ಬಘೇಲ್ ಸರ್ಕಾರ ಚುನಾವಣಾ ಭರವಸೆಗಳನ್ನು ಈಡೇರಿಸಲು ಸಂಪೂರ್ಣ ವಿಫಲವಾಗಿದೆ: ಅಮಿತ್ ಶಾ

*ಬಘೇಲ್ ಸರ್ಕಾರ ಚುನಾವಣಾ ಭರವಸೆಗಳನ್ನು ಈಡೇರಿಸಲು ಸಂಪೂರ್ಣ ವಿಫಲವಾಗಿದೆ: ಅಮಿತ್ ಶಾ*

ಛತ್ತೀಸ್ಗಢದಲ್ಲಿ ಚುನಾವಣಾ ಕಣಕ್ಕಿಳಿದಿರುವ ಬಿಜೆಪಿಯ ಪ್ರಮುಖ ಚುನಾವಣಾ ತಂತ್ರಗಾರ ಅಮಿತ್ ಶಾ ಗುರುವಾರ ಛತ್ತೀಸ್ಗಢದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರ್ಕಾರ ತನ್ನ ಭರವಸೆಗಳನ್ನು ಎಂದಿಗೂ ಈಡೇರಿಸುವುದಿಲ್ಲ ಎಂದು ಹೇಳಿದರು.

ಕಳೆದ ಒಂಬತ್ತು ವರ್ಷಗಳಲ್ಲಿನ ಮೋದಿ ಸರ್ಕಾರದ ಸಾಧನೆಗಳನ್ನು ಬಿತ್ತರಿಸಲು ಛತ್ತೀಸಘಡದ ದುರ್ಗ್ದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ರಾಜ್ಯದ ಭೂಪೇಶ್ ಬಘೇಲ್ ಸರ್ಕಾರವು ತನ್ನ ಎಲ್ಲಾ ಭರವಸೆಗಳನ್ನು ಮರೆತಿದ್ದು ಮಾತ್ರವಲ್ಲದೆ, ಕೆಲವು ಸಂದರ್ಭಗಳಲ್ಲಿ ಅವುಗಳಿಗೆ ತದ್ವಿರುದ್ದವಾಗಿ ನಡೆದುಕೊಂಡಿದೆ ಎಂದರು. ರಾಜ್ಯದಲ್ಲಿ ಮದ್ಯವನ್ನು ನಿಷೇಧಿಸುವ ವಾಗ್ದಾನ ನೀಡಿದ್ದ ಈ ಸರ್ಕಾರ ಅದರ ಬದಲು ಮನೆಮನೆಗೆ ತಲುಪಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ಹರಿಹಾಯ್ದರು.

ಲಕ್ಷಾಂತರ ಜನರಿಗೆ ಉದ್ಯೋಗ ನೀಡುವುದಾಗಿ ನೀಡಿದ್ದ ಭರವಸೆಗೆ ವ್ಯತಿರಿಕ್ತವಾಗಿ, ಬಘೇಲ್ ಸರ್ಕಾರವು ರಾಜ್ಯದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಂಪೂರ್ಣ ವಿಫಲವಾಗಿದೆ ಎಂದ ಶಾ, ಪ್ರಸ್ತುತ ಕಾಂಗ್ರೆಸ್ಸಿನ ಆಡಳಿತದಲ್ಲಿ ರಾಜ್ಯದ ಸಾಲವು ಒಂದು ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹೇಳಿದರು. ಬಡ ರೈತರ ಸಾಲವನ್ನು ಪಾವತಿಸುವಲ್ಲಿ ಕೂಡ ಈ ಸರ್ಕಾರ ವಿಫಲವಾಗಿದೆ ಎಂದರು.

ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸಂಖ್ಯೆಯ ಜನಸ್ತೋಮ ಮತ್ತು ಜನಸ್ಪಂದನೆಯಿಂದ ಉತ್ತೇಜಿತರಾದ ಶಾ, ”ಕಾಂಗ್ರೆಸ್ ಸರಕಾರದ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂಬುದಕ್ಕೆ ಭಾರೀ ಸಂಖ್ಯೆಯಲ್ಲಿ ಇಲ್ಲಿ ಆಗಮಿಸಿರುವ ಜನಸಮೂಹವೇ ಸಾಕ್ಷಿ. ಕಾಂಗ್ರೆಸ್ ನೇತೃತ್ವದ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ ಎಂದರು”.

