ನಂಜನಗೂಡು:26 ಏಪ್ರಿಲ್ 2022
ನಂದಿನಿ ಮೈಸೂರು
ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಇಂದು ಅನ್ನ ನೀಡುವ ಮಣ್ಣು ವಿಷಯುಕ್ತವಾಗುತ್ತಿದ್ದು, ದಯಮಾಡಿ ಅನ್ನದಾತರು ಇನ್ನಾದರೂ ರಾಸಾಯನಿಕ ತ್ಯಜಿಸಿ, ಸಾವಯವ ಕೃಷಿಗೆ ಆದ್ಯತೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಚಂದನ್ ಗೌಡ ಮನವಿ ಮಾಡಿದರು.
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ರೈತ ಕಲ್ಯಾಣ ಸಂಘದ ನೂತನ ಪದಾಧಿಕಾರಿಗಳ ಸೇರ್ಪಡೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆತ್ತ ತಾಯಿಯಷ್ಟೇ ಪ್ರಾಮುಖ್ಯತೆಯನ್ನು ಹೊತ್ತ ತಾಯಿ ಭೂಮಿಗೂ ನೀಡಬೇಕಿದೆ ಎಂದ ಅವರು, ಯಥೇಚ್ಛವಾದ ರಾಸಾಯನಿಕ ಬಳಕೆಯಿಂದಾಗಿ ಇಂದು ನಾವು ಸೇವಿಸುವ ಆಹಾರ ಪದಾರ್ಥಗಳೂ ವಿಷಯುಕ್ತವಾಗುತ್ತಿದೆ.ಆದರೆ ಸಾವಯವ ಕೃಷಿ ಪದ್ದತಿಗೆ ರೈತರು ಮುಂದಾದರೇ, ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದು ಹಾಗೂ ಮಣ್ಣಿನ ರಕ್ಷಣೆಯೂ ಮಾಡಬಹುದು ಎಂದರು.
ನಾವು ಸತ್ತರೆ ಮಣ್ಣಿಗೆ.ಮಣ್ಣೇ ಸತ್ತರೇ ಎಲ್ಲಿಗೆ ಎಂದು ಪ್ರಶ್ನಿಸಿದ ಚಂದನ್ ಗೌಡ, ಇಡೀ ದೇಶಾದ್ಯಂತ ರಾಸಾಯನಿಕ ಮುಕ್ತ ಅಭಿಯಾನಕ್ಕೆ ಮುಂದಾಗಬೇಕು.ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಜವಾಬ್ದಾರಿಯನ್ನು ಎಲ್ಲರಿಗೂ ಅರ್ಥೈಸುವಂತೆ ಮಾಡಬೇಕಿದೆ ಎಂದರು.
ರಾಜ್ಯ ರೈತ ಕಲ್ಯಾಣ ಸಂಘದ ವತಿಯಿಂದ, ಹಳೇ ಮೈಸೂರು ಪ್ರಾಂತ್ಯದಿಂದಲೇ ರಾಸಾಯನಿಕ ಮುಕ್ತ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದು, ರಾಜ್ಯದ ಪ್ರತಿ ಹಳ್ಳಿ,ಹಳ್ಳಿಗೂ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದ ಅವರು, ರೈತರ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸಹ ಶ್ರಮಿಸುವುದಾಗಿ ಭರವಸೆ ನೀಡಿದರು.
ರೈತ ಕಲ್ಯಾಣ ಸಂಘ ಹಾಗೂ ಭೂಮಿಪುತ್ರ ರೈತಮಿತ್ತ ಸಂಸ್ಥೆ ವತಿಯಿಂದ ಬೆಳೆನಾಶ ಸೇರಿದಂತೆ ಈಗಾಗಲೇ ಹಲವು ಸಮಸ್ಯೆಗಳಿಂದ ನೊಂದಿರುವ ಸಾಕಷ್ಟು ರೈತರ ಮನೆಗೆ ತೆರಳಿ ಸಾಂತ್ವನ ಹೇಳಿ, ವೈಯಕ್ತಿಕ ಪರಿಹಾರದ ಜೊತೆ, ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನೂ ಮಂಜೂರು ಮಾಡಿಸಲಾಗಿದೆ..ರೈತರ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನಮ್ಮ ಸಂಘವನ್ನು ಸಂಪರ್ಕಿಸಬಹುದು ಎಂದರಲ್ಲದೇ, ಭೂ ತಾಯಿಯ ಸೇವೆ ಮಾಡಲು ಸಿಕ್ಕಿರುವ ಅವಕಾಶ ನನ್ನ ಸೌಭಾಗ್ಯ ಎಂದರು.
ಇದೇ ಸಂದರ್ಭದಲ್ಲಿ ನಂಜನಗೂಡು, ಹುಲ್ಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಸಾಕಷ್ಟು ರೈತರು ಸಂಘಕ್ಕೆ ಸೇರ್ಪಡೆಯಾದರು.
ನೂತನ ಎಲ್ಲಾ ಪದಾಧಿಕಾರಿಗಳಿಗೆ ಹಸಿರು ಶಾಲು ಹೊದಿಸುವ ಮೂಲಕ ಸಂಘಕ್ಕೆ ಸ್ವಾಗತಿಸಲಾಯಿತು.
ಈ ವೇಳೆ ಮುಖಂಡರಾದ ಹೇಮಂತ್, ಗಿರೀಶ್,ದೇಬೂರು ಅಶೋಕ್, ಗೋವರ್ಧನ್,ವೇಣುಗೋಪಾಲ್,ಅಭಿ,ಸಂಜಯ್,ಶಿವು,ಮಹೇಶ್,ಶಿವಸ್ವಾಮಿ, ಮೂರ್ತಿ,ಹರೀಶ್,ಸ್ವಾಮಿಗೌಡ,ಕಂದಸ್ವಾಮಿ( ಯಡಿಯಾಲ ) ಮತ್ತಿತರರು ಉಪಸ್ಥಿತರಿದ್ದರು.