ನಂದಿನಿ ಮೈಸೂರು
ಮಂಡ್ಯದಲ್ಲಿ ಮಳೆ ಚಳಿ ನಡುವೆಯೂ ಮ್ಯಾರಥಾನ್ ಯಶಸ್ವಿ
೫ ಕಿ.ಮೀ. ಓಡಿದ ವಿವಿಧ ಜಿಲ್ಲೆಯ ಓಟಗಾರರು : ಮೈಸೂರಿಗೆ ಸಿಂಹ ಪಾಲು : ಯುವಕರಿಗೆ ಸ್ಪೂರ್ತಿಯಾದ ಹಿರಿಯನಾಗರೀಕರು : ವಿಜೇತರಿಗೆ ನಗದು ಬಹುಮಾನ
ಮಂಡ್ಯ : ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಭಾಷೆ ಬಳಸುವ ಕೀರ್ತಿಗೆ ಭಾಜನವಾಗಿರುವ ಮಂಡ್ಯ ನೆಲದಲ್ಲಿ ಸ್ವಾಭಿಮಾನಿ ಕೆಚ್ಚೆದೆಯ ನೂರಾರು ಮಂದಿ ಓಟಗಾರರು ಚಳಿ ಮಳೆಯನ್ನು ಲೆಕ್ಕಿಸದೆ ೫ ಕಿ.ಮೀ. ಓಡಿ ಮತ್ತೊಂದು ದಾಖಲೆ ಬರೆದರು.
ಕಾಯಕಯೋಗಿ ಫೌಂಡೇಶನ್ ಭಾನುವಾರ ಬೆಳಿಗ್ಗೆ ಮಂಡ್ಯದ ಪ್ರವಾಸಿಮಂದಿರದಿಂದ ಬೇವಿನಹಳ್ಳಿ ಗ್ರಾಮದವರೆಗೆ ಕನ್ನಡರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಮಂಡ್ಯ ಮ್ಯಾರಥಾನ್ ಓಟಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಾಲೆ, ಕಾಲೇಜು, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ‘ಕನ್ನಡಕ್ಕಾಗಿ ಓಡು-ಕನ್ನಡಕ್ಕಾಗಿ ಬಾಳು’ ಘೋಷಣೆಯೊಂದಿಗೆ ಸುರಿಯುವ ಮಳೆಯಲ್ಲೇ ದಾಪುಗಾಲು ಹಾಕಿ ಭಾಷಾಭಿಮಾನ ಮೆರೆದರು.
ಕಾಂಗ್ರೆಸ್ ಮುಖಂಡ ಡಾ.ಎಂ.ಕೃಷ್ಣ, ಜೆಡಿಎಸ್ ಮಾಧ್ಯಮ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಕನ್ನಡಪರ ಹೋರಾಟಗಾರ ಅನಿಲ್‌ಕುಮಾರ್, ಕಿರುತೆರೆ ನಟಿ ಸುಧಾರಾಣಿ, ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ಡಾ.ಮಾದೇಶ್, ತ್ರಿಭುವನ್, ಭೀಮೇಶ್ ಓಟಕ್ಕೆ ಕನ್ನಡಭಾವುಟ ಬೀಸಿ ಚಾಲನೆ ನೀಡಿದರು.
ಮುಂಜಾನೆ ೬ಗಂಟೆಗೆ ಜಮಾಯಿಸಿದ ಓಟಗಾರರು ಕೆಂಪು, ಹಳದಿ, ಕಪ್ಪು, ಹಸಿರು, ಶ್ವೇತ ವರ್ಣದ ಟೀಶರ್ಟ್‌ಗಳನ್ನು ತೊಟ್ಟು ಪ್ರವಾಸಿಮಂದಿರದಿಂದ ಪಿಇಎಸ್ ಕಾಲೇಜು, ಜೈಲು ರಸ್ತೆ, ಮರೀಗೌಡ ಬಡಾವಣೆ ಮಾರ್ಗವಾಗಿ ಬೇವಿನಹಳ್ಳಿಯ ಸೋಮೇಶ್ವರ ಸಮುದಾಯ ಭವನದವರೆಗೆ ೫ ಕಿ.ಮೀ. ಮಿಂಚಿನ ಓಟ ನಡೆಸಿ ವಿನೂತನವಾಗಿ ರಾಜ್ಯೋತ್ಸವ ಆಚರಣೆ ಮಾಡಿದರು.
ಕೊರೆವ ಚಳಿ, ತುಂತುರು ಹನಿಯನ್ನು ಲೆಕ್ಕಿಸದೆ ಕನ್ನಡಭಾವುಟ ಹಿಡಿದ ನೂರಾರು ಮಂದಿ ಕಾರ್ಯಕರ್ತರೊಂದಿಗೆ ಸೇನೆಗೆ ಸೇರಬಯಸುವ ಅಭ್ಯರ್ಥಿಗಳಂತೆ ಓಡುತ್ತಿದ್ದ ಓಟಗಾರರನ್ನು ಕಂಡು ಸಾರ್ವಜನಿಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
೫೦ ರಿಂದ ೭೦ ವರ್ಷದ ಹಿರಿಯ ನಾಗರೀಕರು ಸಹ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡು ಯುವಕರಿಗೆ ಸ್ಪೂರ್ತಿ ತುಂಬಿದ್ದು ವಿಶೇಷವಾಗಿತ್ತು.
