ನಂದಿನಿ ಮೈಸೂರು
ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಚಟುವಟಿಕೆಗೆ ಹರ್ಷ ವ್ಯಕ್ತಪಡಿಸಿದ ಜಿಪಂ ಸಿಇಒ ಕೆ.ಎಂ.ಗಾಯಿತ್ರಿ
ಮೈಸೂರು,ಜೂ.24:- ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸಿ ಮೇಲಧಿಕಾರಿಗಳೊಂದಿಗೆ ಒಡನಾಟ ಬೆಳಸಿಕೊಂಡಲ್ಲಿ ಅವರಿಂದಲೂ ಬೆಂಬಲ ಸಿಗಲಿದೆ. ಎಲ್ಲರೂ ಸೇರಿ ಇಲಾಖೆಗೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ.ಗಾಯತ್ರಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಮೈಸೂರಿನಲ್ಲಿ ಆಯೋಜಿಸಿದ್ದ ನಿವೃತ್ತ ಅಧಿಕಾರಿಗಳು, ನಿವೃತ್ತ ಪಿಡಿಒಗಳಿಗೆ ಬೀಳ್ಕೊಡುಗೆ ಮತ್ತು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಂಘ ಅಥವಾ ಸಂಘಟನೆಗಳು ಹಲವು ಗುಂಪುಗಳನ್ನು ಹೊಂದಿರುತ್ತವೆ. ಆದರೆ, ಪಿಡಿಒಗಳ ಈ ಸಂಘದಲ್ಲಿ ಅಂತಹ ಗುಂಪುಗಾರಿಕೆ ಇಲ್ಲ. ಒಂದು ಸಂಘ ಬೆಳೆಯಬೇಕೆಂದರೆ ವಿಭಿನ್ನ ಅಭಿಪ್ರಾಯ, ಚರ್ಚೆ, ಸಂವಾದ, ತಿಕ್ಕಾಟಗಳು ಇರಬೇಕು. ಅವುಗಳು ಗುಂಪುಗಳಾಗಬಾರದು ಅಷ್ಟೇ. ಅಧಿಕಾರಿಗಳು ಸೇವಾವಧಿಯಿಂದ ನಿವೃತ್ತರಾದಾಗ ಅವರನ್ನು ಗೌರವಯುತವಾಗಿ ಬೀಳ್ಕುಡೊವಂತಹದ್ದು ಉಳಿದ ಸಹದ್ಯೋಗಿಗಳ ಜವಾಬ್ದಾರಿ. ಅಲ್ಲದೇ, ಅಧಿಕಾರಿಗಳ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಅವರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಇನ್ನಷ್ಟು ಸಾಧನೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದರು.
*ಸಂಘಕ್ಕೆ ಕಟ್ಟಡ ಒದಗಿಸುವಂತೆ ಕೋರಿಕೆ*
ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮೈಸೂರು ಜಿಲ್ಲಾ ಸಮಿತಿ ಅಧ್ಯಕ್ಷರಾದ ಕೆ.ರುಕ್ಮಾಂಗದ ಕಂಚಿನಕೆರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಘದ ಕಚೇರಿ ಆರಂಭಿಸಲು ಮೈಸೂರು ನಗರದಲ್ಲಿ ಸೂಕ್ತ ಕಟ್ಟಡ ಒದಗಿಸಿಕೊಡುವುದು, ಜಿಪಂ ಅಧಿಕಾರಿಗಳ ಕ್ರೀಡಾಕೂಟದಲ್ಲಿ ಪಿಡಿಒಗಳು ಮತ್ತು ಕುಟುಂಬಸ್ಥರು ಭಾಗವಹಿಸಲು ಅವಕಾಶ ಮಾಡಿಕೊಡುವುದು, ಆಡಿಟ್ ಕಂಡಿಕೆ ತೀರುವಳಿಯನ್ನು ಮುಕ್ತಗೊಳಿಸುವಂತೆ ಕೋರಿದರು.
ಇದೇ ವೇಳೆ ಜಿಲ್ಲಾ ಪಂಚಾಯಿತಿ ನಿವೃತ್ತ ಉಪಕಾರ್ಯದರ್ಶಿ ಡಾ.ಎಸ್.ಪ್ರೇಮಕುಮಾರ್, ನಿವೃತ್ತ ಪಿಡಿಒಗಳಾದ ನಾಗರಾಜು, ಶ್ರೀನಿವಾಸ್, ನಾರಾಯಣ, ಸಿದ್ದಪ್ಪಾಜಿ, ನಾಗೇಂದ್ರ, ಆರ್.ಮಹದೇವ ಅವರಿಗೆ ಬೀಳ್ಕೊಟ್ಟು ಹಾಗೂ ಉತ್ತಮ ಅಂಕ ಗಳಿಸಿದ ವರುಣ, ಪೂರ್ಣಿಮಾ, ಪವನ್ ಗೌಡ, ವೇದ ಆರ್ಯನ್, ಕೆ.ಸಿ.ಆಕಾಶ್, ಸಿರಿ, ಲಿಖಿತ ಅವರನ್ನು ಅಭಿನಂದಿಸಲಾಯಿತು.
ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಮುಖ್ಯ ಯೋಜನಾಧಾರಿ ಧನುಷ್, ಮುಖ್ಯ ಲೆಕ್ಕಾಧಿಕಾರಿ ಶ್ರೀನಂದ, ಜಿಪಂ ಸಹಾಯಕ ಕಾರ್ಯದರ್ಶಿ ಕುಲದೀಪ್, ತಾಲ್ಲೂಕು ಪಂಚಾಯಿತಿ ಇಒ ಸಿ. ಕೃಷ್ಣ, ಎಚ್.ಡಿ.ಗಿರೀಶ್, ಸತೀಶ್, ಸುಷ್ಮಾ, ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಖಜಾಂಚಿ ಸಿ.ಪ್ರಕಾಶ್, ಟಿ.ಎನ್.ಶ್ರೀನಿವಾಸ್, ಮೊಹಮ್ಮದ್ ಇಸ್ಹಾಕ್, ಎಸ್.ವಿ.ಸೌಮ್ಯ, ವೃಷಬೇಂದ್ರಪ್ಪ, ವಿ.ಎಸ್.ಪೂರ್ಣಿಮಾ, ರಾಘವೇಂದ್ರ ಪ್ರಸನ್ನ, ಟಿ.ಸೌಮ್ಯಲತಾ, ರೂಪೇಶ್, ಸೌಮ್ಯಲತಾ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರು, ಮತ್ತಿತರರು ಹಾಜರಿದ್ದರು.
ಕೋಟ್..
ತಾಪಂ ಇಒ ಆಗಿ ಕಾರ್ಯನಿರ್ವಹಿಸಿ, ಕಳೆದ ಮೂರು ವರ್ಷಗಳಿಂದ ಜಿಪಂನಲ್ಲಿ ಸೇವೆ ಸಲ್ಲಿಸಿದದರೂ ಎಲ್ಲಾ ಪಿಡಿಒಗಳನ್ನು ಒಟ್ಟಿಗೆ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ನಿಮ್ಮೆಲ್ಲರ ಈ ಅಭಿಮಾನಕ್ಕೆ ಮನಸೋತಿದ್ದೇನೆ.
-ಡಾ.ಎಸ್.ಪ್ರೇಮಕುಮಾರ್
ನಿವೃತ್ತ ಉಪಕಾರ್ಯದರ್ಶಿ (ಆಡಳಿತ)
ಜಿ.ಪಂ ಮೈಸೂರು.
ಪ್ರತಿಯೊಬ್ಬರ ಜೀವನದಲ್ಲಿ ತಂದೆ- ತಾಯಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಪಿಡಿಒ ಸಂಘ ಅಭಿನಂದಿಸಿರುವುದು ನಮಗೆ ಪ್ರೇರಣಾದಾಯಕವಾಗಿದೆ.
-ಲಿಖಿತ, ಅಭಿನಂದಿತ ವಿದ್ಯಾರ್ಥಿನಿ