ಆನೆ ಬಂತೊಂದಾನೆ……ಹ್ಯಾಪಿ ಬರ್ತ್ ಡೇ ಆನೆ

ಮೈಸೂರು:12 ಆಗಸ್ಟ್ 2021
ಸ್ಪೇಷಲ್ ರಿಪೋರ್ಟ್:ನಂದಿನಿ

               ಆನೆ ಬಂತೊಂದಾನೆ…ಯಾವ್ ಊರ್ ಆನೆ …..ಸಿದ್ದಪುರದಾನೆ ಇಲ್ಲಿಗೆಕೆ ಬಂತು ತನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳೊಕೆ ಬಂತು…..

               ಹೌದು ಆನೆ ಅಂದ್ರೇ ಎಲ್ಲರಿಗೂ ಇಷ್ಟ ನೋಡೋಕೆ ಗಾತ್ರ ದೊಡ್ಡದಾಗಿದ್ರೂ ಮನಸ್ಸು ಮಾತ್ರ ಮೃದು.ಕೆಲವೊಂದು ಆನೆಗಳು ರೊಚ್ಚಿಗೇಳೋದು ಉಂಟು.
ಶೌರ್ಯಕ್ಕೆ ಮತ್ತು ಸಾಹಸಕ್ಕೆ ಮತ್ತೊಂದು ಹೆಸರೇ ಆನೆ. ಮನುಷ್ಯನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಆನೆಗಳು ಇವತ್ತಿಗೂ ಜನಪದದ ಕತೆಗಳಲ್ಲಿ ದಿಗ್ವಿಜಯದ, ಸಮೃದ್ಧತೆಯ ಸಂಕೇತ. ಕಾಡೊಳಗೆ ಆಯಾಗಿದ್ದ ಆನೆಗಳು ಈಗೀಗ ನಾಡಿಗೆ ಲಗ್ಗೆ ಇಡುವುದು ಹೆಚ್ಚುತ್ತಿದೆ. ದೇಶದಲ್ಲಿ ಅತಿಹೆಚ್ಚು ಆನೆಗಳು ಕರ್ನಾಟಕದಲ್ಲೇ ಇದೆ ಎಂಬುದು ಹೆಮ್ಮೆಯ ವಿಚಾರ. ಇಂದು ವಿಶ್ವ ಆನೆಗಳ‌ ದಿನ (ಆ.12).ಈ ನಿಟ್ಟಿನಲ್ಲಿ ಆನೆಗಳ ಮೇಲೆ ಬೆಳಕು ಚೆಲ್ಲುವ ಮಾಹಿತಿ‌ ಇಲ್ಲಿದೆ.

                   ಕೃಪೆ:ಅನಿಲ್ ಅಂತರಸಂತೆ

ಏನಿದು ಆನೆ ದಿನ?
ಆನೆಗಳ ಜಾಗೃತಿ‌ ಮೂಡಿಸುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಎಲಿಫೆಂಟ್‌ ಫೌಂಡೇಶನ್‌ ವನ್ಯಜೀವಿ ಸಂಸ್ಥೆಯು 2012ರಿಂದ ಆಗಸ್ಟ್‌ 12ನೇ ತಾರೀಕನ್ನು ಅಂತಾರಾಷ್ಟ್ರೀಯ ಆನೆಗಳ ದಿನ ಎಂದು ಆಚರಿಸುತ್ತದೆ. 2016ರಿಂದ ಭಾರತದಲ್ಲೂ ಆನೆ ದಿನ ಆಚರಿಸಲಾಗುತ್ತಿದೆ.

