ನಾಗರಹೊಳೆಯಲ್ಲಿ ವಿಶ್ವ ಆನೆ ದಿನಾಚರಣೆ, ಸಾಕಾನೆಗೆ ಬೂರೀ ಭೋಜನ, ಸಿಬ್ಬಂದಿ ಮಕ್ಕಳಿಗೆ ಆಟೋಟ ಸ್ಪರ್ಧೆ

 

ಹುಣಸೂರು: 12 ಆಗಸ್ಟ್ 2021

           ವಿಶ್ವ ಆನೆ ದಿನಾಚರಣೆ ಅಂಗವಾಗಿ ನಾಗರಹೊಳೆ ಉದ್ಯಾನವನದ ಮತ್ತಿಗೋಡು ಆನೆ ಕ್ಯಾಂಪಿನಲ್ಲಿ ಸಾಕಾನೆಗಳಿಗೆ ಜಳಕ ಮಾಡಿಸಿ, ಶೃಂಗರಿಸಿದ್ದರಲ್ಲದೆ, ಆನೆಗಳಿಗೆ ಬಾಳೆಹಣ್ಣ-ಬೆಲ್ಲ, ಕಬ್ಬು ನೀಡಿ ಸತ್ಕರಿಸಲಾಯಿತು. ಸಿಬ್ಬಂದಿಗಳ ಮಕ್ಕಳಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನ, ಕೊಡುಗೆ ನೀಡಿ ವಿಶಿಷ್ಟವಾಗಿ ಆಚರಿಸಲಾಯಿತು.

ವಿಶ್ವ ಆನೆ ದಿನಾಚರಣೆ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಹಬ್ಬದ ವಾತಾವರಣ ಏರ್ಪಡಿಸಲಾಗಿತ್ತಲ್ಲದೆ,
ಅರಣ್ಯ ಇಲಾಖೆಯ ಹೆಮ್ಮೆಯ, ಶಿಬಿರದ ಆಕರ್ಷಕ ಆನೆಯಾದ ಅಭಿಮನ್ಯು, ಪುಣಾಣಿ ಆನೆಗಳಾದ ಸೂರ್ಯ, ವರಲಕ್ಷ್ಮಿ, ಭುವನೇಶ್ವರಿ ಜತೆಗೆ ಚಾಮುಂಡೇಶ್ವರಿ, ಭೀಮ, ಗೋಪಾಲಸ್ವಾಮಿ, ಸರಳ, ಮಹೇಂದ್ರ, ಶ್ರೀರಂಗ, ಮಹಾರಾಷ್ಟ್ರದ ಭೀಮ್, ರಾಮಯ್ಯ, ಮಣಿಕಂಠ, ಶ್ರೀಕಂಠ, ಕೃಷ್ಣ, ಸೋಮಶೇಖರ್, ಮಸ್ತಿ, ದೃವ, ರವಿ, ಕ್ಯಾತ, ಗಣೇಶ, ಬಲರಾಮ, ಆಶೋಕ ಸೇರಿದಂತೆ ಎಲ್ಲಾ ಆನೆಗಳನ್ನು ಕಂಠಾಪುರ ಕೆರೆಯಲ್ಲಿ ಮಜ್ಜನ ಮಾಡಿಸಿ ಅಲಂಕರಿಸಲಾಗಿತ್ತು. ಜೊತೆಗೆ ಆನೆಗಳಿಗಾಗಿ ವಿಶಿಷ್ಟವಾಗಿ ತಯಾರಿಸಿದ್ದ ಭೂರಿ ಭೋಜನವನ್ನು ಚಪ್ಪರಿಸಿದವು. ಆತಿಥಿಗಳು ಸಹ ಆನೆಗಳಿಗೆ ಪ್ರೀತಿಯಿಂದ ಹಣ್ಣು, ಬೆಲ್ಲ, ಕಬ್ಬು ತಿನ್ನಿಸಿ ಸಾರ್ಥಕ ಭಾವ ಮೆರೆದರು.

