ನಂದಿನಿ ಮನುಪ್ರಸಾದ್ ನಾಯಕ್
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಉಡುಗೊರೆ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ ಸ್ವಾಮಿ ವಿವೇಕಾನಂದ ಪ್ರತಿಮೆ!


ಪ್ರಧಾನಿ ನರೇಂದ್ರ ಮೋದಿ ಅವರ ಆಗಸ್ಟ್ 1ರ ಮೈಸೂರು ಭೇಟಿಗೆ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಿದ್ದಾರೆ.
ವಿಯೆಟ್ನಾಂ ಮಾರ್ಬಲ್‌ನಲ್ಲಿ ಕೆತ್ತಿರುವ ಸ್ವಾಮಿ ವಿವೇಕಾನಂದರ ಏಕಶಿಲಾ ಮೂರ್ತಿಯನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ. ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಇದೇ ವೇಳೆ ಈ ವಿಶೇಷ ಮೂರ್ತಿಯನ್ನು ಅವರಿಗೆ ಸಮರ್ಪಿಸಲಾಗುತ್ತದೆ. 8.5 ಕೆ.ಜಿ. ತೂಕ ಮತ್ತು ಸುಮಾರು 1.5 ಅಡಿ ಎತ್ತರ ಹೊಂದಿರುವ ಈ ಮೂರ್ತಿಯನ್ನು ಕೇವಲ 15 ದಿನಗಳಲ್ಲಿ ಅರುಣ್ ಯೋಗಿರಾಜ್ ಅವರು ಪೂರ್ಣಗೊಳಿಸಿದ್ದಾರೆ.
ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಈ ಮೂರ್ತಿಯನ್ನು ಪ್ರಧಾನಿ ಸುಲಭವಾಗಿ ಕೈಯಲ್ಲಿ ಹಿಡಿಯುವಂತೆ 10 ಕೆ.ಜಿಗಿಂತ ಕಡಿಮೆ ತೂಕದಲ್ಲಿ ನಿರ್ಮಿಸಲಾಗಿದೆ. ಈ ಹಿಂದೆ ಕೂಡ ಪ್ರಧಾನಿ ಮೋದಿಗೆ ಹಲವು ಶಿಲ್ಪಗಳನ್ನು ಉಡುಗೊರೆಯಾಗಿ ನೀಡಿರುವ ಅರುಣ್ ಯೋಗಿರಾಜ್, ಈ ಅವಕಾಶ ಕಲ್ಪಿಸಿದ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.