ಬಸವ ತತ್ವ ಬರೀ ಭಾಷಣ ಆಗಬಾರದು: ಸಾಹಿತಿ ಬನ್ನೂರು ರಾಜು

ನಂದಿನಿ ಮೈಸೂರು

ಬಸವ ತತ್ವ ಬರೀ ಭಾಷಣ ಆಗಬಾರದು: ಸಾಹಿತಿ ಬನ್ನೂರು ರಾಜು

ಮೈಸೂರು: ಸಕಲರಿಗೂ ಲೇಸನ್ನುಂಟು ಮಾಡುವ, ಸರ್ವರಲ್ಲೂ ಒಳಿತನ್ನು ಬಿತ್ತುವ ಮಾನವ ಲೋಕೋದ್ದಾರದ ಸಂಜೀವಿನಿಯಾದ ಬಸವ ತತ್ವವು ಬರೀ ಭಾಷಣಗಳಾಗದೆ, ಕೇವಲ ಉಲ್ಲೇಖಿತ ಮಾತುಗಳಾಗದೆ ಪ್ರಾಮಾಣಿಕ ಅನುಸರಣೆಯಾಗಿ ಪ್ರತಿಯೊಬ್ಬರ ಅಂತರಾಳದಲ್ಲೂ ಅಮೃತಧಾರೆಯಾಗಿ ಹರಿಯಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಡೆದ ಬಸವ ಜಯಂತಿ ಮತ್ತು ಬಸವಭೂಷಣ ಹಾಗೂ ಬಸವ ವಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವಣ್ಣ ಎಂಬುದು ಕೇವಲ ಒಂದು ಹೆಸರಾಗಿರದೆ ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗ ಮಯ, ಮೃತ್ತ್ಯೋರ್ಮ ಅಮೃತಂಗಮಯ ಎಂಬಂತೆ ಮೌಡ್ಯತೆಯ, ಅಸಮಾನತೆಯ ಕಾರ್ಗತ್ತಲಲ್ಲಿರುವ ಜಗತ್ತನ್ನು ಬೆಳಕಿನತ್ತ ಕರೆತರುವ ಜಗಜ್ಯೋತಿಯೆಂದರು.
ಬಸವಣ್ಣ ಈ ಭುವಿಯಲ್ಲಿ ಅವತರಿಸಿದ್ದೇ ಮನುಷ್ಯರಂತೆ ಕಾಣುವ ಮನುಷ್ಯರಲ್ಲಿ ಮನುಷ್ಯತ್ವವನ್ನು ತುಂಬಿ ಅವರನ್ನು ನಿಜವಾದ ಮನುಷ್ಯರನ್ನಾಗಿ ಮಾಡಲು. ಈ ನಿಟ್ಟಿನಲ್ಲಿ ಅವರು ಸಾಕಷ್ಟು ಯಶಸ್ವಿಯೂ ಆಗಿ ಸಮ ಸಮಾಜದ ಜಗತ್ತನ್ನು ನಿರ್ಮಿಸುವಲ್ಲಿ ಬೆಳಕಾಗಿದ್ದಾರೆ. ಬಸವಣ್ಣನಿಗಿಂತಲೂ ಮೊದಲು ಬುದ್ಧ,ಏಸು, ಶಂಕರ, ರಾಮಾನುಜ, ಮಹಾವೀರ, ಮಹಮ್ಮದರು ಸೇರಿದಂತೆ ಅನೇಕ ದಾಸರು, ದಾರ್ಶನಿಕರು, ಮಾನವತಾವಾದಿಗಳು, ಸಂತರು, ಸಿದ್ದರು, ಪವಾಡ ಪುರುಷರು, ಆಚಾರ್ಯರು, ಪ್ರವಾದಿಗಳು ಬಂದು ಹೋಗಿ ತಮ್ಮದೇ ಆದ ತತ್ವಾದರ್ಶಗಳಿಂದ ಜಗವನ್ನು ಬೆಳಗಲು ಪ್ರಯತ್ನಿಸಿದ್ದರು. ಆದರೂ ಅರ್ಥಹೀನ ಸಂಪ್ರದಾಯದಿಂದ, ಮೌಡ್ಯ ತೆಯ ಕೂಪದಿಂದ, ಕಂದಾಚಾರದ ಕಟ್ಟಳೆಗಳಿಂದ ಜಡ್ಡುಗಟ್ಟಿದ್ದ ಜಗತ್ತು ಅಷ್ಟು ಸುಲಭವಾಗಿ ಜಾಗೃತಿ ಗೊಂಡಿರಲಿಲ್ಲ. ಆಗ ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬೆ ದಂಪತಿಯ ಸುಪುತ್ರರಾಗಿ ಬೆಳಕಿನ ಮಹಾಪರ್ವವಾಗಿ ಬಸವಣ್ಣ ಅವತರಿಸಿದ್ದರು. ಅವರ ಅವತಾರವೆಂಬುದು ಸಾಮಾನ್ಯವಲ್ಲ. ವಚನ ಚಳವಳಿಯ ಅಸ್ತ್ರದಿಂದ ಬಸವ ಬೆಳಕು ಚೆಲ್ಲಿ ಮಾನವತೆಯ ಜ್ಯೋತಿ ಹಚ್ಚಿದ ಪರಿ ಇದೆಯಲ್ಲ ಅದು ಇಂದಿಗೂ ವಿಶ್ವವ್ಯಾಪಿ ಇತಿಹಾಸವಾಗಿದೆ ಎಂದ ಅವರು, ಅದ್ದಕ್ಕೇನೆ ಬಸವಣ್ಣ ಜಗಜ್ಯೋತಿ ಬಸವಣ್ಣ ಎನಿಸಿದ್ದೆಂದು ತಿಳಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಉಷಾ ನರಸಿಂಹನ್( ಸಾಹಿತ್ಯ), ಡಾ.ಬಿ.ಪಿ.ಮೂರ್ತಿ (ಯೋಗ), ಶ್ರೀಮತಿ ವಿದ್ಯಾ (ಆರೋಗ್ಯ ಮತ್ತು ಸಮಾಜ ಸೇವೆ ), ಎಂ.ಎಲ್.ಕಲ್ಯಾಣ್ ಕುಮಾರ್ (ಸಮಾಜ ಸೇವೆ) ,ಲಯನ್ ಎನ್ .ಸುಬ್ರಹ್ಮಣ್ಯ (ಉದ್ಯಮ) ಕೆ.ಸುರೇಶ್ (ಶಿಕ್ಷಣ), ಸೋಮಶೇಖರ್ ಆರಾಧ್ಯ (ಯುವ ಉದ್ಯಮಿ), ಸಿ. ಪಿ. ಕುಮಾರ್ ( ಕನ್ನಡ ಪರ ಹೋರಾಟ) ಅವರುಗಳಿಗೆ ಬಸವ ಭೂಷಣ ಮತ್ತು ಬಸವ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಚಿಂತಕ ಎಂ.ಚಂದ್ರಶೇಖರ್ ಅವರು ಬಸವೇಶ್ವರರ ಬಗ್ಗೆ ಸುಧೀರ್ಘ ಉಪನ್ಯಾಸ ನೀಡಿದರು. ಖ್ಯಾತ ಲೇಖಕಿ ಹಾಗೂ ಕಾದಂಬರಿಗಾರ್ತಿ, ಉಷಾ ನರಸಿಂಹನ್ , ಶಿಕ್ಷಕ ಕೆ.ಸುರೇಶ್ ಹಾಗೂ ಉದ್ಯಮಿ ಎನ್.ಸುಬ್ರಹ್ಮಣ್ಯ ಇನ್ನಿತರರು ಕಾರ್ಯಕ್ರಮ ಕುರಿತು ಮಾತನಾಡಿದರು. ಆರಾಧ್ಯ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಎಂ.ಸಿ. ಚೇತನ್, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಸನ್ನ, ಶಿಕ್ಷಕ ಪರಮೇಶ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *