ನಂದಿನಿ ಮೈಸೂರು
ಶ್ರೇಷ್ಠ ಶಿಕ್ಷಕ ದೈವಕ್ಕಿಂತಲೂ ಮಿಗಿಲು: ಸಾಹಿತಿ ಬನ್ನೂರು ರಾಜು
ಮೈಸೂರು:ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬೇರಾರಿಗೂ ಸಿಗದ ಮಹತ್ವದ ಸ್ಥಾನ-ಮಾನ, ಘನತೆ-ಗೌರವ ಶಿಕ್ಷಕರಿಗೆ ಅರ್ಥಾತ್ ಗುರುಗಳಿಗೆ ದೊರೆತಿದ್ದು ಗುರುದೇವರೆಂಬ ಪೂಜನೀಯ ದೈವೀಕ ಸ್ಥಾನಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ಪ್ರತಿಯೊಬ್ಬ ಶಿಕ್ಷಕರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ ಅಕ್ಷರಶಃ ಅವರು ದೇವರಿಗಿಂತಲೂ ಮಿಗಿಲಾಗುತ್ತಾರೆಂದ ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರು ಅಭಿಪ್ರಾಯ ಪಟ್ಟರು.
ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಇಲವಾಲ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ‘ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಸೇವಾ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ವೆಂಬುದು ಜ್ಞಾನಾಮೃತವಾಗಿದ್ದು ಇಂತಹ ಅಮೃತವನ್ನು ನಿರ್ವಂಚನೆಯಿಂದ ಧಾರೆಯೆರೆಯುವ ಶಿಕ್ಷಕರೆಂಬ ಗುರುದೇವರ ಬಗ್ಗೆ ವಿದ್ಯಾರ್ಥಿಗಳಿಗೆ ಗುರುಭಕ್ತಿ ಇದ್ದು ಶಿಕ್ಷಕರು ಹೇಳಿದಂತೆ ಶ್ರದ್ಧೆ , ಭಕ್ತಿ , ಪ್ರೀತಿ, ಪರಿಶ್ರಮ, ಕ್ರಿಯಾಶೀಲತೆ, ಸಮಯಪ್ರಜ್ಞೆ, ಆತ್ಮವಿಶ್ವಾಸ, ದೃಢತೆ, ಏಕಾಗ್ರತೆ, ಆಸಕ್ತಿಯಿಂದ ವಿದ್ಯೆ ಕಲಿತು ಸಾಧನೆಯತ್ತ ಸಾಗುವ ಪ್ರತಿಯೊಬ್ಬ ವಿದ್ಯಾರ್ಥಿಗೂ ತಾಯಿ ಶಾರದೆ ಒಲಿಯುತ್ತಾಳೆಂದರು.
ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರ ವಾದದ್ದು. ಹಾಗಾಗಿ ಇದು ರಾಜಕೀಯ ಮತ್ತು ರಾಜಕಾರಣದಿಂದ ಹೊರತಾಗಿರ ಬೇಕು.ಸರ್ಕಾರಗಳು ಬದಲಾದಂತೆ ಶಾಲಾ-ಕಾಲೇಜುಗಳ ಪಠ್ಯ ವಿಷಯಗಳು, ಪಠ್ಯ ಕ್ರಮಗಳು ಬದಲು ಮಾಡುವುದು ಸರಿಯಲ್ಲ. ಸರಿಯಾದ ಪ್ರಜ್ಞಾವಂತ ಶಿಕ್ಷಣ ತಜ್ಞರಿಂದ ರೂಪಿಸಿ ಒಮ್ಮೆ ಅಳವಡಿಸಲ್ಪಟ್ಟ ಪಠ್ಯಕ್ರಮಗಳು ಕನಿಷ್ಟ ಹತ್ತು ವರ್ಷಗಳಾದರೂ ಇರಬೇಕು. ಇಲ್ಲದಿದ್ದರೆ ಪಾಠ ಬೋಧಿಸುವ ಶಿಕ್ಷಕರಲ್ಲಿ ಹಾಗೂ ಕಲಿಯುವ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿ ಕಲಿಕೆಯ ಸಾಮರ್ಥ್ಯ ಮತ್ತು ಪ್ರಗತಿ ಕುಂಠಿತಗೊಳ್ಳುತ್ತದೆ. ದೇಶದ ಭವಿಷ್ಯವನ್ನು ಬರೆಯುವ ಶಿಕ್ಷಣ ಕ್ಷೇತ್ರ ಯಾವತ್ತೂ ಪರಿಶುದ್ಧವಾಗಿರಬೇಕು.ಹಾಗೆಯೇ ರಾಷ್ಟ್ರವನ್ನು ಕಟ್ಟುವಲ್ಲಿ ಮಹತ್ತ್ವದ ಪಾತ್ರವಹಿಸುವ ಶಿಕ್ಷಕರ ಭವಿಷ್ಯದ ಬಗ್ಗೆಯೂ ಸರ್ಕಾರಗಳು ಕಾಳಜಿವಹಿಸ ಬೇಕೆಂದ ಬನ್ನೂರು ರಾಜು ಅವರು ಯಾವದೇಶ ಶಿಕ್ಷಣದಲ್ಲಿ ಪ್ರಗತಿ ಸಾಧಿಸಿರುತ್ತದೋ ಅದು ಬಲಿಷ್ಟವಾಗಿರುತ್ತದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪಿ.ಸ್ವಾಮಿಗೌಡ ಮತ್ತು ಪಿ.ಪುಷ್ಪ ಹಾಗೂ ಅನುಸೂಯ ಅವರಿಗೆ “ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಸೇವಾ ಪ್ರಶಸ್ತಿ” ನೀಡಿ ಗೌರವಿಸಿ ಅಭಿನಂದಿಸಲಾಯಿತು.ಹಾಗೆಯೇ ಇದೇ ಸಂದರ್ಭದಲ್ಲಿ ಉಪಪ್ರಾಂಶುಪಾಲೆ ಎಂ.ಪ್ರಭಾ ಅವರ ಶಿಕ್ಷಣ ಸೇವೆಯನ್ನು ಗುರುತಿಸಿ ಅವರನ್ನೂ ಸಹ ವಿಶೇಷವಾಗಿ ಗೌರವಿಸಲಾಯಿತು.
ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಕಾನೂನು ಸಲಹೆಗಾರ ವಕೀಲ ದಿನೇಶ್, ಹೂಟಗಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ, ಶಿಕ್ಷಕರಾದ ಶಿವರಾಜು,ವಾಸುದೇವ, ಕೆ.ಎಲ್.ಪೂರ್ಣಿಮಾ, ಅನಿತಾ, ಸುಮತಿ, ವಾಸು, ನಂಜುಂಡ, ಗೋವಿಂದಶೆಟ್ಟಿ ಇನ್ನಿತರರಿದ್ದರು. ಪ್ರಾರಂಭದಲ್ಲಿ ಹಿರಿಯ ಶಿಕ್ಷಕ ವಾಸುದೇವ್ ಅವರು ಪ್ರಾಸ್ತವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಣ್ಯರೆಲ್ಲರೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.