ಬಿಜೆಪಿ 2014ರ ಲೋಕಸಭೆ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ 10 ಸ್ಥಾನಗಳಲ್ಲಿ ಮತ್ತು 2019ರಲ್ಲಿ ಎಲ್ಲಾ 11 ಸ್ಥಾನಗಳಲ್ಲಿಯೂ ಜಯಭೇರಿ ಬಾರಿಸಿದೆ. 2024ರ ಲೋಕಸಭೆ ಚುನಾವಣೆಯಲ್ಲಿಯೂ ಛತ್ತೀಸ್ಗಢದ ಜನತೆ ಮತ್ತೊಮ್ಮೆ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರದಲ್ಲಿ 10 ವರ್ಷಗಳ ಕಾಲ ಆಡಳಿತ ನಡೆಸಿದ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಷಾ, ಅವರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿತ್ತು. “ಆ ಅವಧಿಯ ಕಾಂಗ್ರೆಸ್ ಸರ್ಕಾರ 12 ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರ ಮಾಡಿತ್ತು, ಆದರೆ ಮೋದಿ ಸರ್ಕಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಳಂಕವಿಲ್ಲ, ಪ್ರತಿಪಕ್ಷಗಳು ಕೂಡ ಮೋದಿ ಸರ್ಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯವಿಲ್ಲ” ಎಂದು ಶಾ ಹೇಳಿದರು.

ಹಲವಾರು ಹಗರಣಗಳಲ್ಲಿ ತೊಡಗಿರುವ ಮತ್ತು ವಿವಿಧ ಸೆಸ್ಗಳು ಮತ್ತು ತೆರಿಗೆಗಳಿಂದ ಪಡೆದ ಮೊತ್ತವನ್ನು ಬಡವರ ಕಲ್ಯಾಣಕ್ಕಾಗಿ ಒಂದಿನಿತು ಖರ್ಚು ಮಾಡದ ಬಘೆಲ್ ಸರ್ಕಾರದ ಮೇಲೆ ಶಾ ಹರಿಹಾಯ್ದರು.

70 ವರ್ಷಗಳ ಕಾಲ 370 ನೇ ವಿಧಿಯನ್ನು ಪಾಲನೆ ಪೋಷಣೆ ಮಾಡಿದ್ದಕ್ಕಾಗಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿದ್ದ ಭಯೋತ್ಪಾದನೆಯ ನಿದರ್ಶನಗಳನ್ನು ಎದುರಿಸಲು ವಾಸ್ತವದಲ್ಲಿ ಏನನ್ನೂ ಮಾಡದಿದ್ದಕ್ಕಾಗಿ ಶಾ ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿದರು.

ತಮ್ಮ ಮಾತು ಮುಂದುವರೆಸುತ್ತಾ ಶಾ “ಒಂಬತ್ತು ವರ್ಷಗಳ ಹಿಂದೆ, ಪಾಕಿಸ್ತಾನದ ಭಯೋತ್ಪಾದಕರು ಭಾರತದ ಭೂಮಿಗೆ ನುಗ್ಗಿ ನಮ್ಮ ಸೈನಿಕರ ಹತ್ಯೆ ಮಾಡಿ ಹೋಗುತ್ತಿದ್ದರು, ಆದರೆ ಅದರ ಬಗ್ಗೆ ಆಗಿನ ಕಾಂಗ್ರೆಸ್ ಸರ್ಕಾರ ದಿವ್ಯ ಮೌನಕ್ಕೆ ಶರಣಾಗುತ್ತಿತ್ತು. ಮೋದಿ ಪ್ರಧಾನಿಯಾದ ನಂತರವೂ ಪಾಕಿಸ್ತಾನ ಅದೇ ರೀತಿ ಮಾಡಲು ಪ್ರಯತ್ನಿಸಿತು. ಆದರೆ, ಕೇವಲ 10 ದಿನಗಳಲ್ಲಿ ನಾವು ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಯ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆವು” ಎಂದರು.

Leave a Reply

Your email address will not be published. Required fields are marked *