ಮಾವುತರು,ಕವಾಡಿಗಳು, ಮಕ್ಕಳಿಗೆ ಕ್ರೀಡಾ ಸ್ಪರ್ಧೆ;
ಶಿಬಿರದ ಆವರಣದಲ್ಲಿ ಮಾವುತ-ಕವಾಡಿಗಳು ನಿತ್ಯದ ಜಂಜಾಟ ಬಿಟ್ಟು ವಾಲಿಬಾಲ್ ಆಟವಾಡಿದರು. ಬಹುಮಾನ ಗಿಟ್ಟಿಸಿದರು. ಇನ್ನು ಮಾವುತ-ಕವಾಡಿಗಳ ಮಕ್ಕಳಿಗೆ ಚಿತ್ರಕಲೆ, ಮಣ್ಣಿನಲ್ಲಿ ಮೂರ್ತುಗಳನ್ನು ತಯಾರಿಕೆ ಹಾಗೂ ಸಾಂಸ್ಕೃತಿಕ ಸ್ಪರ್ಧೇ ಏರ್ಪಡಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆನ್‌ಲೈನ್ ತರಗತಿ ಹಿತದೃಷ್ಟಿಯಿಂದ ಸಾಕಾನೆ ಶಿಬಿರದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಗೆ ಟ್ಯಾಬ್ ಹಾಗೂ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಾಗ್ರಿಗಳನ್ನು ಕೊಡುಗೆಯಾಗಿ ಗಣ್ಯರು ವಿತರಿಸಿದರು.
ಶಿಬಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಆನೆಗಳಿಗೂ ದಿನಾಚರಣೆ ಇರುವುದು ಸಂತೋಷ, ಇತ್ತೀಚೆಗೆ ಆನೆ-ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ನಿಯಂತ್ರಿಸಲು ಪ್ರಾಮಾಣಿಕ ಶ್ರಮ ಹಾಕುತ್ತಿರುವುದರಿಂದ ಸಂಘರ್ಷ ತಗ್ಗಿದೆ. ಮಾನವನಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಎಲ್ಲರೂ ಅರಿಯಬೇಕು. ಮಾನವ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಕಾಡಿದ್ದರೆ ನಾವು ಎನ್ನುವ ಮನೋಬಾವ ಬೆಳೆಸಿಕೊಳ್ಳಬೇಕೆಂದರು.
ನಾಗರಹೊಳೆ ಮುಖ್ಯಸ್ಥ ಡಿ.ಮಹೇಶ್‌ಕುಮಾರ್ ವಿಶ್ವ ಆನೆ ದಿನದ ಕುರಿತು ಮಾಹಿತಿ ನೀಡಿದರು.

ಕೊಡಗು ಪೋಲಿಸ್ ವರಿಷ್ಟಾಧಿಕಾರಿ ಕ್ಷಮಾಮಿಶ್ರಾ, ಉಪ ವಿಭಾಗಾಧಿಕಾರಿ ಈಶ್ವರ್‌ಕುಮಾರ್ ಬಾಗವಹಿಸಿದ್ದರು.
ಸನ್ಮಾನ: ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಅಶ್ವತ್ತಾಮ ಆನೆಯ ಮಾವುತ ಗಣೇಶ, ವರಲಕ್ಷ್ಮಿ ಆನೆಯ ಕವಾಡಿ ಜೆ.ಕೆ ರವಿಯವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಎಸಿಎಫ್ ಸತೀಶ್, ಆರ್.ಎಫ್.ಒ.ಕಿರಣ್ ಎಸ್.ಟಿ.ಪಿ.ಎಫ್ ಸಿಬ್ಬಂದಿಗಳು, ಮಾವುತ-ಕವಾಡಿ ಕುಟುಂಬಸ್ಥರು ಹಾಗೂ ಅರಣ್ಯ ಸಿಬ್ಬಂದಿಗಳು ಸಹ ಹಾಜರಿದ್ದರು.

Leave a Reply

Your email address will not be published. Required fields are marked *