ನಂದಿನಿ ಮೈಸೂರು
ನರೇಗಾ ಕೂಲಿಕಾರರಿಗೆ ಮತದಾನದ ಅರಿವು
ಮೈಸೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮೈಸೂರು ತಾಲ್ಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಮುಳ್ಳೂರು ಕೆರೆ ಏರಿ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಮೇ.10 ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ಬುಧವಾರ ಅರಿವು ಮೂಡಿಸಲಾಯಿತು.
ಈ ವೇಳೆ ತಾಲ್ಲೂಕು ಪಂಚಾಯತ್ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಕೆ.ಎಂ.ರಘುನಾಥ್ ಅವರು ನರೇಗಾ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿ, ಹಳ್ಳಿಗಳೇ ದೇಶದ ಜೀವಾಳವಾಗಿದ್ದು, ಹಳ್ಳಿಗಳು ಪ್ರಗತಿ ಪಥದಲ್ಲಿ ಸಾಗಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಸಂವಿಧಾನವು ನಮಗೆ ನೀಡಿರುವ ಮತದಾನದ ಎಂಬ ಮೌಲ್ಯಯುತ ಹಕ್ಕನ್ನು ವಿವೇಚನೆಯಿಂದ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಚಲಾಯಿಸಬೇಕು. ಮತದಾನ ಮಾಡುವುದು ಪವಿತ್ರ ಕಾರ್ಯವೆಂದು ಭಾವಿಸಿ ನೀವು ಮತ್ತು ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಕೂಡ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಸಿ.ಶಿವಣ್ಣ, ಕಾರ್ಯದರ್ಶಿ ಚಲುವರಾಜು, ತಾಂತ್ರಿಕ ಸಂಯೋಜಕ ಉಲ್ಲಾಸ್, ತಾಂತ್ರಿಕ ಸಹಾಯ ಅಭಿಯಂತರರಾದ ನಿತ್ಯೇಶ್ವರಿ, ನೇತ್ರಾವತಿ, ಸಂಧ್ಯಾರಾಣಿ, ಬಿ.ಸಂಧ್ಯಾ, ಗ್ರಾಮ ಪಂಚಾಯಿತಿ ಸಿಬ್ಬಂದಿ ಪ್ರವೀಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.