ಪಿರಿಯಾಪಟ್ಟಣ: 6 ಜುಲೈ 2022
ಸತೀಶ್ ಆರಾಧ್ಯ
ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಂಸ್ಥೆಯ ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಿರಿಯಾಪಟ್ಟಣ ಯೋಜನಾಧಿಕಾರಿ ಸುರೇಶ್ ಶೆಟ್ಟಿ ತಿಳಿಸಿದರು.
ತಾಲೂಕಿನ ಪಂಚವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬಿ.ಸಿ ಟ್ರಸ್ಟ್ ಪಿರಿಯಾಪಟ್ಟಣ ಯೋಜನೆ ಕಚೇರಿ ವತಿಯಿಂದ ನಡೆದ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ವಿದ್ಯಾರ್ಥಿಗಳು ಕೆಟ್ಟ ಹವ್ಯಾಸಗಳಿಂದ ದೂರವಿದ್ದು ಕಲಿಕೆಯತ್ತ ಹೆಚ್ಚು ಆಸಕ್ತಿ ವಹಿಸಿ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗುವಂತೆ ತಿಳಿಸಿದರು.
ಹುಣಸೂರಿನ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಸೋಮಶೇಖರ್ ಅವರು ಮಾತನಾಡಿ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದ್ದು ಪ್ರತಿಯೊಬ್ಬರು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಕೋರಿದರು.
ಈ ಸಂದರ್ಭ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯ ಷಣ್ಮುಖರಾವ್, ಮುಖಂಡ ರವಿ, ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ವಲಯ ಮೇಲ್ವಿಚಾರಕ ಸುಧಾಕರ್ ನಾಯಕ್, ಸೇವಾ ಪ್ರತಿನಿಧಿಗಳಾದ ಸರಸ್ವತಿ, ವೀಣಾ, ಒಕ್ಕೂಟದ ಸದಸ್ಯರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು