ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಹಕಾರ ಚಳವಳಿಯನ್ನು ಬಲಪಡಿಸುತ್ತದೆ:ಅಮಿತ್ ಶಾ

*ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಹಕಾರ ಚಳವಳಿಯನ್ನು ಬಲಪಡಿಸುತ್ತದೆ: ಅಮಿತ್ ಶಾ*

ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ಕೇಂದ್ರೀಯ ಸಹಕಾರ ಸಂಘಗಳ ರಿಜಿಸ್ಟ್ರಾರ್ (ಸಿಆರ್‌ಸಿಎಸ್) ಕಚೇರಿಯ ಡಿಜಿಟಲ್ ಪೋರ್ಟಲ್ಅನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ, ‘ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವಿಲ್ಲದೆ ಸಹಕಾರಿ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದರು. ಸಹಕಾರ ಆಂದೋಲನದ ಸ್ವೀಕಾರವನ್ನು ಹೆಚ್ಚಿಸಲು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಬೇಕು. ಪಾರದರ್ಶಕ ವ್ಯವಸ್ಥೆಯಿಂದ ಮಾತ್ರ ದೇಶದ ಕೋಟ್ಯಂತರ ಜನರನ್ನು ಸಂಪರ್ಕಿಸಲು ಸಾಧ್ಯ. ‘ಬಹು-ರಾಜ್ಯ ಸಹಕಾರಿ ಸಂಘವನ್ನು ನಿರ್ವಹಿಸುವ ಕೇಂದ್ರ ರಿಜಿಸ್ಟ್ರಾರ್ ಕಚೇರಿಯ ಕಾರ್ಯಗಳು ಸಂಪೂರ್ಣ ಡಿಜಿಟಲ್ ಆಗುತ್ತಿವೆ, ಇದು ಸಹಕಾರಿ ಕ್ಷೇತ್ರದ ವ್ಯಾಪಾರಗಳನ್ನು ಸುಲಭಗೊಳಿಸಲಿದೆ. ಸಹಕಾರ ಸಂಘಗಳ ಹೊಸ ಶಾಖೆ ತೆರೆಯುವುದು, ಬೇರೆ ರಾಜ್ಯಕ್ಕೆ ವಿಸ್ತರಿಸುವುದು ಅಥವಾ ಲೆಕ್ಕಪರಿಶೋಧನೆ ನಡೆಸುವುದು ಮುಂತಾದ ಎಲ್ಲಾ ಕೆಲಸಗಳು ಈಗ ಆನ್‌ಲೈನ್ ಆಗಲಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಸಹಕಾರ ಸಚಿವಾಲಯವು ಸಹಕಾರದಿಂದ ಸಮೃದ್ಧಿಯೆಂಬ ಮಂತ್ರವನ್ನು ಸಾಕಾರಗೊಳಿಸಲು ಮತ್ತು ಸಹಕಾರ ಚಳುವಳಿಯನ್ನು ಬಲಪಡಿಸಲು ದೇಶಾದ್ಯಂತ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಈ ಸರಣಿಯ ಭಾಗವಾಗಿ, ಸಹಕಾರಿ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಉತ್ತೇಜಿಸಲು, ಬಹು-ರಾಜ್ಯ ಸಹಕಾರಿ ಸಂಘಗಳ ಕೇಂದ್ರೀಯ ರಿಜಿಸ್ಟ್ರಾರ್ ಕಚೇರಿಯನ್ನು ಗಣಕೀಕರಣಗೊಳಿಸಲು ಗಮನಾರ್ಹ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ. ಸಂಪೂರ್ಣ ಕಾಗದ ರಹಿತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು, ಸಾಫ್ಟ್‌ವೇರ್ ಮೂಲಕ ಮಲ್ಟಿ-ಸ್ಟೇಟ್ ಕೋ-ಆಪರೇಟಿವ್ ಸೊಸೈಟಿಗಳ ಕಾಯಿದೆ ಮತ್ತು ನಿಯಮಗಳ ಸ್ವಯಂಚಾಲಿತ ಅನುಸರಣೆಯನ್ನು ಖಚಿತಪಡಿಸುವುದು, ವ್ಯವಹಾರವನ್ನು ಸುಗಮಗೊಳಿಸುವುದು, ಡಿಜಿಟಲ್ ಸಂವಹನವನ್ನು ಸಕ್ರಿಯಗೊಳಿಸುವುದು, ಪಾರದರ್ಶಕತೆಯನ್ನು ಖಾತರಿಪಡಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶಗಳು .

ಈ ಪೋರ್ಟಲ್‌ನ ಪ್ರಯೋಜನ ದೇಶದ 1,555 ಬಹು-ರಾಜ್ಯ ಸಹಕಾರಿ ಸಂಘಗಳಿಗೆ ಆಗಲಿದೆ. ಇದಾದ ನಂತರ, ಅದೇ ಮಾದರಿಯಲ್ಲಿ ರಾಜ್ಯಗಳ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಗಳನ್ನು ಗಣಕೀಕರಣಗೊಳಿಸಲು ಮಾತುಕತೆ ನಡೆಯುತ್ತಿದೆ, ಇದು ದೇಶಾದ್ಯಂತ 8 ಲಕ್ಷ ಸಹಕಾರ ಸಂಘಗಳೊಂದಿಗೆ ಸಂವಹನವನ್ನು ಸುಲಭಗೊಳಿಸುತ್ತದೆ.

