ಬಣ್ಣದಲೋಕದ ಅಭಿನಯ ಭಾರ್ಗವಿ

ಬನ್ನೂರು ಕೆ ರಾಜು
ಸಾಹಿತಿ-ಪತ್ರಕರ್ತ

‘ಬೆಳವಾಡಿ’ ಎಂದ ತಕ್ಷಣ ನಮ್ಮ ಕಣ್ಮುಂದೆ ಎರಡು ಹೆಸರುಗಳು ಹಾಗೆಯೇ ಹಾದುಹೋಗುತ್ತವೆ. ಒಂದು ಪ್ರಕಾಶ್ ಬೆಳವಾಡಿ ಮತ್ತೊಂದು ಸುಧಾ ಬೆಳವಾಡಿ. ಇಬ್ಬರೂ ಅದ್ಭುತ ಕಲಾವಿದರು. ಅದರಲ್ಲೂ ವಿಶೇಷವಾಗಿ ಪ್ರಕಾಶ್ ಬೆಳವಾಡಿ ಒಳ್ಳೆಯ ರಂಗಕರ್ಮಿಗಳು ಮತ್ತು ದಿಗ್ದರ್ಶಕರು. ಇವರಿಬ್ಬರೂ ನಾಡಿನ ಉದ್ದಗಲಕ್ಕೂ ರಂಗಭೂಮಿ ಮತ್ತು ಸಿನಿಮಾ ಹಾಗೂ ಕಿರುತೆರೆಯ ಕ್ಷೇತ್ರಗಳಲ್ಲಿ ಚಿರಪರಿಚಿತರು. ಇವರಿಬ್ಬರ ಮಾತೃಶ್ರೀ ಖ್ಯಾತ ಕಲಾವಿದೆ ಭಾರ್ಗವಿ ನಾರಾಯಣ್. ಮಕ್ಕಳ ಕಲಾಜೀವನದಲ್ಲಿ ಈ ತಾಯಿಯ ಪ್ರಭಾವ ಅತ್ಯಂತ ಮಹತ್ವದ್ದು. ಹಾಗಾಗಿ ಪ್ರಕಾಶ್ ಬೆಳವಾಡಿ ಮತ್ತು ಸುಧಾ ಬೆಳವಾಡಿ ಅವರುಗಳಂತಹ ಪ್ರತಿಭಾವಂತ ಪ್ರಸಿದ್ಧ ಕಲಾವಿದರನ್ನು ನಾಡಿಗೆ ಕೊಟ್ಟಂತಹ ಹಿರಿಮೆ ಭಾರ್ಗವಿ ನಾರಾಯಣ್ ಅವರದ್ದು.

ನಟಿ ಭಾರ್ಗವಿ ನಾರಾಯಣ್ ಅವರು ವೃತ್ತಿಯಲ್ಲಿ ಬೆಂಗಳೂರಿನ ಇಎಸ್‌ಐ ಕಾರ್ಪೊರೇಷನ್‌ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗಲೇ ಜೊತೆ ಜೊತೆಯಲ್ಲಿ ಪ್ರವೃತ್ತಿಯಲ್ಲಿ ಕಲಾವಿದೆಯಾಗಿ ಕಲೆಯನ್ನೇ ಕಾಯಕ ಮಾಡಿಕೊಂಡಿದ್ದರು. ಸರ್ಕಾರಿ ಕೆಲಸದಿಂದ ನಿವೃತ್ತಿಯಾದ ನಂತರ ಸಂಪೂರ್ಣವಾಗಿ ಬಣ್ಣದ ಬದುಕನ್ನು ಅಪ್ಪಿಕೊಂಡರು. ಅದವರಿಗೆ ಅತ್ಯಂತ ಪ್ರಿಯವಾದ ಕೆಲಸವೂ ಆಗಿತ್ತು. ಹಾಗಾಗಿ ಎಂಬತ್ನಾಲ್ಕರ ಇಳಿವಸ್ಸಿನಲ್ಲೂ ಭಾರ್ಗವಿ ಅವರು ತಮ್ಮ ಬದುಕಿನ ಕೊನೆಯ ಅದ್ಯಾಯವನ್ನು ಮುಗಿಸುವವರೆವಿಗೂ (ನಿಧನ ೧೪-೨-೨೦೨೨) ಕಿರುತೆರೆ, ಹಿರಿತೆರೆ ಸೇರಿದಂತೆ ಅಭಿನೇತ್ರಿಯಾಗಿ ಬಣ್ಣದ ಬೆಳಕಿನಲ್ಲಿ ಅಭಿನಯಿಸುತ್ತಾ ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದರಲ್ಲದೆ ಇವತ್ತಿನ ಯುವಪೀಳಿಗೆಯ ನಟ-ನಟಿಯರಿಗೆ ಅಕ್ಷರಶಃ ಮಾದರಿಯಾಗಿ ಮಾರ್ಗದರ್ಶಿಯಾಗಿದ್ದರು.

ಸಾವಿರದ ಒಂಬೈನೂರ ಮೂವತ್ತೆಂಟು ಫೆಬ್ರವರಿ ನಾಲ್ಕರಂದು ಜನಿಸಿದ ಭಾರ್ಗವಿ ಅವರು, ಬಾಲ್ಯದಿಂದಲೂ ಕಲಾಸಕ್ತರಾಗಿದ್ದು, ಕಲಾಶಾರದೆಯ ಮಡಿಲಿನತ್ತ ಮುಖಮಾಡಿದವರು. ಅವರ ಇಚ್ಚೆಯಂತೆಯೇ ಕಲಾಲೋಕ ಅವರಿಗೊಲಿಯಿತು.ಕಲಾಭಿಮಾನಿಗಳ ಮೆಚ್ಚಿನ, ನೆಚ್ಚಿನ ನಟಿಯಾಗಿ ತಮ್ಮಪ್ರಭುದ್ದ ಅಭಿನಯದಿಂದ ತಮ್ಮದೇ ಆದ ಸದಭಿರುಚಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡು ಅವರ ಹೃದಯದಲ್ಲೊಂದು ಸ್ಥಾನ ಪಡೆಯುವಲ್ಲಿ ಭಾರ್ಗವಿ ಅವರು ಯಶಸ್ವಿಯೂ ಆದರು.

