ಮೈಸೂರು:28 ಸೆಪ್ಟೆಂಬರ್ 2021
ಸ್ಪೇಷಲ್ ಸ್ಟೋರಿ:ನ@ದಿನಿ
*ವಜ್ರಮುಷ್ಠಿ ಕಾಳಗದ ರೋಚಕ ಕಥೆ*
ಬರೀ ಮುಷ್ಠಿಯ ಹೊಡೆತ ಬಿದ್ದರೇನೇ ಸಾಮಾನ್ಯರು ತಡೆದುಕೊಳ್ಳುವುದು ಕಷ್ಟ. ಬಲಗೈ ಮುಷ್ಠಿಗೆ ಚೂಪಾದ ಆಯುಧ ಕಟ್ಟಿಕೊಂಡು ಹೊಡೆತ ಕೊಟ್ಟರೆ ಎದುರಾಳಿ ಕತೆ ಮುಗಿಯಿತೆಂದೇ ಅರ್ಥ.ಮೈಸೂರು ದಸರೆಯ ಖಾಸಗಿ ದರ್ಬಾರಿನಲ್ಲಿ ವಜ್ರಮುಷ್ಠಿ ಕಾಳಗ ಈಗಲೂ ಫೇಮಸ್ಸು. ರೋಚಕ, ರೋಮಾಂಚಕ ಕಾಳಗ ಮಾಡುವ ಜಟ್ಟಿಗಳು ಭಾರ ಎತ್ತಿ, ದಂಡ-ಸಾಮು ಹೊಡೆದು ರಟ್ಟೆಯಲ್ಲಿ ಗಟ್ಟಿತನ, ಗುಂಡಿಗೆಯಲ್ಲಿ ಗಟ್ಟಿಗತನವನ್ನು ಕಾಯ್ದಿಟ್ಟುಕೊಂಡಿದ್ದವರು. ಹೊಡೆತಗಳಿಗೆ ಎದುರಾಳಿಯ ಹಲ್ಲು ಉದುರಬಹುದು. ಕಣ್ಣು ಹೊರಬಂದು, ಮುಖ ವಿಕಾರಗೊಳ್ಳಬಹುದು. ಕೆಲವೊಮ್ಮೆ ಉಸಿರು ಹೋಗಲುಬಹುದು ರಕ್ತ ಚಿಮ್ಮಿದ ಕ್ಷಣಾರ್ಥದಲ್ಲಿ ಕಾಳಗ ಅಂತ್ಯಗೊಳ್ಳಿವುದು.,ಜಟ್ಟಿ ಕಾಳಗ ಕುಸ್ತಿಯಲ್ಲ, ಅದೊಂದು ಉಗ್ರರೂಪ. ಸಮರ ಕಲೆ.
ಹೌದು ,ದಶಮಿಯ ದಿನ ಮೈಸೂರು ಅಂಬಾವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ‘ವಜ್ರಮುಷ್ಠಿ’ ಕಾಳಗ ನಡೆಯುತ್ತದೆ.
ಕುಸ್ತಿ,ಕಾಳಗ ಕೌಶಲ್ಯ ಹೊಂದಿದ್ದರಿಂದ ರಾಜ ಮಹಾರಾಜರು ಈ ಜಗ ಜಟ್ಟಿಗಳಿಗೆ ರಾಜಾಶ್ರಯ ನೀಡಿ, ಅಂಗರಕ್ಷಕರನ್ನಾಗಿಸಿಕೊಂಡರು. ಅವರಲ್ಲಿ ಶಕ್ತಿ-ಯುಕ್ತಿಶಾಲಿಗಳನ್ನು ಆಯ್ಕೆ ಮಾಡಿಕೊಳ್ಳಲೆಂದು ಜಟ್ಟಿ ಕಾಳಗ ಏರ್ಪಡಿಸಲಾಗುತ್ತಿತ್ತು. ಅದು,‘ವಜ್ರಮುಷ್ಠಿ ಕಾಳಗ’ ಎಂದೇ ಪ್ರಸಿದ್ಧ. ಚೂಪು ಚೂಪಾದ‘ಆಭರಣ’ ಮಾದರಿ ಆಯುಧ ‘ವಜ್ರನಖ’ವನ್ನು ಕಟ್ಟಿಕೊಂಡು ಕಾಳಗಕ್ಕಿಳಿಯುವುದು ವಿಶೇಷ.ವಜ್ರಮುಷ್ಠಿಯನ್ನ
ಎಮ್ಮೆ ಕೊಂಬು,ಗೇಂಡಾಮೃಗ ಕೊಂಬು, ಆನೆ ದಂತದಲ್ಲಿ ನಖ ತಯಾರಿಸಲಾಗಿರುತ್ತದೆ.
ಬಾರಾ ಧ್ವಜ ಗೋತ್ರದವರು ಜಟ್ಟಿ ಕಾಳಗದಲ್ಲಿ ಭಾಗವಹಿಸುವುದು ವಾಡಿಕೆ.
ಪುಟ್ಟ ಜುಟ್ಟಿನ ಹೊರತು ನುಣ್ಣೆಗೆ ತಲೆ ಬೋಳಿಸಿ, ಹಣೆಗೆ ನಾಮ ಹಚ್ಚಿಕೊಂಡು, ಹನುಮಾನ್ ಚಡ್ಡಿ ಧರಿಸಿ ಮೈಹುರಿಗಟ್ಟಿದ ಹುರಿಯಾಳುಗಳು ಕೆಮ್ಮಣಿನ ಮಟ್ಟಿಯಲ್ಲಿ ಕಾಳಗಕ್ಕಿಳಿಯುತ್ತಾರೆ. ‘ನಖ’ಮುಷ್ಠಿಯ ಏಟು ಎದುರಾಳಿಯ ನೆತ್ತಿ ಸೀಳಿ ನೆತ್ತರು ತರಿಸಬೇಕು. ಹಿಂದೆಲ್ಲ ಒಬ್ಬ ನೆಲ ಕಚ್ಚುವವರೆಗೂ ಕಾಳಗ ಮುಂದುವರಿಯುತ್ತಿತ್ತು. ಉಳಿದು ಗೆದ್ದ ಬಲಿಷ್ಠ ಅಂಗರಕ್ಷಕನಾಗುತ್ತಿದ್ದ. ಕೆಲವೊಮ್ಮೆ, ರಣಧೀರ ಕಂಠೀರವನಂಥ ಮಹಾರಾಜರೂ ಕಾಳಗಕ್ಕೆ ಇಳಿದ ನಿದರ್ಶನಗಳಿವೆ.
ಈಗಲೂ, ಮೈಸೂರು, ಚಾಮರಾಜನಗರ, ಚನ್ನಪಟ್ಟಣ, ಶ್ರೀರಂಗಪಟ್ಟಣದಿಂದ ಉಸ್ತಾದರು ಆಯ್ಕೆ ಮಾಡಿ ಕರೆ ತರುವ ನಾಲ್ವರು ಜಟ್ಟಿಗಳು ಸಂಪ್ರದಾಯದಂತೆ ಔಪಚಾರಿಕವಾಗಿ ಕಾಳಗ ನಡೆಸುತ್ತಾರೆ. ವಜ್ರಮುಷ್ಠಿಯ ಏಟು ಈಗಲೂ ಎದುರಾಳಿ ನೆತ್ತಿಯಲ್ಲಿ ನೆತ್ತರು ಚಿಮ್ಮಿಸುತ್ತದೆ. ಮೊದಲು ಯಾರ ನೆತ್ತಿಯಲ್ಲಿ ರಕ್ತ ಸುರಿಯುತ್ತದೋ ಆತ ಸೋತಂತೆ. ರಾಜಮನೆತದಿಂದ ಭಕ್ಷೀಸೂ ದೊರೆಯುತ್ತದೆ.
ಸುಣ್ಣದಕೇರಿಯಲ್ಲಿ ತಂದೆಯಿಂದ ಕಠಿಣ ತರಬೇತಿ,ಪ್ರೇರಣೆ ಪಡೆದ ಬಾಲಾಜಿ, 1978ರಲ್ಲಿ ಕುಸ್ತಿ ಅಖಾಡ ಪ್ರವೇಶಿಸಿದರು. ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡದಲ್ಲಿ ಗೆದ್ದು ಬೀಗಿದರು.350ಕ್ಕೂ ಹೆಚ್ಚು ಪಂದ್ಯಗಳನ್ನಾಡಿ ಬಾಲಾಜಿ ಹಲವರನ್ನು ನೆಲಕ್ಕೊರಗಿಸಿದರು. ಮಾತಿನಲ್ಲಿ ಸಾಧು. ಮೈ ಕೊಡವಿ,ಮಟ್ಟಿಯನ್ನು ಮೈಗೆರಚಿಕೊಂಡು ಅಖಾಡಕ್ಕಿಳಿದರೆ ಬಲಾಢ್ಯ ಗೂಳಿಯಂತೆ ಹೋರಾಡಿ ಜಯಿಸುವ ಬಾಲಾಜಿ ‘ಟೈಗರ್ ಬಾಲಾಜಿ’ ಎಂದೇ ಫೇಮಸ್.
ಬಲರಾಮ ಜಟ್ಟಿ,ವಿಷ್ಣು ಜಟ್ಟಿ ಟೈಗರ್ ಬಾಲಾಜಿ ಮಕ್ಕಳಾಗಿದ್ದು,ತಂದೆಯಿಂದ ಅಭ್ಯಾಸ ಮಾಡುತ್ತಿದ್ದಾರೆ.ಶಕ್ತಿ ಪ್ರದರ್ಶನವನ್ನೇ ಜೀವನವನ್ನಾಗಿಸಿಕೊಂಡಿರುವ ಜಟ್ಟಿಗಳು ಹಿಂದೂ,ಮುಸ್ಲಿಂ, ಕ್ರೈಸ್ತರಿಗೂ ಸಾದಾ ಕುಸ್ತಿ ತರಬೇತಿ ನೀಡುತ್ತಾ ಬಂದಿದ್ದಾರೆ.
ಹಿಂದೆ ಮಹಾರಾಜರು ಜಟ್ಟಿಗಳನ್ನ ತಮ್ಮ ಆಸ್ಥಾನದಲ್ಲಿ ನೋಡಿಕೊಳ್ಳುತ್ತಿದ್ದರು.
ರಾಜರು ಹತ್ತು ಆನೆಗಳನ್ನ ಸಾಕಬಹುದು.ಆದರೆ ಎರಡು ಕಾಲಿನ ಜಟ್ಟಿಗಳನ್ನ ಸಾಕೋಕಾಗಲ್ಲ.ಕೊರೋನಾ ಹಿನ್ನೆಲೆ ಕಳೆದ ಬಾರೀ ರೋಚಕ ವಜ್ರ ಮುಷ್ಠಿ ಕಾಳಗಕ್ಕೆ ಬ್ರೇಕ್ ಹಾಕಲಾಗಿತ್ತು.ಈ ಬಾರೀ ಕಾಳಗ ನಡೆಯುತ್ತೆ ರಾಜವಂಶಸ್ಥರು ನಮ್ಮನ್ನ ಆಹ್ವಾನಿಸುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಟೈಗರ್ ಬಾಲಾಜಿ.
ಒಟ್ಟಾರೆ ಹೇಳೋದಾದರೇ ಸಂಸ್ಕೃತಿ ಪರಂಪರೆ ಸಾರುವ ದಸರಾ ವಜ್ರಮುಷ್ಟಿ ಜಟ್ಟಿಕಾಳಗಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ ಅಥವಾ ಜಟ್ಟಿ ಕಾಳಗ ರದ್ದಾಗುತ್ತಾ ಕಾದಷ್ಟೇ ನೋಡಬೇಕಿದೆ.