ನಂದಿನಿ ಮನುಪ್ರಸಾದ್ ನಾಯಕ್
ನಮ್ಮ ಸಂವಿಧಾನದ ಪ್ರಸ್ತಾವನಾ ಪೀಠಿಕೆಯಿಂದ ಜಾತ್ಯತೀತ ಮತ್ತು ಸಮಾಜವಾದ ಎಂಬ ಎರಡು ಪದಗಳನ್ನು ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದರ ಕುರಿತು ಚರ್ಚೆ ನಡೆಯಲಿ ಎಂದು ಆರ್ ಎಸ್ ಎಸ್ ಹಿರಿಯರಾದ ಮಾನ್ಯ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ಕರೆ ನೀಡಿದ್ದಾರೆ. ಕರಾಳ ತುರ್ತುಪರಿಸ್ಥಿತಿಯ ೫೦ರ ನೆನಪಿನ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಅವರು ಇದನ್ನು ಪ್ರಸ್ತಾಪಿಸಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ವಲಯದ ಬುದ್ಧಿಜೀವಿಗಳು ಹಾಗೂ ಎಡಪಂಥೀಯರು ದೇಶದಲ್ಲಿ ಸಂವಿಧಾನಕ್ಕೆ ಅಪಾಯ ಬಂದಿದೆ ಎಂಬರ್ಥದಲ್ಲಿ ಮಾತನಾಡುತ್ತಿರುವುದು ಮಾತ್ರ ವಿಲಕ್ಷಣ. ಇದು ತಂಟೆ ಮಾಡಿದ ಮಗುವೊಂದು, ಯಾರೂ ತನ್ನ ತಂಟೆಯನ್ನು ಪ್ರಶ್ನಿಸದಿರಲಿ ಎಂದು ಜೋರಾಗಿ ಅಳುವ ನಾಟಕವಾಡಿದಷ್ಟೇ ಬಾಲಿಶ. ಆದರೆ, ತಂಟೆಕೋರ ಮಗುವಿನ ಮರ್ಮ ಎಲ್ಲರಿಗೂ ಅರ್ಥವಾಗುವಂಥದ್ದೇ.
೧೯೭೫ರಲ್ಲಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿ, ಅದರ ಕ್ರೌರ್ಯ, ಕರಾಳತೆ ಎಲ್ಲವೂ ಗೊತ್ತಿರುವ ಸಂಗತಿ. ಅದು ಹೇಗೆ ಭಾರತದ ಪ್ರಜಾಪ್ರಭುತ್ವವನ್ನು ಹತ್ತಿಪ್ಪತ್ತು ವರ್ಷಗಳ ಹಿಂದಕ್ಕೆ ಕೊಂಡೊಯ್ದಿತು ಎಂಬುದನ್ನು ನಾವು ತಿಳಿದಿದ್ದೇವೆ. ಆದರೆ, ಹೆಚ್ಚು ಸದ್ದು ಮಾಡದ ಸುದ್ದಿಯೊಂದಿದೆ. ಎಮರ್ಜೆನ್ಸಿಯ 22 ತಿಂಗಳ ಅವಧಿಯಲ್ಲಿಯೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನದ 42ನೇ ವಿಧಿಗೆ ತಿದ್ದುಪಡಿ ತಂದರು. ಆ ವೇಳೆಯಲ್ಲಿಯೇ ಅವರು ಸಂವಿಧಾನದ ಪೀಠಿಕೆಯಲ್ಲಿದ್ದ ಭಾರತವು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ಎಂಬ ಆಶಯವನ್ನು ಭಾರತವು ಸಾರ್ವಭೌಮ ಸಮಾಜವಾದಿ ಪ್ರಜಾಸತ್ತಾತ್ಮಕ ಗಣರಾಜ್ಯ(Sovereign Socialist secular Democratic Republic) ಎಂದು ಬದಲಿಸಿದರು. ಈಗ ಚರ್ಚೆಯಾಗುತ್ತಿರುವುದು ಇದಿಷ್ಟೇ ಸಂಗತಿ. ಆದರೆ, ಇತಿಹಾಸ ಆ ತಿದ್ದುಪಡಿಯನ್ನು ಇಂದಿರಾ ಗಾಂಧಿ ಅವರ ‘ಮಿನಿ ಸಂವಿಧಾನ’ ಎಂದೇ ವ್ಯಾಖ್ಯಾನಿಸಿದೆ. ನ್ಯಾಯಾಂಗದ ಅಧಿಕಾರವನ್ನು ಮೊಟಕುಗೊಳಿಸಿದ್ದು ಸೇರಿದಂತೆ ಅನೇಕ ಅಪಾಯಕಾರಿ ಸಂಗತಿಗಳು ಈ ಇಂದಿರಾ ಅವರ ಮಿನಿ ಸಂವಿಧಾನದಲ್ಲಿ ಅಡಕವಾಗಿದ್ದವು. ಹಾಗೆ ನೋಡಿದರೆ, ಸಮಾಜವಾದಿ-ಜಾತ್ಯತೀತ ಪದಗಳು ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದ ಕೊಡುಗೆಗಳಲ್ಲ, ಇವು ಇಂದಿರಾ ಅವರ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಕಾಲದ ತಿರುಚಿದ ಮಿನಿ ಸಂವಿಧಾನ ನೀಡಿರುವ ಕೊಡುಗೆಗಳು !
ಇರಲಿ ಇಂದಿರಾ ಅವರು ಮಿನಿ ಸಂವಿಧಾನದ ಬಗ್ಗೆ ಎಲ್ಲಿಯಾದರೂ ಚರ್ಚೆಯಾಗಿದೆಯೇ ? ಪ್ರತಿಪಕ್ಷದ ಎಲ್ಲ ಮುಖಂಡರನ್ನು ಜೈಲಿಗಟ್ಟಿ, ಎಳ್ಳಷ್ಟು ಚರ್ಚೆ ಇಲ್ಲದೇ ಇಂದಿರಾ ಪಟಾಲಂ ಜಾರಿಗೊಳಿಸಿದ ಮಿನಿ ಸಂವಿಧಾನವದು. ಇದಕ್ಕೆ ಪ್ರತಿಯಾಗಿ, ಬಾಬಾ ಸಾಹೇಬರು ನಮ್ಮ ಶ್ರೇಷ್ಠ ಸಂವಿಧಾನವನ್ನು ರೂಪಿಸುವಾಗ, 1948 ರಿಂದ 1950ರವರೆಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಸಂವಿಧಾನವನ್ನು ಅಂಗೀಕರಿಸುವ ಮುನ್ನ ಎರಡು ವರ್ಷಕ್ಕೂ ಅಧಿಕ ಕಾಲ ಸಾಂವಿಧಾನಿಕ ಸಭೆಯಲ್ಲಿ (constituent assembly) ಚರ್ಚೆ ನಡೆದಿದೆ. ಈಗ ಹೇಳಿ ಚರ್ಚೆಯೇ ಇಲ್ಲದೇ ಇಂದಿರಾ ಗಾಂಧಿ ಅಂಗೀಕರಿಸಿರುವ, ತಿರುಚಿದ ಮಿನಿ ಸಂವಿಧಾನದ ಕುರಿತು ಚರ್ಚೆ ನಡೆಯಬಾರದೇಕೆ ?

ಶ್ರೀ ದತ್ತಾತ್ತೇಯ ಹೊಸಬಾಳೆ ಅವರು ಪ್ರಸ್ತಾಪಿಸಿರುವ ವಿಷಯಕ್ಕೆ ಬರೋಣ. ಜಾತ್ಯತೀತ, ಸಮಾಜವಾದ ಎಂಬ ಎರಡು ಪದಗಳು ಸಂವಿಧಾನದ ಪ್ರಸ್ತಾವನೆಯಲ್ಲಿ ಇರಬೇಕೆ, ಬೇಡವೇ ಎಂಬುದರ ಕುರಿತು ಚರ್ಚೆ ನಡೆಯಲಿ ಎಂಬುದು ಅವರ ಮನವಿ. ತಪ್ಪೇನು ? ಅವರೇ ಆ ಭಾಷಣದಲ್ಲಿ ಹೇಳಿರುವಂತೆ, ಜಾತ್ಯತೀತ, ಸಮಾಜವಾದ ಎಂಬುದು ತತ್ತ್ವಸಿದ್ಧಾಂತಗಳೇ ಹೊರತು, ಬಾಬಾ ಸಾಹೇಬರು ಪ್ರಸ್ತಾಪಿಸಿರುವ ಭ್ರಾತೃತ್ವ, ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯದ ರೀತಿ ಮೌಲ್ಯಗಳಲ್ಲ. ಆಗ ರಷ್ಯಾದ ಸಹವಾಸದಲ್ಲಿದ್ದ ಇಂದಿರಾ ಅವರಿಗೆ ಸಮಾಜವಾದ ಇಷ್ಟವಾಗಿರಬಹುದು. ಅದಕ್ಕಾಗಿ ಸೇರಿಸಿದ್ದಾರೆ. ಅವರ ಇಷ್ಟ-ಕಷ್ಟಗಳಿಗೆ ಅನುಗುಣವಾಗಿ ಬದಲಾಯಿಸಲು, ಅದೇನು ಕಾಂಗ್ರೆಸ್ ಸಂವಿಧಾನವೇ ? ಭಾರತದ ಸಂವಿಧಾನ.
ಸಂವಿಧಾನತಜ್ಞರು ಹೇಳುವಂತೆ, ಯಾರೇ ಅಧಿಕಾರಕ್ಕೆ ಬಂದರು ನಮ್ಮ ಸಂವಿಧಾನವನ್ನು ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಬಹುದೇ ಹೊರತು, ಅದರ ಪೀಠಿಕೆಯನ್ನಲ್ಲ. ಇಂದಿರಾ ಗಾಂಧಿ ಅಲ್ಲಿಯೂ ಎಡವಟ್ಟನ್ನೇ ಮಾಡಿದ್ದಾರೆ.
ಹಾಗೆ ನೋಡಿದರೆ, ಇಂದಿರಾ ಅವರಿಗೆ ಇಷ್ಟವಾಗಿದ್ದ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಬೇಕೆಂದು ೧೯೪೮ರಲ್ಲಿಯೇ ಪ್ರೊ. ಕೆ. ಟಿ. ಶಾ ಅವರು ಕಾನ್ಸಿಟಿಟ್ಯೂಯಂಟ್ ಅಸೆಂಬ್ಲಿಯ ಮುಂದೆ ಪ್ರಸ್ತಾವನೆ ತರುತ್ತಾರೆ. ಇದನ್ನು ಅಂಬೇಡ್ಕರ್ ಅಧ್ಯಕ್ಷತೆಯ ಅಸೆಂಬ್ಲಿ ತಿರಸ್ಕರಿಸುತ್ತದೆ. ಆಗ ಅಂಬೇಡ್ಕರ್ ಅವರು ತಿರಸ್ಕರಿಸಿದ್ದನ್ನು ಇಂದಿರಾ ಗಾಂಧಿ ಎಮರ್ಜೆನ್ಸಿಯಲ್ಲಿ ತುರುಕಿಸಿದರು !
ನಿಜ, ಸುಪ್ರೀಂಕೋರ್ಟ್ ಈ ಪದಗಳು ಸಂವಿಧಾನದ ಪ್ರಸ್ತಾವನೆಯಲ್ಲಿ ಇದ್ದರೆ ತಪ್ಪಿಲ್ಲ ಎಂದು ಹೇಳಿದೆ. ಅಂದಮಾತ್ರಕ್ಕೆ ಚರ್ಚೆಯೇ ನಡೆಯಬಾರದು ಎಂದೇನೂ ಇಲ್ಲ. ಕಾಂಗ್ರೆಸ್ ಪಾಲಿಗೆ ಜಾತ್ಯತೀತ ನೀತಿ ಎಂದರೆ, ಅಲ್ಪಸಂಖ್ಯಾತರ ಓಲೈಕೆಯಷ್ಟೆ. ಅವರನ್ನು ಸಂತುಷ್ಟಗೊಳಿಸಿ, ಮತ ಬ್ಯಾಂಕ್ ಗಟ್ಟಿಗೊಳಿಸಬಹುದು ಎಂಬ ಸ್ವಾರ್ಥ ಲೆಕ್ಕಾಚಾರವಷ್ಟೆ. ಉಳಿದಂತೆ ಸಮಾಜವಾದ ಎಂಬುದು 1970ರ ದಶಕದ ಮೋಹಕ ಸೈದ್ಧಾಂತಿಕ ವಾದ. ಈ ವಾದದಿಂದ ದೇಶ ಬಹಳ ಮುಂದೆ ಬಂದಿದೆ. ನಾವೀಗ, ಮುಕ್ತ ಮಾರುಕಟ್ಟೆಯ ದಿನಗಳನ್ನೂ ದಾಟಿ ಆತ್ಮ ನಿರ್ಭರ ತತ್ತ್ವಸಿದ್ಧಾಂತದ ಯುಗದಲ್ಲಿದ್ದೇವೆ.
ಹಾಗಾಗಿ, ಸಂವಿಧಾನದ ಮೂಲ ಆಶಯಗಳನ್ನು ಉಳಿಸಿಕೊಂಡು, ತುರುಕಿದ್ದನ್ನು ತೆಗೆದು ಮುಂದೆ ಹೋಗಲು ಇದು ಸಕಾಲ ಎಂಬುದು ನನ್ನ ಅಭಿಪ್ರಾಯವಾಗಿದೆ.
ವಂದನೆಗಳೊಂದಿಗೆ,
ಡಾ.ಈ.ಸಿ.ನಿಂಗರಾಜ್ ಗೌಡ,
ಸಿಂಡಿಕೇಟ್ ಮಾಜಿ ಸದಸ್ಯರು,
ಮೈಸೂರು ವಿಶ್ವವಿದ್ಯಾನಿಲಯ.
ಮೊಬೈಲ್ ನಂಬರ್ : 9980184789 / 9342184789