ಆಗಷ್ಟೇ ಹವ್ಯಾಸಿ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಭಾರ್ಗವಿ ನಾರಾಯಣ್ ಅವರು, ೧೯೬೭ರಲ್ಲಿ ತೆರೆಕಂಡ ಕಲಾರತ್ನ ಕಲ್ಯಾಣ್ ಕುಮಾರ್ ಅಭಿನಯದ ‘ಸುಬ್ಬಾಶಾಸ್ತ್ರಿ’, ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು. ಅಲ್ಲಿಂದ ಅದೇ ಹಾದಿಯಲ್ಲಿ ಮುಂದುವರಿದ ಅವರು, ನಂತರದ ದಿನಗಳಲ್ಲಿ ಹಾಸ್ಯಚಕ್ರವರ್ತಿ ನರಸಿಂಹರಾಜು ನಿರ್ಮಿಸಿದ ‘ಪ್ರೊಫೆಸರ್ ಹುಚ್ಚುರಾಯ’, ‘ಎರಡು ಕನಸು’, ‘ಹಂತಕನ ಸಂಚು’, ‘ಕಾಡ ಬೆಳದಿಂಗಳು’, ‘ಮುಯ್ಯಿ’, `ಇದೊಳ್ಳೆ ರಾಮಾಯಣ’, `ಪಲ್ಲವಿ ಅನುಪಲ್ಲವಿ’, `ರಾಜಕುಮಾರ’, `ವಂಶವೃಕ್ಷ’ ಮುಂತಾದ ಚಿತ್ರಗಳು ಒಳಗೊಂಡಂತೆ ಡಾ. ರಾಜ್‌ಕುಮಾರ್, ಡಾ. ಅಂಬರೀಶ್, ಡಾ. ವಿಷ್ಣುವರ್ದನ್, ಶಂಕರ್‌ನಾಗ್ ಸೇರಿದಂತೆ ಅನೇಕ ಮಹಾನ್ ಕಲಾವಿದರ ಜೊತೆ ಚಲನಚಿತ್ರಗಳಲ್ಲಿ ನಟಿಸಿದ ಖ್ಯಾತಿ ಇವರದು. ಹಲವಾರು ನಾಟಕಗಳಲ್ಲಿ ನಟಿಸಿದ್ದ ಇವರು ಮಕ್ಕಳಿಗಾಗಿ ತಾವೇ ನಾಟಕಗಳನ್ನೂ ಬರೆದು ನಿರ್ದೇಶಿಸಿದ್ದರು. ಹಾಗೆಯೇ ಒಳ್ಳೆ ನಟಿ ಅಷ್ಟೇ ಅಲ್ಲದೆ ಅಷ್ಟೇ ಒಳ್ಳೆಯ ನಿರ್ದೇಶಕಿಯೂ ಆಗಿದ್ದರು. ವಿಶೇಷವಾಗಿ ಮಕ್ಕಳೊಳಗಿನ ಪ್ರತಿಭೆಯನ್ನು ಹೊರ ತೆಗೆಯುವಲ್ಲಿ ಇವರ ಕಲಾ ನೈಪುಣ್ಯತೆ ಹೆಚ್ಚು ಕೆಲಸ ಮಾಡುತ್ತಿತ್ತು. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಅವರು ಒಳ್ಳೆಯ ಕೆಲಸ ಮಾಡಿದ್ದರು.

ತಮ್ಮ ೨೦ನೇ ವಯಸ್ಸಿನಲ್ಲಿ ಮೇಕಪ್ ನಾಣಿ ಎಂದೇ ಹೆಸರಾಗಿದ್ದ ಖ್ಯಾತ ಮೇಕಪ್ ಕಲಾವಿದ ಹಾಗೂ ನಟ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರನ್ನು ವಿವಾಹವಾದ ಭಾರ್ಗವಿ, ಪತಿಗೆ ತಕ್ಕ ಸತಿಯಾಗಿ ಜೊತೆಜೊತೆಯಲ್ಲೇ ರಂಗಭೂಮಿ ಚಟುವಟಿಕೆ ಮತ್ತು ಕಿರುತೆರೆ-ಹಿರಿತೆರೆ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಮಂಥನ ಹಾಗೂ ಮುಕ್ತ ಧಾರಾವಾಹಿಗಳಲ್ಲಿ ಅವರ ಅಭಿನಯವನ್ನು ಕನ್ನಡಿಗರಾರೂ ಯಾವತ್ತೂ ಮರೆಯುವಂತೆಯೇ ಇಲ್ಲ. ಅಂತಹ ಅದ್ಭುತ ಅಭಿನಯ ಅವರದ್ದು. ಪತಿ ನಾರಾಯಣ್ ಜೊತೆಗಿನ ತುಂಬು ಕುಟುಂಬದ ಸುಸಂಸ್ಕೃತ ಕಲಾವಿದೆಯಾಗಿದ್ದ ಭಾರ್ಗವಿ ನಾರಾಯಣ್ ಅವರಿಗೆ ಪುತ್ರರಾದ ಪ್ರಕಾಶ್ ಬೆಳವಾಡಿ, ಪ್ರದೀಪ್ ಬೆಳವಾಡಿ ಮತ್ತು ಪುತ್ರಿಯರಾದ ಸುಧಾ ಬೆಳವಾಡಿ, ಸುಜಾತ ಬೆಳವಾಡಿ ಸೇರಿದಂತೆ ಒಟ್ಟು ನಾಲ್ಕು ಮಕ್ಕಳು. ಮೊಮ್ಮಗಳು ಸಂಯುಕ್ತಾ ಹೊರನಾಡು ಅವರು ನಟಿಯಾಗಿ ಗುರುತಿಸಿಕೊಂಡು ಅಜ್ಜಿಯ ಕಲಾ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಒಟ್ಟಿನಲ್ಲಿ ಇವರದ್ದೊಂದು ಅಪರೂಪದ ಕಲಾ ಕುಟುಂಬ.

