ಬೈವೋಲ್ಟಿನ್ ರೇಷ್ಮೆ ಬಿತ್ತನೆಗೂಡು ರೈತ ಉತ್ಪಾದಕರ ಕಂಪನಿ ಉದ್ಘಾಟನೆ ನಾಮಫಲಕ ಅನಾವರಣ

ಕೃಷ್ಣರಾಜಪೇಟೆ:2 ಆಗಸ್ಟ್ 2022

ರೇಷ್ಮೆ ಬೆಳೆಯು ಕಡಿಮೆ ಅವಧಿಯಲ್ಲಿ ರೈತರಿಗೆ ಹೆಚ್ಚು ಲಾಭವನ್ನು ತಂದುಕೊಡುವ ಬಂಗಾರದ ಬೆಳೆಯಾಗಿದೆ.ಆದ್ದರಿಂದ ರೈತ ಬಾಂಧವರು ರೇಷ್ಮೆ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಚ್ಚು ಲಾಭಗಳಿಸಿ ಸಮೃದ್ಧ ಸ್ವಾಭಿಮಾನ ಜೀವನ ನಡೆಸಬೇಕು ಎಂದು ಮಂಡ್ಯ ಜಿಲ್ಲಾ ರೇಷ್ಮೆ ಇಲಾಖೆಯ ಉಪನಿರ್ದೇಶಕಿ ಪ್ರತಿಭಾ ಕರೆ ನೀಡಿದರು.

ಅವರು ಇಂದು ತಾಲ್ಲೂಕಿನ ಮೈಸೂರು ರಸ್ತೆಯ ಹೆಮ್ಮನಹಳ್ಳಿ ಗೇಟ್ ಬಳಿ ನೂತನವಾಗಿ ಆರಂಭವಾದ ಬೈವೋಲ್ಟಿನ್ ರೇಷ್ಮೆ ಬಿತ್ತನೆಗೂಡು ರೈತ ಉತ್ಪಾದಕರ ಕಂಪನಿಯನ್ನು ಉದ್ಘಾಟಿಸಿ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು..

ಬೈವೋಲ್ಟಿನ್ ರೇಷ್ಮೆ ಬೇಸಾಯಕ್ಕೆ ಕೃಷ್ಣರಾಜಪೇಟೆ ತಾಲ್ಲೂಕಿನ ಹವಾಮಾನ ಹಾಗೂ ಮಣ್ಣಿನ ಫಲವತ್ತತೆಯು ವರದಾನವಾಗಿದೆ. ಆದ್ದರಿಂದ ರೈತರು ರೇಷ್ಮೆ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಚ್ಚಿನ ಆದಾಯ ಸಂಪಾದಿಸಿ ಸಮೃದ್ಧ ಜೀವನ ನಡೆಸುವಂತಾಗಲಿ ಎಂಬ ಸಚಿವ ನಾರಾಯಣಗೌಡರ ಸದಾಶಯದಂತೆ ಬೈವೋಲ್ಟಿನ್ ರೇಷ್ಮೆ ಉತ್ಪಾದಕರ ರೈತರ ಕಂಪನಿಯನ್ನು ಆರಂಬಿಸಲಾಗಿದೆ. ಇಲ್ಲಿ ಪ್ರಗತಿಪರ ರೈತರು ಸೇರಿದಂತೆ ರೇಷ್ಮೆ ಬೆಳೆಗಾರರು ಯಾವುದೇ ಮಧ್ಯವರ್ತಿಗಳು ಹಾಗೂ ದಳ್ಳಾಳಿಗಳ ಹಾವಳಿಯಿಲ್ಲದಂತೆ ವ್ಯವಹಾರ ಮಾಡುವ ಜೊತೆಗೆ ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆಯನ್ನು ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದಾಗಿದೆ. ಆದ್ದರಿಂದ ರೈತ ಉತ್ಪಾದಕರ ಕಂಪನಿಗಳನ್ನು ಜಿಲ್ಲೆಯಲ್ಲಿ ಹೊಸದಾಗಿ ಆರಂಬಿಸುವ ಜೊತೆಗೆ ರೈತರಿಗೆ ತರಬೇತಿ ಮಾರ್ಗದರ್ಶನ ನೀಡಿ ಸಹಾಯ ಮಾಡಲಾಗುತ್ತಿದೆ. ರೈತ ಬಾಂಧವರು ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪ್ರತಿಭಾ ಮನವಿ ಮಾಡಿದರು..

ಪ್ರಗತಿಪರ ರೈತರು ಹಾಗೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಐಚನಹಳ್ಳಿ ಶಿವಣ್ಣ ಮಾತನಾಡಿ ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕವಾಗಿ ಬೆಲೆ ಸಿಗಬೇಕು. ದಳ್ಳಾಳಿಗಳು ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ರೈತರು ಶೋಷಣೆಗೆ ಒಳಗಾಗಿ ಕೃಷಿಯಿಂದ ನಷ್ಠವನ್ನು ಅನುಭವಿಸಬಾರದು ಎಂಬ ಉದ್ದೇಶದಿಂದ ರೈತರಿಗೆ ಅನುಕೂಲ ಮಾಡಿಕೊಡುವ ಸದುದ್ಧೇಶದಿಂದ ರೈತ ಉತ್ಪಾದಕರ ಕಂಪನಿ ಆರಂಬಿಸಲಾಗಿದೆ. ರೈತಬಾಂಧವರು ರೈತ ಉತ್ಪಾದಕರ ಕಂಪನಿಯಲ್ಲಿಯೇ ವ್ಯವಹರಿಸುವ ಮೂಲಕ ಆದಾಯ ಗಳಿಸಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಂಡು ಪ್ರಗತಿಯ ಪಥದತ್ತ ಸಾಗಬೇಕು ಎಂದು ಶಿವಣ್ಣ ಮನವಿ ಮಾಡಿದರು.

ಬೈವೋಲ್ಟಿನ್ ರೇಷ್ಮೆ ಬಿತ್ತನೆಗೂಡು ರೈತ ಉತ್ಪಾದಕರ ಕಂಪನಿಯ ಸಿಇಓ ಆನಂದ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಧನಂಜಯ, ಮುಖಂಡರಾದ ಹೆಮ್ಮನಹಳ್ಳಿರಮೇಶ್, ಹಿರಳಹಳ್ಳಿ ಬಿ.ತಿಮ್ಮೇಗೌಡ, ಬಿ.ಎಸ್.ಶಂಕರ್, ಅಗಸರಹಳ್ಳಿ ರಾಮಕೃಷ್ಣ, ಮುರುಕನಹಳ್ಳಿ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಕೃಷ್ಣೇಗೌಡ, ಅಗಸರಹಳ್ಳಿಯ ಚಂದ್ರೇಗೌಡ, ಗಿರೀಶ್, ಕಾಳೇಗೌಡನಕೊಪ್ಪಲು ಪಾಪೇಗೌಡ, ಡಿಇಓ ಪ್ರವೀಣ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್ ಸೇರಿದಂತೆ ನೂರಾರು ರೇಷ್ಮೆ ಬೆಳೆಗಾರರು ಹಾಗೂ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ
ಕೃಷ್ಣರಾಜಪೇಟೆ, ಮಂಡ್ಯ.

Leave a Reply

Your email address will not be published. Required fields are marked *