ವಿಜೇತರು : ೫ ಕಿ.ಮೀ. ಓಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮೈಸೂರಿನ ಕ್ರೀಡಾಪಟುಗಳಾದ ಅನಿಲ್‌ಕುಮಾರ್(ಪ್ರಥಮ) ಮಣಿಕಂಠ(ದ್ವಿತೀಯ) ಹಾಗೂ ರಾಹುಲ್(ತೃತೀಯ) ಸ್ಥಾನ ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ ಮೈಸೂರಿನ ಕೆ.ಎಂ.ಅರ್ಚನ(ಪ್ರಥಮ), ಎಂ.ಕೆ.ಚಿಕ್ಕಮ್ಮ(ದ್ವಿತೀಯ) ಹಾಗೂ ಮಂಡ್ಯದ ಪುಣ್ಯಶ್ರೀ(ತೃತೀಯ) ಸ್ಥಾನ ತಮ್ಮದಾಗಿಸಿಕೊಂಡರು.
ಹಿರಿಯರ ವಿಭಾಗದಲ್ಲಿ ಮೈಸೂರಿನ ಹರೀಶ್ (ಪ್ರಥಮ), ಲಕ್ಷ್ಮೀಶ್(ದ್ವಿತೀಯ) ಬೇವಿನಹಳ್ಳಿ ಗ್ರಾಮದ ರಾಜು ಎಂ.(ತೃತೀಯ) ಸ್ಥಾನ ಪಡೆದುಕೊಂಡರು.
ನಗದು ಬಹುಮಾನ : ಮ್ಯಾರಥಾನ್ ಓಟದಲ್ಲಿ ವಿಜೇತರಿಗೆ ಕ್ರಮವಾಗಿ ೧೦ಸಾವಿರ, ೭,೫೦೦ ರೂ. ಮತ್ತು ತೃತೀಯ ಸ್ಥಾನಪಡೆದವರಿಗೆ ೫,೦೦೦/- ನಗದು ಬಹುಮಾನದ ಚೆಕ್ ವಿತರಣೆ ಮಾಡಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ೨೩೦ಕ್ಕೂ ಹೆಚ್ಚು ಮಂದಿ ಓಟಗಾರರು ಮ್ಯಾರಥಾನ್ ಓಟಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಬಹುಮಾನ ವಿತರಣೆ ಕಾರ್ಯಕ್ರಮವನ್ನು ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಅಶೋಕ್ ಜಯರಾಂ ಉದ್ಘಾಟಿಸಿ ಮಾತನಾಡಿದರು. ಬೇವಿನಹಳ್ಳಿ ಗ್ರಾ.ಪಂ.ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಕಲಾಪೋಷಕ ಬಿ.ಎಂ.ಅಪ್ಪಾಜಪ್ಪ, ಕಾಂಗ್ರೆಸ್ ಮುಖಂಡ ಚಿದಂಬರ್, ರಾಗಿಮುದ್ದನಹಳ್ಳಿ ನಾಗೇಶ್, ಡಾ.ಸ್ಪೂರ್ತಿ, ಬಿ.ಕೆ.ಅರುಣಜ್ಯೋತಿ, ಡಾ.ಯೋಗೇಶ್, ಸಿಂಹಶಿವುಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಚುಂಚಯ್ಯ ಪ್ರಾರ್ಥಿಸಿ, ಗಾಯಕ ನಾರಾಯಣಗಸ್ವಾಮಿ ನಿರೂಪಿಸಿದರು.
ಮಂಡ್ಯದ ಪ್ರವಾಸಿಮಂದಿರದಿಂದ ಬೇವಿನಹಳ್ಳಿಯವರೆಗೆ ಕಾಯಕಯೋಗಿ ಫೌಂಡೇಶನ್ ಆಯೋಜಿಸಿದ್ದ ರಾಜ್ಯಮಟ್ಟದ ೫ ಕಿ.ಮೀ. ಮಂಡ್ಯ ಮ್ಯಾರಥಾನ್ ಓಟಸ್ಪರ್ಧೆಗೆ ಕಾಂಗ್ರೆಸ್ ಮುಖಂಡ ಡಾ.ಎಂ.ಕೃಷ್ಣ ಹಾಗೂ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಚಾಲನೆ ನೀಡಿದರು.
ಮಂಡ್ಯ ಮ್ಯಾರಥಾನ್ ವಿಜೇತರಿಗೆ ಬೇವಿನಹಳ್ಳಿಯ ಶ್ರೀ ಸೋಮೇಶ್ವರ ಸಮುದಾಯ ಭವನದಲ್ಲಿ ಗಣ್ಯರು ನಗದು ಬಹುಮಾನದ ಚೆಕ್ ವಿತರಿಸಿ ಅಭಿನಂದಿಸಿದರು. ಜೆಡಿಎಸ್ ಮುಖಂಡ ಸುರೇಶ್, ಡಾ.ಎಂ.ಕೃಷ್ಣ, ಎಂ.ಶಿವಕುಮಾರ್, ಬೇವಿನಹಳ್ಳಿಮಹೇಶ್, ಅನಿಲ್‌ಕುಮಾರ್, ಚಿದಂಬರ್, ಬಿ.ಎಂ.ಅಪ್ಪಾಜಪ್ಪ, ಡಾ.ಸ್ಪೂರ್ತಿ, ಅರುಣಜ್ಯೋತಿ, ಸುಧಾರಾಣಿ ಮತ್ತಿತರರಿದ್ದರು.