ಪಿರಿಯಾಪಟ್ಟಣ:5 ಆಗಸ್ಟ್ 2022
ಸತೀಶ್ ಆರಾಧ್ಯ / ನಂದಿನಿ ಮೈಸೂರು
ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಮೂರು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೈಲಕುಪ್ಪೆ ಸಮೀಪದ ದೊಡ್ಡಹರವೆ ಒಂದನೇ ಬ್ಲಾಕ್ ನಲ್ಲಿ ಶುಕ್ರವಾರ ಮುಂಜಾನೆ ಜರುಗಿದೆ.
ಹವಾಮಾನ ವೈಪರಿತ್ಯದಿಂದಾಗಿ ತಾಲ್ಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಗುರುವಾರ ರಾತ್ರಿ ಧಾರಾಕಾರವಾಗಿ ಮುಂದುವರಿದಿದೆ, ಶುಕ್ರವಾರ ಬೆಳಗಿನ ಜಾವ 3 ರಿಂದ 4 ಗಂಟೆ ಸಮಯದಲ್ಲಿ ಬಿದ್ದ ಭಾರಿ ಮಳೆಗೆ ದೊಡ್ಡಹರವೆ ಒಂದನೇ ಬ್ಲಾಕ್ ನಿವಾಸಿ ಪ್ರೇಮ ಎಂಬುವರಿಗೆ ಸೇರಿದ ವಾಸದ ಮನೆ ಗೋಡೆ ಕುಸಿದು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಮೂರು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ, ಗೋಡೆ ಕುಸಿದ ಸಂದರ್ಭ ಭಾರಿ ಶಬ್ದ ಬಂದ ಹಿನ್ನೆಲೆ ಸ್ಥಳೀಯರು ಸ್ಥಳಕ್ಕಾಗಮಿಸಿ ನೋಡಿದಾಗ ಹಸುಗಳು ಸಾವನ್ನಪ್ಪಿದ್ದು ಅಪಾರ ಪ್ರಮಾಣದ ದಿನಬಳಕೆ ವಸ್ತುಗಳು ನಾಶವಾಗಿವೆ, ಮಳೆಯಿಂದಾದ ಅವಘಡದಿಂದಾಗಿ ಪ್ರೇಮ ಅವರ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನೂರಾರು ಮಂದಿ ಸ್ಥಳೀಯರು ಪ್ರೇಮ ಅವರಿಗೆ ಸಾಂತ್ವನ ಹೇಳಿ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಂಡು ಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ಘಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ದೊಡ್ಡಹರವೆ ಕ್ಷೇತ್ರ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಎಸ್.ರಾಮು ಅವರು ಪ್ರತಿಕ್ರಿಯಿಸಿ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರೈತರ ಹೊಲ ಗದ್ದೆಗಳು ಜಲಾವೃತವಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಜತೆಗೆ ವಾಸದ ಮನೆ ಹಾಗು ತಂಬಾಕು ಬ್ಯಾರನ್ ಕೆಲವೆಡೆ ಕುಸಿದಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದ್ದು ಕೂಡಲೇ ತಂಬಾಕು ಮಂಡಳಿ ಹಾಗೂ ಸರ್ಕಾರ ಶೀಘ್ರ ನೊಂದ ಸಾರ್ವಜನಿಕರ ಪರ ನಿಂತು ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಆಗ್ರಹಿಸಿದರು.