ಸ್ವತಃ ಲೇಖಕಿಯೂ ಆಗಿದ್ದ ಭಾರ್ಗವಿ ಅವರು ನಟನೆಯಷ್ಟೇ ಅಲ್ಲದೆ ಬರವಣಿಗೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು, ಅಲ್ಲಿಯೂ ಸೈ ಎನಿಸಿಕೊಂಡು `ನಾನು ಭಾರ್ಗವಿ’ ಎಂಬ ಆತ್ಮಕಥೆಯನ್ನು ಹಾಗೂ `ನಾ ಕಂಡ ನಮ್ಮವರು’ ಎಂಬ ವ್ಯಕ್ತಿ ಚಿತ್ರ ಕೃತಿಗಳು ಸೇರಿದಂತೆ ಅನೇಕ ರೀತಿಯ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದರು. ೨೦೧೨ರಲ್ಲಿ ಲೋಕಾರ್ಪಣೆಗೊಂಡ ಇವರ ಆತ್ಮಚರಿತ್ರೆ `ನಾನು ಭಾರ್ಗವಿ’ ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿತ್ತು. ಆತ್ಮಕಥೆ ಸಾಹಿತ್ಯ ಪ್ರಕಾರದಲ್ಲಿ ಒಂದು ವಿಶಿಷ್ಟ ಕೃತಿಯಾಗಿ ಎಲ್ಲರ ಗಮನ ಸೆಳೆದಿತ್ತು.
`ಪ್ರೊಫೆಸರ್ ಹುಚ್ಚುರಾಯ’ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದ ಭಾರ್ಗವಿ ಅವರು, ರಾಜ್ಯ ಸರ್ಕಾರದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವಮೊಗ್ಗದ ಕರ್ನಾಟಕ ಸಂಘದ ಪ್ರಶಸ್ತಿ ಮತ್ತು ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ನಾಡಿನ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ, ಸಂಘ-ಸಂಸ್ಥೆಗಳ ಗೌರವ ಸನ್ಮಾನಗಳಿಗೆ ಭಾಜನರಾಗಿ ಪ್ರಶಸ್ತಿಗಳ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಹಾಗೆಯೇ ಇವೆಲ್ಲಕ್ಕೂ ಚಿನ್ನದ ಕಳಸವಿಟ್ಟಂತೆ ೨೦೧೯ರಲ್ಲಿ ಕರ್ನಾಟಕ ಸರ್ಕಾರ ಕಲಾವಿದೆ ಭಾರ್ಗವಿ ಅವರ ಜೀವಮಾನದ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅವರನ್ನು ಸಮಸ್ತ ಕನ್ನಡಿಗರ ಪರವಾಗಿ ಗೌರವಿಸಿದೆ.
ಕಲಾವಿದೆ ಭಾರ್ಗವಿ ನಾರಾಯಣ್ ಅವರು ಇಂದು ಭೌತಿಕವಾಗಿ ನಮ್ಮೊಡನೆ ಇಲ್ಲದಿರಬಹುದು. ಆದರೆ ಅವರ ಸುಮಾರು ಆರೂವರೆ ದಶಕಗಳ ಸುದೀರ್ಘಕಾಲದ ಬಣ್ಣದ ಬದುಕಿನ ಮತ್ತು ಸಾಹಿತ್ಯ ಜೀವನದ ಕೊಡುಗೆಯನ್ನು ಯಾವತ್ತೂ ನಾಡು ಮತ್ತು ನಾಡವರು ಮರೆಯುವುದಿಲ್ಲ.

Leave a Reply

Your email address will not be published. Required fields are marked *