ಗ್ರಾಮೀಣ ಪ್ರದೇಶದ ಮಕ್ಕಳೇ ತುಂಬಾ ಪ್ರತಿಭಾನ್ವಿತರು – ಕೆ.ಸಿ.ದೊರೆಸ್ವಾಮಿ.

ಮಳವಳ್ಳಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಾಲ್ಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಜೆಂಟಿ ನಿರ್ದೇಶಕ ಕೆ.ಸಿ.ದೊರೆಸ್ವಾಮಿ ತಿಳಿಸಿದರು.

ತಾಲ್ಲೂಕಿನ ಕಿರಗಸೂರು ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಪ್ರಾರ್ಥನಾ ಮಂದಿರದ ಮೇಲ್ಛಾವಣಿಯನ್ನು ನಿರ್ಮಾಣ ಮಾಡಲು 2.50 ಲಕ್ಷ ರೂಗಳನ್ನು ದಾನವಾಗಿ ನೀಡಿರುವ ವಿಧಾನ ಸೌಧ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಅವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ಬೋಧಿಸುವ ವಿಷಯಗಳ ಕುರಿತು ಅವತ್ತಿನ ಪಾಠವನ್ನು ಅವತ್ತೇ ಅಭ್ಯಾಸ ಮಾಡಿ ಒಂದು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸ ಮಾಡಿದರೇ ಗುರಿಯನ್ನು ಮುಟ್ಟಬಹುದು. ಗ್ರಾಮೀಣ ಪ್ರದೇಶದ ಮಕ್ಕಳೇ ಇಂದು ತುಂಬಾ ಪ್ರತಿಭಾನ್ವಿತರಾಗಿದ್ದು ಅವರಿಗೆ ಶಾಲೆ ಹಾಗೂ ಪೋಷಕರಿಂದ ಉತ್ತಮ ಮಾರ್ಗದರ್ಶನ ಸಿಕ್ಕರೆ ಸಮಾಜ ಗುರುತಿಸುವ ಮಟ್ಟಕ್ಕೆ ಮುಂದೆ ಬರುತ್ತಾರೆ, ನಮ್ಮೂರಿನ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನಾನು ಸದಾ ಸಿದ್ದನಿರುತ್ತೇನೆ ಎಂದರು, ಇದೆ ಸಂದರ್ಭದಲ್ಲಿ ಶಾಲಾಭಿವೃದ್ಧಿಗೆ 50000 ನಗದನ್ನು ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನ ಸೌಧ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ನಾನು ಈ ಹಿಂದೆ ಶಾಲೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಸಂದರ್ಭದಲ್ಲಿ ಇಲ್ಲಿನ ಶಿಕ್ಷಕರು ಹಾಗೂ ಗ್ರಾಮಸ್ಥರು ಪ್ರಾರ್ಥನಾ ಮಂದಿರದ ಮೇಲ್ಛಾವಣಿ ನಿರ್ಮಾಣ ಮಾಡಿಸಿಕೊಡುವಂತೆ ಕೇಳಿಕೊಂಡರು ಅದರಂತೆ ಇಂದು ನಾನು ನಿರ್ಮಾಣ ಮಾಡಲು ಧನ ಸಹಾಯ ಮಾಡಿದ್ದೇನೆ ಇದು ಒಂದು ನನ್ನ ಅಳಿಲು ಸೇವೆಯಾಗಿದೆ ಎಂದರು.

ಶಾಲೆಯ ಆಪ್ತ ಸಮಾಲೋಚಕರಾದ ಸವಿತಾ ಶಂಕರ್ ಅವರು ಶಾಲೆಯ ವಿಧ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಅರುಣ್ ಕುಮಾರ್, ಮಂಡ್ಯ ಜಿಲ್ಲೆ ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ಕೆ.ಎಂ.ಮಹದೇವಸ್ವಾಮಿ, ವಿಧಾನ ಸೌಧ ಮಾಜಿ ಉಪ ಕಾರ್ಯದರ್ಶಿ ರಾಜು, ಗ್ರಾ. ಪಂ.ಅಧ್ಯಕ್ಷ ರಾಜೇಂದ್ರ ಪ್ರಸಾದ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ನಾಗಮಾದಯ್ಯ, ನಿವೃತ್ತ ಶಿಕ್ಷಕ ರಾಘವೇಂದ್ರ ಟಿ.ವಿ, ಶಾಲೆ ಹಿತೈಷಿ ಸಮಿತಿ ಅಧ್ಯಕ್ಷ ಸಿದ್ಧರಾಜು, ಬಿ.ಆರ್.ಪಿ ಬಾಬು, ಸೋಮಣ್ಣ, ಸಿ.ಆರ್. ಪಿ ಮಹಾಜಯಲಿಂಗು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ದೇವರಾಜು ಶಿಕ್ಷಕ ಕಾಂತರಾಜು, ಮುಖಂಡರಾದ ಗುರುಮೂರ್ತಿ , ಶ್ರೀಧರ್, ಕೆ.ಪಿ.ಧೃವ, ಮಲ್ಲೇಶ್, ಪ್ರಭಾರಿ ಮುಖ್ಯ ಶಿಕ್ಷಕ ಶಿವಾನಂದ ಕುಮಾರ್ ಸೇರಿದಂತೆ ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *