ನಂದಿನಿ ಮನುಪ್ರಸಾದ್ ನಾಯಕ್
*ಮೈಸೂರು ಸೌತ್ ಈಸ್ಟ್ ಕ್ಲಬ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ*

ಇಂದು ನಡೆದ ಸಮಾರಂಭದಲ್ಲಿ ಇನ್ನರ್ ವೀಲ್ ಕ್ಲಬ್ ನ ಸಹಯೋಗದೊಂದಿಗೆ ಹತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಬಹುಮಾನ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಕ್ಲಬ್ ನ ಅಧ್ಯಕ್ಷ ರೋ. ಮುರಳೀಧರ್ ವೈ ವಿ, ಕಾರ್ಯದರ್ಶಿ, ರೋ ಸುರೇಶ್, ರೋ ಡಾ. ಈ.ಸಿ. ನಿಂಗರಾಜ್ ಗೌಡ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಡಾ ಶ್ರೀಲಕ್ಷ್ಮಿ ವಾಸುದೇವನ್, ರೋ ವೆಂಕಟೇಶ್ ಬಿ ಆರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ಮಾತನಾಡುತ್ತಾ ಶಿಕ್ಷಣ ಎಂಬುದು ವ್ಯಕ್ತಿಯ ಜ್ಞಾನ, ಕೌಶಲ್ಯ, ಆಚಾರ-ವಿಚಾರ, ಮೌಲ್ಯ ಮತ್ತು ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಗೆ ಸಹಾಯಮಾಡುವ ಮಹತ್ವದ ಪ್ರಕ್ರಿಯೆಯಾಗಿದೆ. ಶಿಕ್ಷಣವು ಕೇವಲ ಪುಸ್ತಕ ಜ್ಞಾನವಲ್ಲ, ಅದು ಜೀವನವನ್ನು ಸರಿಯಾದ ದಿಸೆಯಲ್ಲಿ ನಡೆಸಲು ಮಾರ್ಗದರ್ಶಿ ಕೂಡ ಆಗಿದೆ ಎಂದರು.
ಶಿಕ್ಷಣದ ಉದ್ದೇಶಗಳೆಂದರೆ ಜ್ಞಾನ ವೃದ್ಧಿ, ತತ್ವಶಾಸ್ತ್ರ, ವಿಜ್ಞಾನ, ಇತಿಹಾಸ, ಭಾಷೆ, ಗಣಿತ ಮುಂತಾದ ವಿಷಯಗಳಲ್ಲಿ ಪರಿಣತಿ ಪಡೆಯುವುದು, ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ಶಿಸ್ತು, ಶ್ರದ್ಧೆ, ಸಹಾನುಭೂತಿಯನ್ನೂ ಹೊಂದುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿ, ಒಬ್ಬ ವ್ಯಕ್ತಿ ಸಮಾಜದ ಪ್ರತಿಯೊಂದು ಅಂಗವಾಗಿರುವುದರಿಂದ ಜವಾಬ್ದಾರಿ ನಿರ್ವಹಣೆ ಮಾಡುವುದು. ಸ್ವಾಮಿ ವಿವೇಕಾನಂದರು ಹೇಳಿದಂತೆ ವ್ಯಕ್ತಿತ್ವ ನಿರ್ಮಾಣ, ಸಚ್ಪಾರಿತ್ಯ,
ವೈಯಕ್ತಿಕ ಅಭಿವೃದ್ಧಿ, ಆತ್ಮವಿಶ್ವಾಸ, ನೇತೃತ್ವ, ಸಂಪರ್ಕ ಕೌಶಲ್ಯಗಳನ್ನೂ ವಿದ್ಯಾರ್ಥಿಗಳೆಲ್ಲರೂ ಬೆಳೆಸಿಕೊಳ್ಳಬೇಕೇಂದು ಡಾ. ಈ.ಸಿ. ನಿಂಗರಾಜ್ ಗೌಡರವರು ತಿಳಿಸಿದರು.
ಒಂದು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅತ್ಯಗತ್ಯವಾಗಿದೆ. ವಿದ್ಯೆ ಎಂದರೆ ಜೀವನಕ್ಕೆ ಬೆಳಕು.”ಶಿಕ್ಷಣವಿಲ್ಲದೆ ಮಾನವನು ಮಾನವನಾಗಿ ಬೆಳೆದು ಬರುವುದಿಲ್ಲ.” ಎಂದು ಡಾ. ಬಿ.ಆರ್. ಅಂಬೇಡ್ಕರ್ ರವರು ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರ ಎಂಬುದು ಮಕ್ಕಳ ಅಥವಾ ಯುವಕರ ವೈಯಕ್ತಿಕ ಪ್ರತಿಭೆ, ಸಾಮರ್ಥ್ಯ ಹಾಗೂ ಸಾಧನೆಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ನೀಡುವ ಪ್ರಶಸ್ತಿ ಆಗಿದೆ. ಈ ಪುರಸ್ಕಾರವು ಮಕ್ಕಳಲ್ಲಿ ಸೃಜನಾತ್ಮಕತೆ, ಕ್ರಿಯಾಶೀಲತೆ, ಪ್ರತಿಭಾವಂತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವಪೂರ್ಣವಾಗಿದೆ. ಮಕ್ಕಳ ನೈಸರ್ಗಿಕ ಪ್ರತಿಭೆ, ಸಾಮರ್ಥ್ಯ ಮತ್ತು ಕಲಾವೈಖರಿಯನ್ನು ಗುರುತಿಸಿ ಉತ್ತೇಜಿಸುವುದು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗಿಂತ ಹೊರಗಿನ ಕ್ಷೇತ್ರಗಳಲ್ಲಿಯೂ (ಕಲಾ, ಕ್ರೀಡೆ, ವಿಜ್ಞಾನ, ಸಂಸ್ಕೃತಿ, ನವೋದ್ಯಮ) ವಿದ್ಯಾರ್ಥಿಗಳ ಸಾಧನೆಗೆ ಮಾನ್ಯತೆ ನೀಡುವುದು. ಪ್ರತಿಭೆಯ ಮಾನ್ಯತೆ ಮೂಲಕ ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡುವುದು ಪ್ರಮುಖ ಉದ್ದೇಶವಾಗಿದೆ ಎಂದು ಡಾ.ಈ.ಸಿ. ನಿಂಗರಾಜ್ ಗೌಡ ರವರು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಮಕ್ಕಳು ತಮ್ಮ ಕಠಿಣ ಪರಿಶ್ರಮ ಮತ್ತು ನಡೆದು ಬಂದ ಹಾದಿಯನ್ನು ವಿವರಿಸುತ್ತಾ, ತಮ್ಮ ಸಾಧನೆಯನ್ನು ಗುರುತಿಸಿ ಗೌರವಿಸಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಹತ್ತನೇ ತರಗತಿಯ ಮಕ್ಕಳಾದ, ಅಮೂಲ್ಯ ಪಿ, ಮನೋಜ್ ಎಂ, ರೋಹಿತ್ ಆರ್, ರಾಹುಲ್ ಗಾಂಧಿ ಎನ್ ಡಿ ,ತೇಜಸ್ ಎನ್ ಮತ್ತು ಪಿ ಯು ಸಿ ಮಕ್ಕಳಾದ ಪುಣ್ಯ ಎಂ, ಆದ್ಯ ಎಂ, ಅಮೃತಬಿಂದು ಪಿ, ಸೌಭಾಗ್ಯ ಎನ್, ಸತ್ಯಶ್ರೀ ಎಸ್ ಇವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕ್ಲಬ್ ಮಾಜಿ ಅದ್ಯಕ್ಷರಾದ ಎಂ.ರಾಜೀವ್, ಎಂ.ಮೋಹನ್, ಗೋವರ್ಧನ್ ಯಾದವ್, ಮುರಳಿ, ವಾಸುದೇವನ್, ಗಿರೀಶ್ ನಂಜನಗೂಡು, ರವೀಂದ್ರ, ಜ್ಞಾನಶಂಕರ್, ನಾಗರಾಜ್, ಶ್ರೀಮತಿ ಶುಭಾ ಮುರಳೀಧರ್, ಸೀಮಾ ಮರಿಸ್ವಾಮಿ, ವೀಣಾ ರವೀಂದ್ರ, ರೇಖಾಗೌಡ, ಪ್ರಸನ್ನ, ಆನಂದ್ ಮತ್ತು ಕ್ಲಬಿನ ಸದಸ್ಯರೆಲ್ಲರೂ ಭಾಗವಹಿಸಿದ್ದರು.