ದಕ್ಷತೆಯ ಫಲಕ ಗೆದ್ದ ಮೈಸೂರು ರೈಲ್ವೆ ವಿಭಾಗದ ಹಲವಾರು ಇಲಾಖೆಗಳು ಮತ್ತು ಆರ್ಥಿಕ ವರ್ಷ 2021-22ರ ಒಟ್ಟಾರೆ ದಕ್ಷತೆಯ ಫಲಕವನ್ನು ಹುಬ್ಬಳ್ಳಿ ರೈಲ್ವೆ ವಿಭಾಗದೊಂದಿಗೆ ಹಂಚಿಕೆ

ಮೈಸೂರು:19 ಮೇ 2022

ನಂದಿನಿ ಮೈಸೂರು

ರೈಲ್ವೆ ಇತಿಹಾಸದಲ್ಲಿಯೇ ಮೈಸೂರು ವಿಭಾಗವು ಅದ್ವಿತೀಯ ಸಾಧನೆಮಾಡಿ ಇದುವರೆಗಿನ 2021-22 ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಆದಾಯ ಮಾಡುವ ಮೂಲಕ ರೂ.902 ಕೋಟಿಗಳನ್ನು ಸಂಪಾದಿಸಿ ದಕ್ಷತೆಯ ಶೀಲ್ಡ್‌ನ ಜಂಟಿ ವಿಜೇತರಾಗಿದ್ದಾರೆ. ಇದೇ ಸಂದರ್ಭದಲ್ಲಿ ಮೈಸೂರು ವಿಭಾಗದ ಹಲವಾರು ವಿಭಾಗಗಳು ದಕ್ಷತೆಯ ಶೀಲ್ಡ್‌ಗಳನ್ನು ಸಹ ಗೆದ್ದಿವೆ.

2022 ರ ಮೇ 18 ರಂದು ಹುಬ್ಬಳ್ಳಿಯಲ್ಲಿ ನಡೆದ 67 ನೇ ರೈಲ್ವೇ ಸಪ್ತಾಹ ಆಚರಣೆಯಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿಯ ಪ್ರಧಾನ ವ್ಯವಸ್ಥಾಪಕ ಶ್ರೀ ಸಂಜೀವ್ ಕಿಶೋರ್ ಅವರು ಒಟ್ಟಾರೆ ದಕ್ಷತೆಯ ಶೀಲ್ಡ್ ಅನ್ನು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ಅವರಿಗೆ ಹಸ್ತಾಂತರಿಸಿದರು.ಎಂದು ತಮಲ್ಲಿ ಹಂಚಿಕೊಳ್ಳವುದಕ್ಕೆ ನಮಗೆ ಹಿರಿದದಾ ಹೆಮ್ಮೆ ಎನಿಸಿದೆ.

ಒಟ್ಟಾರೆ ದಕ್ಷತೆಯ ಫಲಕವನ್ನು ಹುಬ್ಬಳ್ಳಿ ವಿಭಾಗದೊಂದಿಗೆ ಹಂಚಿಕೊಳ್ಳುವುದರ ಜೊತೆಗೆ, ಮೈಸೂರು ವಿಭಾಗದ ಲೆಕ್ಕಪತ್ರ ವಿಭಾಗ, ಎಲೆಕ್ಟ್ರಿಕಲ್, ವೈದ್ಯಕೀಯ ಮತ್ತು ಕಾರ್ಯಾಚರಣಾ ವಿಭಾಗಗಳು ದಕ್ಷತೆಯ ಫಲಕಗಳನ್ನು ಗೆದ್ದಿವೆ. ಅಂತರ ವಿಭಾಗೀಯ ಸುರಕ್ಷತಾ ಫಲಕ ಕೂಡ ಮೈಸೂರು ವಿಭಾಗಕ್ಕೆ ದೊರಕಿದೆ. ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಅತ್ಯುತ್ತಮ ನಿರ್ವಹಣಾ ನಿಲ್ದಾಣ (ಪ್ರಮುಖ/ದೊಡ್ಡ ನಿಲ್ದಾಣ) ಎಂದು ಪ್ರಶಸ್ತಿ ಸಿಕ್ಕಿದ್ದರೆ, ‘ರೈಲ್ ಮದದ್’ ಮತ್ತು ಪ್ರಮುಖ ಕಾರ್ಯಕ್ಷಮತೆ ಸೂಚ್ಯಂಕ (ಕೆಪಿಐ) ಫಲಕಗಳನ್ನು ಮೈಸೂರು ವಿಭಾಗ ಗೆದ್ದಿದೆ. ಸಿಬ್ಬಂದಿಯ ತರಬೇತಿಯಲ್ಲಿನ ಅತ್ಯುತ್ತಮ ಪ್ರಯತ್ನ/ಸಾಧನೆಗೆ ನೀಡುವ ಪ್ರಶಸ್ತಿಯನ್ನು ಮೈಸೂರಿನ ಅಶೋಕಪುರಂ ಕೇಂದ್ರ ರೈಲ್ವೆ ಕಾರ್ಯಾಗಾರ ಪಡೆದಿದೆ. ಇದರ ಜೊತೆಗೆ 06 ಅಧಿಕಾರಿಗಳು ಮತ್ತು 34 ಸಿಬ್ಬಂದಿಯನ್ನು 2021-22 ನೇ ಸಾಲಿನಲ್ಲಿ ಮಾಡಿದ ಅವರ ಪ್ರತಿಭಾನ್ವಿತ ಕೆಲಸಕ್ಕಾಗಿ ಪುರಸ್ಕರಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕವು ಒಡ್ಡಿದ ಕಷ್ಟಕರ ಸವಾಲುಗಳ ಹೊರತಾಗಿಯೂ, ಮೈಸೂರು ವಿಭಾಗವು FY 2021-22 ರಲ್ಲಿ 688.18 ಕೋಟಿ ರೂಪಾಯಿಗಳಷ್ಟು ಅತ್ಯಧಿಕ ಸರಕು ಸಾಗಣೆ ಆದಾಯವನ್ನು ದಾಖಲಿಸಿದ್ದು, ಇದು ಕಳೆದ ವರ್ಷದ ಹೋಲಿಕೆಯಲ್ಲಿ 54.58% ಬೆಳವಣಿಗೆಯನ್ನು ಹೊಂದಿದೆ. ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕದ (BDU) ಉತ್ಸಾಹದ ಮತ್ತು ಮಾರುಕಟ್ಟೆಗೆ ತಕ್ಕಂತಹ ನಿರಂತರ ತಂತ್ರಗಳ ಸಹಾಯದಿಂದ ಮೈಸೂರು ವಿಭಾಗವು 9.09 ದಶಲಕ್ಷ ಟನ್ ಸರಕು ಸಾಗಣೆ ಮಾಡಿದೆ. ಆರ್ಥಿಕ ವರ್ಷ 2020-21 ರ ಅಂಕಿಅಂಶಗಳಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ, ದೇಶದ ಈಶಾನ್ಯ ಭಾಗಗಳಿಗೆ ವಾಹನಗಳ ಸಾಗಣೆ ಮತ್ತು ರೈತರು ಎದುರಿಸುತ್ತಿರುವ ತೊಂದರೆಗಳನ್ನು ತಗ್ಗಿಸಲು ನಡೆಸಿದ ಕಿಸಾನ್ ವಿಶೇಷ ರೈಲುಗಳ ಮೂಲಕ ದೂರದ ಸ್ಥಳಗಳಿಗೆ ಹಣ್ಣುಗಳು ಮತ್ತು ತರಕಾರಿಗಳನ್ನು ಸಾಗಣೆ ಮಾಡಿದ ಫಲವಾಗಿ ಮೈಸೂರು ವಿಭಾಗವು ಸರಕ್ಕು ಸಾಗಿಸುವಲ್ಲಿ ನೂರು ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಅಗತ್ಯ ವಸ್ತುಗಳ ಸಾಗಣೆಯಲ್ಲಿ ಮೈಸೂರು ವಿಭಾಗವು ನಿರ್ವಹಿಸಿದ ಪ್ರಮುಖ ಪಾತ್ರವು ಸಾಂಕ್ರಾಮಿಕ ರೋಗದ ಸಂಕಷ್ಟದ ಹಂತದಲ್ಲಿ ಪೂರೈಕೆ ಸರಪಳಿಗಳು ನಿರಂತರವಾಗಿರಲು ಸಹಾಯ ಮಾಡಿದೆ. ವಿಭಾಗದಿಂದ ಪ್ರಯಾಣ ಶುರು ಮಾಡುವ ಆಧಾರದಲ್ಲಿ 14.04 ದಶಲಕ್ಷ ಪ್ರಯಾಣಿಕರನ್ನು ಸಾಗಿಸಿ ಮೈಸೂರು ವಿಭಾಗವು ಪ್ರಯಾಣಿಕರ ವಿಭಾಗದಲ್ಲಿ ರೂ.193.80 ಕೋಟಿ ಆದಾಯವನ್ನು ಗಳಿಸಿದೆ.

ಮೈಸೂರಿನ ರೈಲ್ವೆ ಆಸ್ಪತ್ರೆಯಲ್ಲಿ ಹೊಸ PSA 500 ಲೀಟರ್/ನಿಮಿಷ ಆಮ್ಲಜನಕ ಉತ್ಪಾದಕ ಘಟಕದ ಸ್ಥಾಪನೆ ಮತ್ತು ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಬೃಹತ್ ಲಸಿಕಾ ಕಾರ್ಯಕ್ರಮ ವಿಭಾಗದ ಇತರ ಪ್ರಮುಖ ಮುಖ್ಯಾಂಶಗಳಾಗಿವೆ. ರೈಲ್ವೆ ಸಚಿವಾಲಯ (ರೈಲ್ವೆ ಮಂಡಳಿ) ನಿಗದಿಪಡಿಸಿದ ಗುರಿಯ ಪ್ರಕಾರ ಮೈಸೂರು ವಿಭಾಗದ ಪ್ರಾದೇಶಿಕ ವ್ಯಾಪ್ತಿಯಲ್ಲಿರುವ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ನಿರ್ಮೂಲನೆ ಮಾಡಿ, ರಸ್ತೆ ಕೆಳ ಸೇತುವೆ (RUBs) ಮತ್ತು ರಸ್ತೆ ಮೇಲ್ಸೇತುವೆ (ROBs) ನಿರ್ಮಿಸುವ ಮೂಲಕ ಅಪಘಾತಗಳಿಗೆ ‘ಶೂನ್ಯ’ ಸಹಿಷ್ಣುತೆಯೊಂದಿಗೆ ಹಾಗು ಹೆಚ್ಚಿನ ಸಾಂದ್ರತೆಯ ಮಾರ್ಗಗಳಲ್ಲಿನ (PSR) ಶಾಶ್ವತ ವೇಗ ನಿರ್ಬಂಧಗಳನ್ನು ತೆಗೆದುಹಾಕುವುದರ ಮೂಲಕ ಕಾರ್ಯಾಚರಣೆ ದಕ್ಷತೆ ಉತ್ತಮ ಪಡಿಸಲಾಗಿದೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ರವರು ದಕ್ಷತೆಯ ಫಲಕಗಳ ಪಟ್ಟಿಯು ಪ್ರತಿಬಿಂಬಿಸುವಂತೆ ತನ್ನ ಗ್ರಾಹಕರಿಗೆ ಸುರಕ್ಷಿತ ಮತ್ತು ದಕ್ಷ ಸೇವೆಗಳನ್ನು ಒದಗಿಸುವ ದೃಢವಾದ ವಿಧಾನ ಮತ್ತು ಅನುಕರಣೀಯ ಸಮರ್ಪಣೆಗಾಗಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ಹಳಿ ದ್ವಿಪಥ ಮತ್ತು ವಿದ್ಯುದ್ದೀಕರಣದಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಿದ ಪರಿಣಾಮವಾಗಿ ರೈಲ್ವೆಯ ಕಾರ್ಯಕ್ಷಮತೆಯು ದಾಖಲೆಯ ಹೊಸ್ತಿಲಲ್ಲಿರುವುದರಿಂದ ಮುಂಬರುವ ವರ್ಷಗಳಲ್ಲಿ ಅದನ್ನು ಮತ್ತಷ್ಟು ಉತ್ತಮ ಪಡಿಸಲು ಶ್ರಮಿಸುವುದನ್ನು ಮುಂದುವರಿಸಲು ಎಲ್ಲಾ ರೈಲ್ವೆ ಸಿಬ್ಬಂದಿಗಳಿಗೆ ಕರೆ ನೀಡಿದರು.

ಡಾ.ಮಂಜುನಾಥ್ ಕನಮಡಿ
ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು
ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಗಳು,ಮೈಸೂರು.

ಫೋಟೋ ಶೀರ್ಷಿಕೆ: ನೈಋತ್ಯ ರೈಲ್ವೆ ಪ್ರಧಾನ ಕಛೇರಿಯಲ್ಲಿ ನಡೆದ 67ನೇ ರೈಲ್ವೇ ಸಪ್ತಾಹ ಆಚರಣೆಯಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ಅವರು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ಮತ್ತು ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಅರವಿಂದ್ ಮಲ್ಖಾಡೆ ಅವರಿಗೆ ಸಮಗ್ರ ದಕ್ಷತೆಯ ಶೀಲ್ಡ್ ಅನ್ನು ಹಸ್ತಾಂತರಿಸಿದರು.

Leave a Reply

Your email address will not be published. Required fields are marked *