ಸಿನಿಮಾ: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮಾಜಿ ಸ್ಪರ್ಧಿಗಳಾದ ನಟ ಶಿಶಿರ್ ಶಾಸ್ತ್ರಿ ಮತ್ತು ನಟಿ ಐಶ್ವರ್ಯಾ ಸಿಂಧೋಗಿ (ಅಭಿಮಾನಿಗಳ ಪ್ರೀತಿಯ ‘ಐಶಿರ್’ ಜೋಡಿ) ನವೆಂಬರ್ 22, 2026 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕುಟುಂಬಸ್ಥರು, ಆಪ್ತರು ಹಾಗೂ ಕಿರುತೆರೆ ಮತ್ತು ಚಂದನವನದ ಗಣ್ಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಈ ಜೋಡಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದೆ. ನಿಶ್ಚಿತಾರ್ಥದ ವೇದಿಕೆಯ ಅಲಂಕಾರದಿಂದ ಹಿಡಿದು ಇಬ್ಬರ ಉಡುಪಿನವರೆಗೂ ‘ಶಿವನ ಥೀಮ್’ ಪ್ರಮುಖ ಆಕರ್ಷಣೆಯಾಗಿತ್ತು.

ಬಿಗ್ ಬಾಸ್ ಮನೆಯೊಳಗೆ ಶುರುವಾದ ಇವರ ಸ್ನೇಹ, ದೊಡ್ಮನೆಯಿಂದ ಹೊರಬಂದ ಬಳಿಕ ಪ್ರೀತಿಗೆ ತಿರುಗಿತ್ತು. ಈ ಜೋಡಿಯ ಕುರಿತು ಹರಿದಾಡುತ್ತಿದ್ದ ಎಲ್ಲಾ ಗಾಸಿಪ್ ಹಾಗೂ ವದಂತಿಗಳಿಗೆ ನಿಶ್ಚಿತಾರ್ಥಕ್ಕೂ ಮುನ್ನ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದ ಇವರು, ಇದೀಗ ದಾಂಪತ್ಯ ಜೀವನದ ಹೊಸ್ತಿಲಿಗೆ ಕಾಲಿಟ್ಟಿದ್ದಾರೆ. ನಿಶ್ಚಿತಾರ್ಥದ ವೇಳೆ ಮೊದಲು ಪ್ರಪೋಸ್ ಮಾಡಿದ್ದು ತಾನೇ ಎಂದು ಐಶ್ವರ್ಯಾ ಹಂಚಿಕೊಂಡಿದ್ದಾರೆ.
ಈ ಸಂಭ್ರಮದಲ್ಲಿ ಬಿಗ್ ಬಾಸ್ ಸಹಸ್ಪರ್ಧಿಗಳು ಹಾಗೂ ಅನುಪಮಾ ಗೌಡ, ನೇಹಾ ಗೌಡ, ಸ್ನೇಹಿತ್, ತನಿಷಾ ಕುಪ್ಪಂಡ, ನಟಿ ರಜಿನಿ ದಂಪತಿ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿ ಶುಭ ಹಾರೈಸಿದ್ದಾರೆ.
ಈ ಜೋಡಿಯ ವಿವಾಹವು ಫೆಬ್ರವರಿ 2027 ರಲ್ಲಿ ನಡೆಯಲಿದೆ ಎಂದು ಶಿಶಿರ್ ಶಾಸ್ತ್ರಿ ತಿಳಿಸಿದ್ದಾರೆ. ಯಾವುದೇ ಅದ್ಧೂರಿ ಕಲ್ಯಾಣ ಮಂಟಪ, ಸಂಗೀತ್ ಅಥವಾ ರಿಸೆಪ್ಷನ್ ಬದಲಿಗೆ, ಶಿವನ ದೇವಾಲಯದಲ್ಲಿ ಸಂಪ್ರದಾಯಬದ್ಧವಾಗಿ ಹಾಗೂ ಸರಳವಾಗಿ ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದಾರೆ.