭರದಿಂದ ಸಾಗಿದೆ.
ರಾಜ್ಯದ ಆಕರ್ಷಕ ವಿಧಾನಸಭಾ ಕ್ಷೇತ್ರಗಳ ಪೈಕಿ ವರುಣ ಕ್ಷೇತ್ರವು ಪ್ರಮುಖವಾಗಿದ್ದು, ಹೈವೋಲ್ಟೇಜ್ ಕ್ಷೇತ್ರವೆನಿಸಿದೆ. ಆ ಕಾರಣಕ್ಕಾಗಿ ಅಮಿತ್ ಶಾ ಅವರ ಆಗಮನ ಬಿಜೆಪಿ ಪಾಳೆಯದಲ್ಲಿ ಸಂಚಲನ ಮೂಡಿಸಿದೆ.
ಸಮಾವೇಶ ಹಿನ್ನೆಲೆಯಲ್ಲಿ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ, ಮುಖಂಡ ಎಸ್ಎಂಪಿ ಶಿವಪ್ರಕಾಶ್ ಸೇರಿದಂತೆ ಹಲವು ಪ್ರಮುಖರು ಭಾನುವಾರ ಸಮಾವೇಶದ ಸಿದ್ದತೆ ಕುರಿತು ಸ್ಥಳ ಪರಿಶೀಲನೆ ನಡೆಸಿದರು.
ಇಂದಿನಿಂದ ಸೋಮಣ್ಣ ಪರ ನಟ ಶಶಿಕುಮಾರ್ ಪ್ರಚಾರ
ಮೈಸೂರು:
ತೀವ್ರ ಕುತೂಹಲ ಕೆರಳಿಸಿರುವ ವರುಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡಕ್ಕೆ ತಾರಾ ಬಳಗ ಧುಮುಕಿದೆ.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಪರವಾಗಿ ನಟ ಹಾಗೂ ಲೋಕಸಭಾ ಮಾಜಿ ಸದಸ್ಯ ಶಶಿಕುಮಾರ್ ಅವರು ಮೇ ೧ರ ಸೋಮವಾರ ಪ್ರಚಾರ ಕೈಗೊಳ್ಳಲಿದ್ದು, ಮೇ.೩ರವರೆಗೆ ಕ್ಷೇತ್ರದಾದ್ಯಂತ ಸಂಚರಿಸಲಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಸಂಚರಿಸುವ ಅವರೊಂದಿಗೆ ಮೇಯರ್ ಶಿವಕುಮಾರ್, ಮುಖಂಡರಾದ ಅಪ್ಪಣ್ಣ, ಕಂಬ್ರಹಳ್ಳಿ ಸುಬ್ಬಣ್ಣ ಮತ್ತಿತರರು ಉಪಸ್ಥಿತರಿರುವರು.
ಮೇ.೧ರಿಂದ ಸೋಮಣ್ಣ ಪರ ಕೆ.ಶಿವರಾಂ ಮತಯಾಚನೆ
ಮೈಸೂರು:
ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಪರವಾಗಿ ಮೇ.೧ರಿಂದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಕೆ.ಶಿವರಾಂ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ.
ಪಕ್ಷದ ಪ್ರಮುಖರೊಂದಿಗೆ ಕ್ಷೇತ್ರದಾದ್ಯಂತ ಸೋಮಣ್ಣ ಅವರ ಪರವಾಗಿ ಪ್ರಚಾರ ಕಾರ್ಯ ಕೈಗೊಳ್ಳಲಿರುವ ಅವರು ಬೀದಿ ಬೀದಿಗಳಲ್ಲಿ ಪಾದಯಾತ್ರೆ ಮಾಡಲಿದ್ದಾರೆ.
ತಗಡೂರು ಗ್ರಾಮದಲ್ಲಿ ಶ್ರೀನಿವಾಸಪ್ರಸಾದ್ ನೇತೃತ್ವದಲ್ಲಿ ಮೇ ೧ರಂದು ಮಹತ್ವದ ಸಭೆ
ಮೈಸೂರು:
ಲೋಕಸಭಾ ಸದಸ್ಯ ವಿ.ಶ್ರೀನಿವಾಸಪ್ರಸಾದ್ ಅವರು ಸೋಮವಾರ (ಮೇ.೧) ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಗಡೂರು ಗ್ರಾಮದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.
ವರುಣ ಕ್ಷೇತ್ರ ವ್ಯಾಪ್ತಿಯಲ್ಲಿ ದಲಿತ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಶ್ರೀನಿವಾಸ ಪ್ರಸಾದ್ ಅವರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಈ ಮೂಲಕ ಅಖಾಡಕ್ಕೆ ಇಳಿಯಲಿದ್ದಾರೆ.
ಸೋಮವಾರ ಮಧ್ಯಾಹ್ನ ೩ ಗಂಟೆಗೆ ಗ್ರಾಮದಲ್ಲಿ ಸಭೆ ನಡೆಯಲಿದ್ದು, ಹಿಂದುಳಿದ ಸಮುದಾಯಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಸೋಮಣ್ಣ ಪರ ಮತಯಾಚನೆ ಮಾಡಲಿದ್ದಾರೆ.
ಶ್ರೀನಿವಾಸ ಪ್ರಸಾದ್ ಅವರೊಂದಿಗೆ ಅಭ್ಯರ್ಥಿ ವಿ.ಸೋಮಣ್ಣ, ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿರುವರು.