ನಂದಿನಿ ಮೈಸೂರು
* ಶ್ರೀ ಚಿಕ್ಕದೇವ ಮ್ಮನವರ ಯುಗಾದಿ ಜಾತ್ರಾ ಮಹೋತ್ಸವ*
*ಹಾಲುಗಡ* *ಮತ್ತು ಇಟ್ನಾ ಗ್ರಾಮದಲ್ಲಿ ಆಯೋಜನೆ*
*ಸಹಸ್ರಾರು ಭಕ್ತರ ಭಾಗಿ* *ಯುಗಾದಿಯ ಹೊಸ ವರ್ಷದಂದು ವಿಶೇಷ ಪೂಜೆ*
ಸರಗೂರು: ತಾಲೂಕಿನ ಅಧಿದೇವತೆ ಪ್ರಸಿದ್ದ ಯಾತ್ರಾ ಸ್ಥಳ ಶ್ರೀಚಿಕ್ಕ ದೇವಮ್ಮನವರ ಬೆಟ್ಟದಲ್ಲಿ ಯುಗಾದಿಯ ವಿಶೇಷ ಪೂಜಾ ಕೈಂಕರ್ಯಗಳನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮುಜರಾಯಿ ಇಲಾಖೆಯ ಪುರೋಹಿತರು ನೆರವೇರಿಸಿದರು.
*ಮುಂಜಾನೆಯಿಂದಲೇ ವಿಶೇಷ ಪೂಜೆ*: ಪ್ರತಿ ವರ್ಷವೂ ಸಹ ಚಂದ್ರಮಾನ ಯುಗಾದಿ ದಿನದಂದು ಮುಂಜಾನೆ 4 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ಪ್ರಾರಂಭಿಸಲಾಯಿತು.
ತಾಲೂಕಿನ ಖಜಾನೆಯಲ್ಲಿರುವ ಅಮ್ಮನವರ ಮೂರ್ತಿಯನ್ನು ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಕಂದಾಯ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಜಾತ್ರಾ ಕಮಿಟಿಯವರಿಗೆ ಹಾಗೂ ಗ್ರಾಮಸ್ಥರಿಗೆ ಅಸ್ತಾಂತರಿಸಿದರು.
ಕಂದಾಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಸರಗೂರು, ಹೆಚ್.ಡಿ.ಕೋಟೆ ಯಿಂದ ಕೆ.ಎಸ್.ಆರ್.ಟಿ.ಸಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ನೋಂದಾಯಿತ ಖಾಸಗೀ ವಾಹನಗಳು ಬೆಟ್ಟದ ಮೇಲ್ಬಾಗಕ್ಕೆ ಭಕ್ತರನ್ನು ಕರೆತರುತ್ತಿದ್ದರು.
*ಅಪಾರ ಸಂಖ್ಯೆಯ ಭಕ್ತರು ಭಾಗಿ* : ಬೆಂಗಳೂರು, ಮೈಸೂರು, ಚಾಮರಾಜನಗರ ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಅಪಾರ ಸಂಖ್ಯೆಯ ಭಕ್ತರು ಭಾಗವಹಿ ಸಿದ್ದರು. ಪ್ರತೀ ವರ್ಷದಂತೆ ಭಕ್ತರು ಕಾಲ್ನಡಿಗೆಯಲ್ಲಿ ಸಾಗಿ, ಕಪಿಲಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಬೆಟ್ಟ ಹತ್ತಿ ದೇವರ ದರ್ಶನ ಪಡೆದು ಪುನೀತರಾದರು. ಹರಕೆ ಹೊತ್ತ ಮಹಿಳೆಯರು ಮತ್ತು ಮಕ್ಕಳು ಬಾಯಿಬೀಗ ಸೇವೆಯಲ್ಲಿ ಪಾಲ್ಗೊಂಡು ಭಕ್ತಿ ಪರಾಕಷ್ಠೆ ಮೆರೆದರು.
ಬೆ.9 ಗಂಟೆಯ ಸಮಯದಲ್ಲಿ ಅಲಂಕೃತ ಅಮ್ಮನವರನ್ನು ಇಟ್ನಾ, ಪುರದಕಟ್ಟೆ, ಕುಂದೂರು, ಚಾಮೇ ಗೌಡರಹುಂಡಿ ಗ್ರಾಮಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಮಂಗಳವಾದ್ಯ, ಮಂತ್ರ ಘೋಷಗಳು, ಜೈಕಾರಗಳೊಂದಿಗೆ ಬೆಟ್ಟದಿಂದ ಕೆಳಗಿಳಿಸಿ, ಹಾಲುಗಡು ವಿನ ಕಪಿಲಾ ನದಿಯ ಜಪದ ಕಟ್ಟೆಯಲ್ಲಿ ಕುಳ್ಳಿರಿಸಿ, ವಿಶೇಷ ಪೂಜಾದಿಗಳನ್ನು ನೆರವೇರಿಸಿದರು.
ಅಕ್ಕ-ಪಕ್ಕದ ಗ್ರಾಮದ ಯಜಮಾನ ರುಗಳು, ಗ್ರಾಮಸ್ಥರು, ಕಂದಾಯ ಇಲಾಖೆ ಅಧಿಕಾರಿಗಳು, ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ನೆರದಿದ್ದರು.
*ಬಿಗಿ ಭದ್ರತೆ*: ಸರಗೂರು ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್, ಹೆಚ್.ಡಿ. ಕೋಟೆ ನಿರೀಕ್ಷಕ ಸಬ್ಬೀರ್ ಹುಸೇನ್, ಸರಗೂರು ಸಬ್ ಇನ್ಸ್ಪೆಕ್ಟರ್ ಎಂ.ಸಿ.ಮಧು, ಅಂತರಸಂತೆ ಸಬ್ ಇನ್ಸ್ಪೆಕ್ಟರ್ ಹನುಮಂತಪ್ಪ ಉಪ್ಪಾರ್, ಸಿಬ್ಬಂದಿಗಳಾದ ಸೋಮನಾಯಕ, ಕೃಷ್ಣಯ್ಯ, ಪ್ರಮೋದ, ರಾಜು, ಶಿವಕುಮಾರ್, ಇಮ್ರಾನ್, ದರ್ಶನ್, ನಾಗೇಗೌಡ ಸೇರಿದಂತೆ ಹುಣಸೂರು ಉಪ ವಿಭಾಗದ ಸಿಬ್ಬಂದಿಗಳು ಭದ್ರತೆ ವಹಿಸಿದ್ದರು.
ಇಂದು ಸ.6 ಗಂಟೆಗೆ ಶ್ರಿಚಿಕ್ಕದೇವಮ್ಮನವರನ್ನು ಹಾಲುಗಡುವಿನಿಂದ ಇಟ್ನಾ ಗ್ರಾಮಕ್ಕೆ ಮಂಗಳ ವಾದ್ಯಗಳ ಸಮೇತ ತಂದು, ಮಠದ ಹೊಲದ ಮಂಟಪದಲ್ಲಿ ಪೂಜಿ ಸಲಾಗುವುದು. ಇಂದು ರಾತ್ರಿ ಅಲಂಕೃತ ಚಿಕ್ಕದೇವಮ್ಮನವರನ್ನು ಕುದುರೆಯ ಪಲ್ಲಕ್ಕಿಯಲ್ಲಿ ಸತ್ತಿಗೆ, ಸೂರಿಪಾನಿ, ಕೋಲಾಟ, ಕೇರಳದ ಚಂಡೆಮದ್ದಳವಾದ್ಯ, ಕಲಾ ತಂಡಗಳು ಸೇರಿದಂತೆ ವಿವಿಧ ಮಂಗಳವಾದ್ಯಗಳನ್ನೊಳಗೊಂಡು, ಬಾಣ, ಬಿರುಸುಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಅಮ್ಮನವರಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸುವರು.