ಮೈಸೂರು:17 ಅಕ್ಟೋಬರ್ 2021
ನ@ದಿನಿ
ವಿಜಯದಶಮಿ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಿ ತನಗೆ ವಹಿಸಿದ್ದ ಜವಾಬ್ದಾರಿ ಮುಗಿಸಿ ಹೊರಡುತ್ತಿದ್ದೇನೆ ಎಂದು ಅಂಬಾರಿಯ ನಾಯಕ ಅಭಿಮನ್ಯು ನಾನು ಹೋಗಿಬರಲೇ ಎಂದು ನಾಡಿನಿಂದ ತನ್ನ ತವರು ಮನೆಯತ್ತ ಹೆಜ್ಜೆ ಹಾಕಿದ್ದಾನೆ.
ಹೌದು ವಿಶ್ವವಿಖ್ಯಾತ 411 ನೇ ನಾಡಹಬ್ಬ ದಸರಾವನ್ನ ಯಶಸ್ವಿಯಾಗಿ ಮುಗಿಸಿ ಊರ ಕಡೆ ಹೊರಟ ಕ್ಯಾಫ್ಟನ್ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ,ಚೈತ್ರಾ, ನಿಶಾನೆ ಧನಂಜಯ, ನೌಪತ್‌ಆನೆಗಳಾದ ಗೋಪಾಲಸ್ವಾಮಿ, ಅಶ್ವಥ್ಥಾಮ, ಆನೆಗಳಿಗೆ ಅರಣ್ಯ ಇಲಾಖೆ, ಮೈಸೂರು ಅರಮನೆ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ಅರಮನೆಯ ಪುರೋಹಿತ ಪ್ರಹ್ಲಾದ್‌ರಾವ್ ಅವರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.ಡಿಸಿಎಫ್‌ಗಳಾದ ವಿ.ಕರಿಕಾಳನ್, ಕಮಲಾ ಕರಿಕಾಳನ್,ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್ ಅವರು ಬೆಲ್ಲ,ಕಬ್ಬು, ಹಣ್ಣು ನೀಡಿದರು.
ಕಳೆದ ೩೬ ದಿನಗಳಿಂದ ಮೈಸೂರಿನ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದ ಆನೆಗಳು, ಮಾವುತರು,ಕಾವಾಡಿಗಳು ಸೇರಿದಂತೆ ೫೫ ಮಂದಿಗೆ ತಲಾ ೧೦ ಸಾವಿರ ರೂ.ನಂತೆ ಚೆಕ್ ವಿತರಿಸಲಾಯಿತು. ಅರಮನೆ ಮಂಡಳಿ ವತಿಯಿಂದ ಪ್ರತಿವರ್ಷದಂತೆ ನೀಡುವ ಗೌರವಧನವನ್ನು ಈ ಬಾರಿಯೂ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರು ಪ್ರತಿಯೊಬ್ಬರಿಗೂ ವಿತರಿಸಿದರು. ಎಂಟು ಆನೆಗಳ ಮಾವುತರು,ಕಾವಾಡಿಗಳು, ಚಾಲಕರು, ಅರಣ್ಯ ರಕ್ಷಕರು ಸೇರಿ ಒಟ್ಟು ೫೫ ಮಂದಿಗೂ ನೀಡುವ ಮೂಲಕ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಲ್ಲಾ ಆನೆಗಳು ಸೋಂಡಿಲನ್ನು ಎತ್ತಿ ನಾಡಿನ ಜನತೆಗೆ ಮತ್ತೊಮ್ಮೆ ವಂದನೆ ಸಲ್ಲಿಸಿದಲ್ಲದೆ, ಮುಂದಿನ ವರ್ಷ ಬರುತ್ತೇವೆಂದು ಹೇಳುವುದರ ಮೂಲಕ ತಮ್ಮ ತಮ್ಮ ಶಿಬಿರಗಳತ್ತ ಪಯಣ ಬೆಳೆಸಿದವು. ಆನೆಗಳು ಕಾಡಿಗೆ ತೆರಳಲು ಇಷ್ಟವಿಲ್ಲದಿದ್ದರೂ, ಒಲ್ಲದ ಮನಸ್ಸಿನಿಂದ ಅಶ್ವತ್ಥಾಮ ಲಾರಿಯನ್ನೇರಿ ಹೊರಟವು.
ಪೊಲೀಸ್ ಬಂದೋಬಸ್ತ್‌ನಲ್ಲಿ ಲಾರಿಯಲ್ಲಿ ಮತ್ತಿಗೋಡು ಶಿಬಿರಕ್ಕೆ ಅಭಿಮನ್ಯು, ಗೋಪಾಲಸ್ವಾಮಿ, ದೊಡ್ಡ ಹರವೆ ಶಿಬಿರಕ್ಕೆ ಅಶ್ವತ್ಥಾಮ, ದುಬಾರೆ ಶಿಬಿರಕ್ಕೆ ವಿಕ್ರಮ,ಧನಂಜಯ,ಕಾವೇರಿ, ಬಂಡೀಪುರ ಅರಣ್ಯದ ರಾಮಾಪುರ ಕ್ಯಾಂಪ್‌ಗೆ ಚೈತ್ರಾ,ಲಕ್ಷ್ಮೀ ಆನೆಗಳು ತೆರಳಿತು.