ನಂದಿನಿ ಮೈಸೂರು
ಜ.೨೬ ರಿಂದ ೩೧ರವರೆಗೆ ಸುತ್ತೂರು ಜಾತ್ರೆ
ಮೈಸೂರು:ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಪುಷ್ಯ ಬಹುಳ ದ್ವಾದಶಿಯ ದಿನವಾದ ಜ.೨೬ರಿಂದ ಪ್ರಾರಂಭಗೊಂಡು ಮಾಘ ಶುದ್ಧ ಬಿದಿಗೆಯ ಜ.೩೧ರವರೆಗೆ ಆರು ದಿನಗಳ ಕಾಲ ನಡೆಯಲಿದೆ.
ಮಾಸಶಿವರಾತ್ರಿಯಂದು ರಥೋತ್ಸವ ಹಾಗೂ ಮಾಘ ಶುದ್ಧ ಪಾಡ್ಯಮಿಯಂದು ತೆಪ್ಪೋತ್ಸವ ಜರುಗುತ್ತವೆ. ಈ ಸಂಭ್ರಮದ ಜಾತ್ರೆಯಲ್ಲಿ ಜನತೆಯ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಹಲವಾರು ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸುತ್ತೂರು ಶ್ರೀಕ್ಷೇತ್ರದ ಕಾರ್ಯದರ್ಶಿ ಮಂಜುನಾಥ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಮತ್ತು ಪೂಜಾಕೈಂಕರ್ಯಗಳು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ನಡೆಯಲಿದೆ.
* ನಿರಂತರ ಉತ್ಸವ :
ಜನವರಿ ೨೭ರಂದು ಸಾಮೂಹಿಕ ವಿವಾಹ ಮತ್ತು ಹಾಲ್ಹರವಿ ಉತ್ಸವ, ೨೮ರಂದು ರಥೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, ೨೯ರಂದು ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಲಕ್ಷದೀಪೋತ್ಸವ, ೩೦ರಂದು ತೆಪ್ಪೋತ್ಸವ ಹಾಗೂ ೩೧ರಂದು ಅನ್ನಬ್ರಹ್ಮೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಇವುಗಳ ಜೊತೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ.
* ರಂಗೋಲಿ, ಸೋಬಾನೆಪದ ಸ್ಪರ್ಧೆ : ಜನವರಿ ೨೬ ಭಾನುವಾರ ಗ್ರಾಮೀಣ ಕಲೆ ರಂಗೋಲಿ ಸ್ಪರ್ಧೆ, ಸೋಬಾನೆಪದ ಸ್ಪರ್ಧೆ ಆಯೋಜಿಸಲಾಗಿದೆ. ಸೋಬಾನೆಪದ ಸ್ಪರ್ಧೆಯಲ್ಲಿ ೧೫೦ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ.
* ಭಜನಾ ಮೇಳ :
ಈ ವರ್ಷ ೩೧ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು ೮೦೦ಕ್ಕೂ ಹೆಚ್ಚು ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು ಏಳು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿವೆ.
* ವಸ್ತುಪ್ರದರ್ಶನ :
ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಗ್ರಾಮೀಣ ಕರಕುಶಲ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರುತ್ತದೆ. ಈ ವರ್ಷ ವಿಶೇಷಾವಾಗಿ ಕೃತಕ ಬುದ್ಧಿಮತ್ತೆ ಕುರಿತು ಮಾಹಿತಿ ನೀಡಲಾಗುವುದು. ಜೆಎಸ್‌ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ ೨೦೦ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳಿರುತ್ತವೆ. ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನವೂ ಇರುತ್ತದೆ.
* ಸಾಮೂಹಿಕ ವಿವಾಹ :
ಜನವರಿ ೨೭ರ ಸೋಮವಾರ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಜಾತಿ-ಮತ ಭೇದವಿಲ್ಲದೆ ಸರ್ವಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂತರ್ಜಾತಿಗಳ, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧು-ವರರು ಸಹ ಪಾಲ್ಗೊಳ್ಳಲಿದ್ದಾರೆ. ವಿವಾಹಗಳ ನೋಂದಣಿಯಾಗುತ್ತದೆ. ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗೂ ಕಾಲುಂಗುರಗಳನ್ನು, ವರನಿಗೆ ಪಂಚೆ, ವಲ್ಲಿ, ಷರ್ಟ್ಗಳನ್ನು ನೀಡಲಾಗುತ್ತದೆ. ಸಾಮೂಹಿಕ ವಿವಾಹ ವ್ಯವಸ್ಥೆಯಲ್ಲಿ ಈವರೆಗೆ ೩೨೦೦ಕ್ಕೂ ಹೆಚ್ಚು ಮಂದಿ ಸತಿಪತಿಗಳಾಗಿದ್ದಾರೆ. ವಧು-ವರರು ವಿವಾಹದ ದೃಢೀಕರಣಪತ್ರ ಹಾಗೂ ನೋಂದಣಿಪತ್ರಗಳನ್ನು ಸಲ್ಲಿಸಿ, ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ಪಡೆದುಕೊಳ್ಳಬಹುದಾಗಿದೆ.
* ಕೃಷಿ ಮೇಳ :
” ನಿಖರ ಕೃಷಿ ಬೇಸಾಯ” ಎಂಬ ಶೀರ್ಷಿಕೆಯಡಿ ಸಾಂಪ್ರದಾಯಿಕ ಹಾಗೂ ಆಧುನಿಕ ತಂತ್ರಜ್ಞಾನಾಧಾರಿತ ಕೃಷಿಮೇಳವನ್ನು ಆಯೋಜಿಸಲಾಗಿದೆ. ಒಂದು ಎಕರೆ ಕೃಷಿ ಬ್ರಹ್ಮಾಂಡ, ನೆರಳುಮನೆಯಲ್ಲಿ ಬೆಳೆದ ಹಲವಾರು ದೇಸಿ ಹಾಗೂ ವಿದೇಶಿ ತರಕಾರಿಗಳು, ಏಕದಳ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ವಾಣಿಜ್ಯ ಬೆಳೆಗಳು, ಮೇವಿನ ಬೆಳೆಗಳು, ವಿವಿಧ ಫಲಪುಷ್ಪಗಳು, ತೋಟಗಾರಿಕೆ ಬೆಳೆಗಳು, ರೇಷ್ಮೆಕೃಷಿ, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಿ ಬೆಳೆದಿರುವ ಸುಮಾರು ೩೦೦ ಬೆಳೆಗಳು ಹಾಗೂ ವಿವಿಧ ತಳಿಗಳ ಪ್ರಾತ್ಯಕ್ಷಿಕೆಯ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೃಷಿ ಅಭಿವೃದ್ಧಿ ಇಲಾಖೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಖಾಸಗಿ ಉಪಕರಣಗಳ ಮಾರಾಟಗಾರರು ಈ ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ದೇಸಿ ತಳಿಗಳ ಹಸು, ಕುರಿ, ಮೇಕೆ, ಕೋಳಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
* ಕೃಷಿ ವಿಚಾರಸಂಕಿರಣ :
ಜನವರಿ ೨೯ರ ಬುಧವಾರ ಸುಸ್ಥಿರ ಕೃಷಿಗಾಗಿ ನಿಖರ ಬೇಸಾಯ ಕ್ರಮಗಳು ಕುರಿತು ವಿಚಾರಸಂಕಿರಣ ಏರ್ಪಡಿಸಲಾಗಿದೆ. ರೈತರು ಹಾಗೂ ಅವರ ಮಕ್ಕಳಿಗಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
* ಚಿತ್ರಕಲಾ, ಗಾಳಿಪಟ ಸ್ಪರ್ಧೆ : ಜನವರಿ ೨೯ರ ಬುಧವಾರ ೧ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬೇರೆ ಬೇರೆ ವಿಭಾಗಗಳಲ್ಲಿ, ಸ್ಥಳದಲ್ಲೇ ವಿವಿಧ ವಿಷಯಗಳ ಕುರಿತು ಚಿತ್ರ ರಚಿಸುವ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಳಿಪಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
* ಚಿತ್ರಸಂತೆ :
ರಾಜ್ಯ ಹಾಗೂ ಹೊರರಾಜ್ಯ ಕಲಾವಿದರುಗಳ ಕಲಾಕೃತಿಗಳ ಪ್ರದರ್ಶನ, ಮಾರಾಟ ಹಾಗೂ ಸ್ಥಳದಲ್ಲೇ ಸಾರ್ವಜನಿಕರ ಭಾವಚಿತ್ರ ಬಿಡಿಸಿ ಮಾರಾಟ ಮಾಡುವ ವ್ಯವಸ್ಥೆಯು ಜಾತ್ರೆಯ ಎಲ್ಲಾ ದಿನಗಳಲ್ಲಿಯೂ ಇರುತ್ತದೆ.
* ಕುಸ್ತಿ ಪಂದ್ಯಾವಳಿ :
ಜನವರಿ ೩೦ರ ಗುರುವಾರ ರಾಷ್ಟ್ರಮಟ್ಟದ ನಾಡ ಕುಸ್ತಿ ಪಂದ್ಯ ನಡೆಯಲಿವೆ. ಈ ಬಾರಿ ಎರಡು ಮಾರ್ಪಿಟ್ ಕುಸ್ತಿಗಳಿರುತ್ತವೆ. ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಿಗೆ “ಸುತ್ತೂರು ಕೇಸರಿ” ಪ್ರಶಸ್ತಿ ಹಾಗೂ ಸ್ಥಳೀಯ ಉತ್ತಮ ಕುಸ್ತಿ ಸ್ಪರ್ಧೆ ವಿಜೇತರಿಗೆ ಸುತ್ತೂರು ಕುಮಾರ ಪ್ರಶಸ್ತಿಗಳನ್ನು ನೀಡಲಾಗುವುದು.
* ದನಗಳ ಪರಿಷೆ :
ದನಗಳ ಜಾತ್ರೆಯನ್ನ್ರು ಕಳೆದ ೫೩ ವರ್ಷಗಳಿಂದಲೂ ಏರ್ಪಡಿಸಲಾಗುತ್ತಿದೆ. ರೈತಬಾಂಧವರು ಎತ್ತು, ಹಸು, ಹೋರಿಗಳನ್ನು ಕೊಂಡುಕೊಳ್ಳಲು ಹಾಗೂ ಮಾರಾಟ ಮಾಡಲು ಅವಕಾಶವಿದೆ.
* ಕಪಿಲಾರತಿ :
ಜನವರಿ ೩೦ರ ಗುರುವಾರ ತೆಪ್ಪೋತ್ಸವದಂದು ಕಪಿಲಾರತಿಯನ್ನು ಏರ್ಪಡಿಸಲಾಗಿದೆ. ಅಲ್ಲದೆ, ಜೆಎಸ್‌ಎಸ್ ಅಂತರಸಂಸ್ಥೆಗಳ ಸಾಂಸ್ಕೃತಿಕ ಮೇಳದಲ್ಲಿ ೩,೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.
* ಪ್ರಸಾದ ವ್ಯವಸ್ಥೆ :
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಸಮಸ್ತ ಭಕ್ತಾದಿಗಳಿಗೆ ಪ್ರತಿನಿತ್ಯವೂ ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದದ ವ್ಯವಸ್ಥೆ ಇರುತ್ತದೆ. ೧೦೦೦ ಕ್ವಿಂಟಲ್ ಅಕ್ಕಿ, ೨೪೦ ಕ್ವಿಂಟಲ್ ತೊಗರಿಬೇಳೆ,೧೫೦೦ ಕ್ಯಾನ್ ರಿಫೈನ್ಡ್ ಅಡುಗೆ ಎಣ್ಣೆ, ೧೨ ಟನ್ ಬೆಲ್ಲ, ೩೫೦೦ ಕೆ.ಜಿ. ಖಾರದಪುಡಿ, ೧೧೦ ಕ್ವಿಂಟಲ್ ಕಡ್ಲೆಹಿಟ್ಟು, ೨೦೦ ಕ್ವಿಂಟಲ್ ಸಕ್ಕರೆ, ೫೦೦ ಕೆ.ಜಿ. ನಂದಿನಿ ತುಪ್ಪ, ತಲಾ ೮೦೦ ಕೆ.ಜಿ. ದ್ರಾಕ್ಷಿ, ಗೋಡಂಬಿ, ೮೦೦೦ ಲೀ. ಹಾಲು, ೨೮,೦೦೦ ಲೀ. ಮೊಸರು, ೨೫,೦೦೦ ತೆಂಗಿನಕಾಯಿ, ೫೦೦೦ ಕೆ.ಜಿ. ಉಪ್ಪಿನಕಾಯಿ ಬಳಸಲಾಗುತ್ತದೆ.
* ಪ್ರಭಾತ್ ಪೇರಿ :
೨೬ರಂದು ಮತ್ತು ೨೮ರಿಂದ ೩೧ರವರೆಗೆ ಪ್ರತಿದಿನ ಬೆಳಗ್ಗೆ ಜೀಮಾರಹಳ್ಳಿ, ನಗರ್ಲೆ, ಆಯರಹಳ್ಳಿ, ಬಸಳ್ಳಿಹುಂಡಿ ಮತ್ತು ಸೋಮೇಶ್ವರಪುರ ಗ್ರಾಮಗಳಲ್ಲಿ ಸ್ನೇಹ-ಸೌಹಾರ್ದ-ಶಾಂತಿ ಪ್ರ‍್ರಾರ್ಥನಾ ಸಂಚಲನದ ಪ್ರಭಾತ್ ಪೇರಿ ಇರುತ್ತದೆ. ನಂತರ ಒಬ್ಬ ಶ್ರೀಗಳು ಧ್ವಜಾರೋಹಣ ನೆರವೇರಿಸುತ್ತಾರೆ, ಮತ್ತೊಬ್ಬರು ಧರ್ಮಸಂದೇಶ ನೀಡುತ್ತಾರೆ. ೨೭ರಂದು ಶ್ರೀಕ್ಷೇತ್ರದ ಗದ್ದುಗೆ ಆವರಣದಲ್ಲಿ ದ್ವಜಾರೋಹಣ ಮತ್ತು ಧರ್ಮ ಸಂದೇಶವಿರುತ್ತದೆ.