ತುಮಕೂರು ಯುವಕನ ಕೊಲೆ ಪ್ರಕರಣ: ತಾಯಿಯೇ ಕೊಲೆಗಾರ್ತಿ!

ತುಮಕೂರು: ತಾಯಿ ಅಂದ್ರೆ ಪ್ರತ್ಯಕ್ಷ ದೇವರು.. ತಾಯಿ ಅಂದ್ರೆ ಜಗತ್ತು.. ಜಗತ್ತಲ್ಲಿ ಯಾರೇ ಕೈ ಬಿಟ್ಟರೂ ಹೆತ್ತ ತಾಯಿ ಮಾತ್ರ ಮಕ್ಕಳ ಕೈ ಬಿಡಲ್ಲ.. ಆದ್ರೆ ಇಲ್ಲೊಬ್ಬಳು ಮಹಾ ತಾಯಿ ತಾನೇ ತನ್ನ ಕರುಳ ಬಳ್ಳಿಯನ್ನ ಕತ್ತರಿಸಿ ತಾಯಿ ಕುಲಕ್ಕೆ ಕಳಂಕ ತಂದಿದ್ದಾಳೆ.

ತುಮಕೂರು ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಮೊನ್ನೆ ಮನೆಯ ಹೊರಗೆ ಮಲಗಿದ್ದ ಯುವಕ ಮುತ್ತುರಾಜ್ ಶವ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಸ್ಥಳದಲ್ಲಿ ತಾಯಿ ಶಿವಮ್ಮ ಆಕ್ರಂದನ ಕರುಳು ಕಿತ್ತುಬರುವಂತಿತ್ತು. ಕೊಲೆ ಮಾಡಿದ್ದು ಯಾರು ಅನ್ನೋದನ್ನ ಪತ್ತೆ ಮಾಡೋದು ಕೂಡ ಪೊಲೀಸರಿಗೆ ಸವಾಲಾಗಿತ್ತು.

ಅನ್ಯ ಜಾತಿಯ ವಿವಾಹಿತ ಮಹಿಳೆ ಜೊತೆ ಪ್ರೀತಿ ತಂದ ಆಪತ್ತು!
ಕೊಲೆಯಾದ ಯುವಕ ಮುತ್ತುರಾಜ್ ಅದೇ ಗ್ರಾಮದ ಅನ್ಯಜಾತಿಯ ವಿವಾಹಿತ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದರು. ಆದರೂ ಆಕೆಯನ್ನೇ ಮದುವೆಯಾಗುವುದಾಗಿ ಮುತ್ತುರಾಜ್ ಹೇಳಿಕೊಂಡು ಓಡಾಡುತ್ತಿದ್ದ. ಮಗನ ಈ ನಿರ್ಧಾರದಿಂದ ತಾಯಿ ಶಿವಮ್ಮ ಬೇಸರಗೊಂಡಿದ್ದಳು. ಅಲ್ಲದೆ, ಮಗನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ್ದಳು.

ಇದೇ ಕಾರಣಕ್ಕೆ ರಾತ್ರಿ ಮನೆಯ ಹೊರಗೆ ಮಲಗಿದ್ದ ಮುತ್ತುರಾಜ್ ಮೇಲೆ ಹಲ್ಲೆ ಮಾಡಲು ಶಿವಮ್ಮ ನಿರ್ಧರಿಸಿದ್ದಳು. ಅದರಂತೆ, ಮನೆಯವರೆಲ್ಲರೂ ಮಲಗಿದ್ದ ವೇಳೆ ಕಬ್ಬಿಣದ ರಾಡ್ ಹಿಡಿದು ಹೊರಬಂದ ತಾಯಿ, ಮಲಗಿದ್ದ ಮಗನ ಮೇಲೆ ಹಲ್ಲೆ ನಡೆಸಿದ್ದಾಳೆ. ಹಲ್ಲೆಯ ತೀವ್ರತೆಗೆ ಮುತ್ತುರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಏನೂ ಗೊತ್ತಿಲ್ಲದವಳಂತೆ ನಾಟಕವಾಡಿದ್ದ ಶಿವಮ್ಮ ಮರುದಿನ ಮಗ ಮೃತಪಟ್ಟಿರುವುದು ತಿಳಿದ ಬಳಿಕ ಶಿವಮ್ಮ ಏನೂ ಗೊತ್ತಿಲ್ಲದವಳಂತೆ ವರ್ತಿಸಿದ್ದಾಳೆ. ತಾನೇ ಮೊದಲು ಮಗನ ಶವವನ್ನು ನೋಡಿದಂತೆ ಕಥೆ ಕಟ್ಟಿದ್ದಲ್ಲದೆ, ಯಾರೋ ಅಪರಿಚಿತರು ಕೊಲೆ ಮಾಡಿದ್ದಾರೆ ಎಂದು ಗೋಳಾಡಿ ಕಣ್ಣೀರಿನ ನಾಟಕವಾಡಿದ್ದಳು.

ಆದರೆ, ಪೊಲೀಸರ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳು ಕೊಲೆಯ ರಹಸ್ಯವನ್ನು ಬಯಲು ಮಾಡಿವೆ. ಕಬ್ಬಿಣದ ರಾಡ್‌ನಿಂದ ತಾಯಿಯೇ ಮಗನ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿವೆ. ಈ ಸಾಕ್ಷ್ಯಗಳ ಆಧಾರದಲ್ಲಿ ತುಮಕೂರು ಗ್ರಾಮಾಂತರ ಪೊಲೀಸರು ಶಿವಮ್ಮಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *