ಹುಣಸೂರು:12 ಆಗಸ್ಟ್ 2021
ತಾಲೂಕಿನ ಬಿಳಿಕೆರೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಬಾಲ್ಯವಿವಾಹವಾಗಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾಗಿದ್ದು, ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಗ್ರಾಮವೊಂದರ ೨೪ ವರ್ಷದ ವರ ಪ್ರವೀಣ್ ಕುಮಾರ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಘಟನೆ ವಿವರ:
ಕಳೆದ ಒಂದು ವಾರದ ಹಿಂದೆ ಬಿಳಿಕೆರೆ ಬಳಿಯ ಮಹದೇಶ್ವರ ದೇವಾಲಯದಲ್ಲಿ ಎಚ್.ಡಿ.ಕೋಟೆ ತಾಲೂಕಿನ ಪ್ರವೀಣ್ ಕುಮಾರ್ ಹಾಗೂ ೧೦ನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಕಾನೂನು ಬಾಹಿರವಾಗಿ ವಿವಾಹವಾಗಿರುವ ಬಗ್ಗೆ ವಿಡಿಯೋ ವೈರಲ್ ಆಗಿದ್ದರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಅಧಿಕಾರಿಗಳು ಹುಣಸೂರು ಸಿ.ಡಿ.ಪಿ.ಓ.ಕಚೇರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ನೀಡಿದ ಮಾಹಿತಿಯನ್ನಾಧರಿಸಿದ ಸಿ.ಡಿ.ಪಿ.ಓ.ರಶ್ಮಿಯವರು ಪ್ರವೀಣ್‌ಕುಮಾರ್ ಹಾಗೂ ಪೋಷಕರ ವಿರುದ್ದ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವರ ಪ್ರವೀಣ್ ಕುಮಾರ್‌ಗೆ ೨೪ ವರ್ಷ ವಯಸ್ಸಾಗಿದ್ದರೆ, ಮದುವೆ ಮಾಡಿಕೊಂಡಿರುವ ಬಾಲಕಿ ೧೦ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಪ್ರಕರಣ ದಾಖಲಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಿಯ ಹೇಳಿಕೆ ಪಡೆಯಲು ಯತ್ನಿಸಿದರಾದರೂ ಆಕೆ ತಾನು ವಿವಾಹವಾಗಿಲ್ಲವೆಂಬ ಹೇಳಿಕೆ ನೀಡುತ್ತಿದ್ದಾಳೆ. ಆದರೂ ವಿಡಿಯೋ ವೈರಲ್ ಆಗಿರುವ ಬಗ್ಗೆ ಹೆಚ್ಚಿನ ತನಿಖೆಗಾಗಿ ಎಚ್.ಡಿ.ಕೋಟೆ ಸಿಡಿಪಿಓರಿಗೆ ವಹಿಸಲಾಗಿದೆ ಎಂದು ಹುಣಸೂರು ಸಿಡಿಪಿಓ ರಶ್ಮಿ ಮಾಹಿತಿ ನೀಡಿದ್ದಾರೆ. ತನಿಖೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದರಿಂದ ದೇವಾಲಯದಲ್ಲಿ ವಿವಾಹವಾಗಿರುವ ಬಗ್ಗೆ ಸತ್ಯಾಸತ್ಯತೆ ಹೊರಬೀಳಬೇಕಿದೆ.