ಸರಗೂರು:24 ಡಿಸೆಂಬರ್ 2021
ಕರೋನ ಹಾಗೂ ಒಮಿಕ್ರೋನ್ ವೈರಸ್ ಗಳನ್ನು ತಡೆಗಟ್ಟಲು ಪ್ರತಿಯೊಬ್ಬರು ಲಸಿಕೆಯನ್ನು ತಪ್ಪದೆ ಪಡೆದುಕೊಳ್ಳಬೇಕು ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮೈತ್ರಿ ಅವರು ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನಲ್ಲಿರುವ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದಲ್ಲಿ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಹೇಳಿದರು.
ಮೊದಲ ಕೋವಿಡ್ ಲಸಿಕೆ ಪಡೆದು, ಕೆಲವರು ಎರಡನೇ ಕೋವಿಡ್ ಲಸಿಕೆಯನ್ನು ಪಡೆಯುವಲ್ಲಿ ಮುಂದಾಗುತ್ತಿಲ್ಲ, ದಯವಿಟ್ಟು ಎರಡು ಲಸಿಕೆಯನ್ನು ಪಡೆದುಕೊಳ್ಳಿ ಎಂದು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಹೇಳಿದರು.
ಬಳಿಕ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ವ್ಯವಸ್ಥಾಪಕ ನಿಂಗರಾಜು ಅವರು ಕೋವಿಡ್ 3 ನೇ ಅಲೆಯ ಬಗ್ಗೆ ಆರೋಗ್ಯ ಇಲಾಖೆ ಮತ್ತು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರ ನೀಡಿದ ಡಾ.ಮೈತ್ರಿ ಅವರು ಕರೋನ 3 ನೇ ಅಲೆಯನ್ನು ಎದುರಿಸಲು ಆರೋಗ್ಯ ಇಲಾಖೆ ಮತ್ತು ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಹಾಗೂ ಒಂದು ಮತ್ತು ಎರಡನೇ ಅಲೆಯಲ್ಲಿ ಮಾಡಿದ ತಪ್ಪುಗಳನ್ನು ತಿದ್ದುಕೊಂಡು, ಬಹಳ ಮುಂಜಾಗ್ರತೆಯಿಂದ ಕ್ರಮಕೈಗೊಳ್ಳಲಾಗುತ್ತದೆ. ಇದಕ್ಕೆ ಸಾರ್ವಜನಿಕರು ದಯವಿಟ್ಟು ಸರ್ಕಾರದ ಜೂತೆ ಸಹಕರಿಸಬೇಕು ಎಂದರು.
ಹನುಮನಹಳ್ಳಿಯಿಂದ ನವೀನ್ ಎಂಬುವವರು ಕರೆ ಮಾಡಿ ಕರೋನ ಮತ್ತು ಒಮಿಕ್ರೋನ್ ನಡುವಿನ ವ್ಯತ್ಯಾಸ ಹಾಗೂ ಲಕ್ಷಣಗಳೇನು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ.ಮೈತ್ರಿ ಅವರು ಕರೋನ ಸೋಂಕಿನ ಹೊಸ ರೂಪಾಂತರ ತಳಿಯೆ ಈ ಒಮಿಕ್ರೋನ್ ಆಗಿದೆ. ಸಾಮಾನ್ಯವಾಗಿ ಕೋವಿಡ್ ಲಕ್ಷಣಗಳೇ ಒಮಿಕ್ರೋನ್ ಸೋಂಕಿನಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಆರ್.ಟಿ.ಪಿ.ಸಿ.ಆರ್ ಮೂಲಕ ಪತ್ತೆ ಹಚ್ಟಲಾಗುತ್ತದೆ ಎಂದು ಉತ್ತರ ನೀಡಿದರು.
ವಿವಿಧ ಗ್ರಾಮಗಳಿಂದ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಕರೋನ ಹಾಗೂ ಒಮಿಕ್ರೋನ್ ವೈರಸ್ ಗಳ ಬಗ್ಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಂಡರು.
ಇದೇ ವೇಳೆ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ಸಿಬ್ಬಂದಿಗಳಾದ ಶಿವಲಿಂಗ್, ನೀಲವತಿ, ಸೋಮೇಶ್, ಶ್ರೀಕಾಂತ್, ನೇತ್ರವತಿ, ಸಿದ್ಧಾರ್ಥ, ರಮ್ಯ ಇದ್ದರು.