ಮನುಷ್ಯರಂತೆ ಆನೆಗಳಲ್ಲಿಯೂ ಕುಟುಂಬ ವ್ಯವಸ್ಥೆ ಉಂಟು. ಇನ್ನು, ಕೆಲವು ಗಂಡಾನೆಗಳಿಗೆ ದಂತ ಮೂಡುವುದಿಲ್ಲ. ಇದಕ್ಕೆ ‘ಮಖನಾ‘ ಆನೆ ಅಂತಾರೆ.ಪ್ರಾಯಕ್ಕೆ ಬರುವ ಗಂಡಾನೆಗಳು ಹೆಣ್ಣಾನೆಯನ್ನು ಒಲಿಸಿಕೊಳ್ಳಲು ಕಾದಾಟ ನಡೆಸುತ್ತವೆ. ಸೋಲುವ ಆನೆ ಗುಂಪಿನಿಂದ ಬೇರ್ಪಟ್ಟು, ಒಂಟಿ ಸಲಗಗಳಾಗಿ ಕೆಲವು ದಿನ ಆಹಾರ ತ್ಯಜಿಸುತ್ತವೆ.ಆನೆಗಳಿಗೆ ಬೆವರು ಗ್ರಂಥಿ ಇರುವುದಿಲ್ಲ. ಹೀಗಾಗಿ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಲು ಮೈಮೇಲೆ ಮಣ್ಣು ಸುರಿದುಕೊಳ್ಳುತ್ತವೆ. ದೇಹ ಬಿಸಿಯಾಗುತ್ತಿದ್ದಂತೆ ನೀರಿಗಿಳಿಯುತ್ತವೆ. ಆನೆಯ ಸೊಂಡಿಲಿನಲ್ಲಿ 10 ಲಕ್ಷ ನರಕೋಶಗಳು ಇರುತ್ತವೆ. ಈ ಗ್ರಹಣ ಶಕ್ತಿಯ ಮೂಲಕವೇ ಅವು ಆಹಾರ, ನೀರಿನ ಸೆಲೆ ಮತ್ತು ಚಲಿಸುವ ಮಾರ್ಗಗಳನ್ನು ಹುಡುಕುತ್ತವೆ.
ಆನೆಗಳಿಗೆ ಕೇವಲ 6 ಹಲ್ಲುಗಳು ಮಾತ್ರವೇ ಇರುತ್ತವೆ. ಮೊದಲ ಹಲ್ಲು ಹುಟ್ಟುವುದು ಮೊದಲ 8 ತಿಂಗಳಿಗೆ. ಈತನಕ ಅವುಗಳಿಗೆ ತಾಯಿಯ ಹಾಲು ಮತ್ತು ಲದ್ದಿಯೇ ಆಹಾರ.ಆನೆಯ ದಂತ ಎಷ್ಟು ಬಲಿಷ್ಟ ಎಂದರೆ ಸರಾಸರಿ 5 ಸಾವಿರ ಕೆ.ಜಿ ತೂಗುವ ಗಂಡಾನೆ ತನ್ನ ಕೊಂಬಿನ ಮೇಲೆ 2 ಸಾವಿರ ಕೆ.ಜಿ ಸಾಮರ್ಥ್ಯದ ವಸ್ತುವನ್ನು ಅನಾಯಾಸವಾಗಿ ಹೊರುತ್ತವೆ.

ಶತಮಾನದ ದಸರಾ ಆನೆಗಳು
ಅರಣ್ಯ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, 1902ರಿಂದ ಈತನಕ ದಸರಾ ಉತ್ಸವದಲ್ಲಿ ಚಿನ್ನದ ಅಂಬಾರಿಯನ್ನು 11 ಆನೆಗಳು ಹೊತ್ತಿವೆ. 1902ರಲ್ಲಿ ವಿಜಯ ಬಹದ್ದೂರ್ ಆನೆಯಿಂದ ಮೊದಲ್ಗೊಂಡು ಇತ್ತೀಚಿನ ಬಲರಾಮನ ತನಕ ಈವರೆಗೆ ಚಾಮುಂಡೇಶ್ವರಿ ದೇವಿಯ ಚಿನ್ನದ ವಿಗ್ರಹವನ್ನು ಗಜೇಂದ್ರ, ನಂಜುಂಡ, ರಾಮಪ್ರಸಾದ್, ಸುಂದರರಾಜ, ಐರಾವತ, ಬಿಳಿಗಿರಿ ರಂಗ, ರಾಜೇಂದ್ರ, ದ್ರೋಣ ಮತ್ತು ಅರ್ಜುನ ಹೊತ್ತಿವೆ. ಇವುಗಳಲ್ಲಿ ದೈತ್ಯ ಆನೆ ಎಂದರೆ ಬಳಿಗಿರಿರಂಗ. ಇದು ಬರೋಬ್ಬರಿ ಹನ್ನೊಂದರೂವರೆ ಅಡಿ ಎತ್ತರ ಮತ್ತು 7,500 ಕೆ.ಜಿ ತೂಕವಿತ್ತಂತೆ!

ರಾಜ್ಯದಲ್ಲಿ ಎಂಟು ಆನೆ ಶಿಬಿರ
ದೇಶದಲ್ಲಿರುವ ಒಟ್ಟು ಆನೆಗಳ ಪೈಕಿ ಶೇ.25ರಷ್ಟು ಆನೆಗಳು ಕರ್ನಾಟಕದಲ್ಲೇ ಇವೆ. ದೇಶದಲ್ಲಿರುವ 50 ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಆನೆ ಸಾಂದ್ರತೆಯಲ್ಲಿ ಮುಂದಿದೆ. ಇಲ್ಲಿ ಎರಡು ಚದರ‌ ಕಿಮೀ ವ್ಯಾಪ್ತಿಯಲ್ಲಿ ಮೂರು ಆನೆಗಳಿವೆ. ರಾಜ್ಯದಲ್ಲಿ ಒಟ್ಟು ಎಂಟು ಆನೆ ಶಿಬಿರಗಳಿವೆ.

ಅರಮನೆಗೂ ಆನೆ ನಂಟು
ಆನೆಗಳಿಗೂ ಮೈಸೂರಿನ ಅರಸರಿಗೂ ಇದ್ದ ಸಂಬಂಧಕ್ಕೆ ಜ್ವಲಂತ ಉದಾಹರಣೆ ‘ಜಯ ಮಾರ್ತಾಂಡ’ ಆನೆ. ಅರಸರು ಪ್ರೀತಿಯಿಂದ ಆ ಆನೆಗಿಟ್ಟ ಹೆಸರಿದು. ಇದು ಮೈಸೂರು ಅರಸರ ಪಟ್ಟದ ಆನೆಯಾಗಿತ್ತು. ಅರಮನೆಯಲ್ಲಿ ಏನೇ ಶುಭ ಕಾರ‍್ಯ ನಡೆದರೂ ಜಯ ಮಾರ್ತಾಂಡನಿಗೆ ಪೂಜೆ-ಪುನಸ್ಕಾರ ಸಲ್ಲುತ್ತಿತ್ತು. ಹೀಗಿರುವಾಗ ಜಯ ಮಾರ್ತಾಂಡ ಮೃತಪಡುತ್ತಾನೆ. ಮಮ್ಮಲ ಮರುಗುವ ಅರಸು ಕುಟುಂಬ ಅದರ ಸ್ಮರಣಾರ್ಥ ಮೈಸೂರು ಅರಮನೆಯ ವಸ್ತು ಪ್ರದರ್ಶನ ದಿಕ್ಕಿನ ದ್ವಾರಕ್ಕೆ ‘ಜಯ ಮಾರ್ತಾಂಡ’ ಎಂದು ಹೆಸರಿಡುತ್ತದೆ.

ಆನೆ ಮೇಲೆ ಡಾಕ್ಯುಮೆಂಟರಿ!
ಪುಂಡಾನೆ, ಕಾಡಾನೆಗಳನ್ನು ಸೆರೆ ಹಿಡಿದಿರುವ ದಸರಾ ಆನೆಗಳ ಬಗ್ಗೆ ಮಾಡಿರುವ ಕಾರ್ಯಾಚರಣೆ ಡಾಕ್ಯುಮೆಂಟರಿಯೂ ಆಗಿದೆ. 1990ರಲ್ಲಿ ‘ದಿ ಲಾಸ್ಟ್‌ ಮೈಗ್ರೇಷನ್‌: ವೈಲ್ಡ್‌ ಎಲಿಫೆಂಟ್‌ ಕ್ಯಾಪ್ಚರ್‌ ಇನ್‌ ಸರ್‌ಗುಜ’ ಎಂಬ ಹೆಸರಿನ ಡಾಕ್ಯುಮೆಂಟರಿ ಪುಂಡಾನೆ, ಕಾಡಾನೆಗಳನ್ನು ಪಳಗಿಸಿದ ಯಶೋಗಾಥೆಯನ್ನು ಹೇಳುತ್ತದೆ. ಈ ಡಾಕ್ಯುಮೆಂಟರಿಗೆ ಆಸ್ಕರ್‌ ಪ್ರಶಸ್ತಿ ಕೂಡ ಒಲಿದೆ ಬಂದಿದೆ.

ದೇಶದಲ್ಲಿವೆ 27,312 ಆನೆಗಳು
2017ರಲ್ಲಿ ನಡೆದ ಏಳನೇ ಆನೆ ಗಣತಿ ಪ್ರಕಾರ ದೇಶದಲ್ಲಿ ಒಟ್ಟು 27,312 ಆನೆಗಳಿವೆ. 6,049 ಆನೆಗಳು ಕರ್ನಾಟಕದಲ್ಲಿದ್ದರೆ, ಅಸ್ಸಾಂನಲ್ಲಿ 5,719, ಕೇರಳದಲ್ಲಿ 3,504 ಆನೆಗಳಿವೆ. ಆಫ್ರಿಕಾ ಖಂಡದಲ್ಲಿ 4.70 ಲಕ್ಷ ಹಾಗೂ ಏಷ್ಯಾದಲ್ಲಿ 50 ಸಾವಿರ ಆನೆಗಳಿವೆ ಎಂದು ಅಂದಾಜಿಸಲಾಗಿದೆ.

ಮಾನವ ಮತ್ತು ಆನೆ ಸಂಘರ್ಷ
ಪ್ರಸ್ತುತ ಮಾನವ ಮತ್ತು ಆನೆಗಳ ಸಂಘರ್ಷ ಹೆಚ್ಚಾಗಿದೆ.
ಪ್ರತಿ ವರ್ಷ ಸುಮಾರು 400 ಜನರು ಆನೆಗಳಿಂದ ಮೃತಪಡುತ್ತಿದ್ದಾರೆ. ಮಾನವರಿಂದ ಸುಮಾರು 100ರಿಂದ 300 ಆನೆಗಳು ಹತ್ಯೆಗೀಡಾಗುತ್ತಿವೆ. ಅರಣ್ಯಕ್ಕೆ ಹೊಂದಿಕೊಂಡಿರುವ ಕೃಷಿ ಭೂಮಿಗಳಿಗೆ ಬೇಲಿ, ಕಂದಕಗಳ ನಿರ್ಮಾಣ, ಸೌರಶಕ್ತಿ ಬೇಲಿ ರಚನೆ ಮಾಡಿ ಆನೆಗಳ ಹಿಮ್ಮೆಟ್ಟಿಸಲು, ಅವುಗಳ ಚಲನವಲನದ ಮೇಲೆ ನಿಗಾ ಇಡಲು ಕ್ರಮ ಅಗತ್ಯ. ಅಲ್ಲದೆ, ಆನೆಗಳಿಗೆ ಸಾಕಷ್ಟು ಮೇವು, ನೀರು ಸಿಗುವಂತೆ ಹಲವು ಕಾಮಗಾರಿಗಳನ್ನು ಅರಣ್ಯ ಪ್ರದೇಶದಲ್ಲಿ ಕೈಗೊಳ್ಳಬೇಕು.

ಪಾರಂಪರಿಕೆ ಪ್ರಾಣಿ
1879ರಲ್ಲಿ ಆನೆಗಳ ಸಂರಕ್ಷಣೆಗೆಂದು ಅಧಿನಿಯಮ ಹೊರಡಿಸಲಾಗಿದ್ದು, ವಿಶೇಷ ಪರವಾನಗಿ ಹೊಂದದ ಹೊರತು ಕಾಡನೆಗಳನ್ನು ಕೊಲ್ಲುವುದು, ಗಾಯಗೊಳಿಸುವುದು, ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿದೆ. 2010ರಲ್ಲಿ ಭಾರತ ಸರಕಾರ ಆನೆಗಳನ್ನು ‘ಪಾರಂಪರಿಕೆ ಪ್ರಾಣಿ’ ಎಂದೇ ಘೋಷಿಸಿದೆ.

ಖೆಡ್ಡಾ ಮತ್ತು ಕರ್ನಾಟಕ
ಆನೆಗಳನ್ನು ಮೂರು ವಿಧಾನದಲ್ಲಿ ಸೆರೆ ಹಿಡಿದು ಪಳಗಿಸಲಾಗುತ್ತದೆ. ಕಪ್ಪಾ (ನೆಲದಲ್ಲಿ ಗುಂಡಿ ತೋಡಿ, ಇವುಗಳ ಮೇಲೆ ಹುಲ್ಲಿನ ಹೊದಿಕೆ ಹಾಸಿ ಆನೆಗಳನ್ನು ಕಂದಕ್ಕೆ ಬೀಳುವಂತೆ ಮಾಡುವುದು), ಖೆಡ್ಡಾ (ನೀಲ ಗಿರಿ ಮರದಿಂದ ದೊಡ್ಡಿ ನಿರ್ಮಿಸಿ ಇವುಗಳ ಒಳಗೆ ಕಾಡಾನೆ ನುಸುಳುವಂತೆ ಮಾಡಿ ಸೆರೆಯಾಗಿಸುವುದು) ಮತ್ತು ಅರವಳಿಕೆ ಚುಚ್ಚುಮದ್ದು. ಆದರೆ, ಈಗ ಕಪ್ಪಾ ಮತ್ತು ಖೆಡ್ಡಾಕ್ಕೆ ಸರಕಾರ ಬ್ರೇಕ್ ಹಾಕಿದೆ. ಅಂದಹಾಗೆ, ಈ ಹಿಂದೆ ಕರ್ನಾಟಕದಲ್ಲಿ ಕಾಕನಕೋಟೆ (ನಾಗರಹೊಳೆ), ಬೂದಿಪಡಗ (ಬಿಳಿಗಿರಿ ರಂಗನ ಬೆಟ್ಟ) ಮತ್ತು ಭದ್ರಾ ಅಣೆಕಟ್ಟು ಪ್ರದೇಶದಲ್ಲಿ ಮಾತ್ರವೇ ಕಪ್ಪಾ ಮತ್ತು ಖೆಡ್ಡಾ ಮೂಲಕ ಆನೆಯನ್ನು ಸಾಕಾನೆಗಳ ಸಹಾಯದಿಂದ ಹಿಡಿಯಲಾಗುತ್ತಿತ್ತು. 1890ರಿಂದ 1971ರ (ರಾಜ್ಯದಲ್ಲಿ ನಡೆದ ಕೊನೆಯ ಖೆಡ್ಡಾ) ಅವಧಿಯಲ್ಲಿ ಕಾಕನಕೋಟೆಯಲ್ಲೇ 1,571 ಆನೆಗಳನ್ನು ಸೆರೆ ಹಿಡಿಯಲಾಗಿತ್ತು.

ಆನೆಯಿಂದ ಹಾಲಿವುಡ್‌ಗೆ ಹಾರಿದ ಸಾಬು!

ಆನೆಗಳನ್ನು ಪ್ರೀತಿಯಿಂದ ಕಾಣುತ್ತಿದ್ದ ಮೈಸೂರಿನ ಸಾಬು ದಸ್ತಗಿರ್‌ ಎಂಬ ಮಾವುತರೊಬ್ಬರ ಮಗ ಹಾಲಿವುಡ್‌ಗೆ ಹಾರಿ ಸಿನಿಮಾ ಮೂಲಕ ಹೆಸರು ಮಾಡಿದ್ದಾನೆ. 1937ರಲ್ಲಿ ಸಾಬು ಅಭಿನಯಿಸಿದ ಮೊದಲ ಚಿತ್ರ ‘ಎಲಿಫೆಂಟ್‌ ಬಾಯ್‌’ ತೆರೆ ಕಂಡಿತು. ನಂತರ ‘ದಿ ಜಂಗಲ್‌ ಬುಕ್‌’, ‘ವೈಟ್‌ ಸೇಜ್‌’, ‘ಜಾಗ್ವಾರ್‌’, ‘ಸಾಬು ಆ್ಯಂಡ್‌ ಮ್ಯಾಜಿಕ್‌ ರಿಂಗ್‌’ ಸೇರಿದಂತೆ ಬರೋಬ್ಬರಿ 22 ಸಿನಿಮಾದಲ್ಲಿ ಸಾಬು ಅಭಿನಯಿಸಿದರು. ಕನ್ನಡಿಗನೊಬ್ಬ ದೂರದ ಹಾಲಿವುಡ್‌ನಲ್ಲಿ ಹೆಸರು ಗಳಿಸಿದ್ದು ಚರಿತ್ರೆಯಲ್ಲಿ ದಾಖಲಾಯಿತು. ಆನೆಗಳ ಮೇಲೆ ಆತನಿಗಿದ್ದ ಪ್ರೀತಿಯೇ ಇದಕ್ಕೆಲ್ಲಾ ಕಾರಣ ಎಂಬುದು ವಿಶೇಷ.

 

Leave a Reply

Your email address will not be published. Required fields are marked *