ಶಾರವರ ದೂರದೃಷ್ಟಿಯ ಚಿಂತನೆಯ ಮೂಲಕ PACS ಮೂಲಕ ಪ್ರತಿ ಹಳ್ಳಿಗೆ ಸಹಕಾರ ಚಳುವಳಿಯನ್ನು ಕೊಂಡೊಯ್ಯುವ ಕೆಲಸ ವೇಗವಾಗಿ ನಡೆಯುತ್ತಿದೆ.

ಒಂದು ರೀತಿಯಿಂದ ನೋಡಿದರೆ ಮಹಾರಾಷ್ಟ್ರದಿಂದಲೇ ಇಡೀ ದೇಶದಲ್ಲಿ ಸಹಕಾರಿ ಸಂಸ್ಕೃತಿಯು ಪಸರಿಸಿದ್ದು ಎಂದು ಹೇಳಬಹುದು, ಇಲ್ಲಿನ ಸಹಕಾರಿ ಮಾದರಿಯು ಸಹಕಾರ ಚಳವಳಿಯನ್ನು ದೇಶಾದ್ಯಂತ ಮುನ್ನಡೆಸುತ್ತಿದೆ. ಆದ್ದರಿಂದ, ಮಹಾರಾಷ್ಟ್ರದ ಪುಣೆಯಲ್ಲಿರುವ ಸಹಕಾರ ಸಂಘಗಳ ಕೇಂದ್ರೀಯ ರಿಜಿಸ್ಟ್ರಾರ್ ಕಚೇರಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ಕೆಲಸವನ್ನು ಪ್ರಾರಂಭಿಸುವುದು ಸಂಪೂರ್ಣವಾಗಿ ಪ್ರಸ್ತುತವಾಗಿದೆ. ನೋಂದಣಿ, ಬೈಲಾಗಳ ನೋಂದಣಿ, ಅವುಗಳಲ್ಲಿ ತಿದ್ದುಪಡಿ, ಲೆಕ್ಕಪರಿಶೋಧನೆ, ಕೇಂದ್ರ ರಿಜಿಸ್ಟ್ರಾರ್‌ನಿಂದ ಲೆಕ್ಕಪರಿಶೋಧನೆಯ ಮೇಲ್ವಿಚಾರಣೆ, ಕೇಂದ್ರ ರಿಜಿಸ್ಟ್ರಾರ್ ಕಚೇರಿಯಲ್ಲಿನ ಚುನಾವಣೆಯ ಸಂಪೂರ್ಣ ಪ್ರಕ್ರಿಯೆ, ಜಾಗರೂಕತೆ ಮತ್ತು ತರಬೇತಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಸಂಯೋಜಿಸಿ ಈ ಪೋರ್ಟಲ್ಅನ್ನು ಮಾಡಲಾಗಿದೆ.

ಕಳೆದ 9 ವರ್ಷಗಳಲ್ಲಿ ಸಹಕಾರಿ ಕ್ಷೇತ್ರ ಪುನಶ್ಚೇತನಗೊಂಡಿದೆ. ದೇಶದ ಮೊದಲ ಸಹಕಾರಿ ಸಚಿವ ಶಾ ಅವರು ಸಹಕಾರಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ಕೆಲಸ ಮಾಡಿದ್ದಾರೆ. ಇಂದು, ಒಬ್ಬ ಬಡ ವ್ಯಕ್ತಿಗೆ ಉದ್ಯಮಕ್ಕೆ ಬಂಡವಾಳದ ಕೊರತೆಯಿದ್ದರೆ, ಅವನಿಗೆ ಸಹಕಾರ ಚಳುವಳಿಯೇ ಉತ್ತಮ ಮಾರ್ಗವಾಗಿದೆ, ಇದರ ಮೂಲಕ ಸಣ್ಣ ಬಂಡವಾಳ ಹೊಂದಿರುವ ಅನೇಕ ಜನರು ಒಟ್ಟಾಗಿ ದೊಡ್ಡ ಉದ್ಯಮವನ್ನು ಸ್ಥಾಪಿಸಬಹುದು. ಭಾರತವು ಅಮುಲ್, ಇಫ್ಕೋ ಮತ್ತು ಕ್ರಿಫ್ಕೋ ಮುಂತಾದ ಸಹಕಾರಿ ಸಂಸ್ಥೆಗಳ ಅನೇಕ ಯಶಸ್ಸಿನ ಕಥೆಗಳನ್ನು ಪ್ರಪಂಚದ ಮುಂದೆ ತೆರೆದಿಟ್ಟಿದೆ.

Leave a Reply

Your email address will not be published. Required fields are marked *