ನಕ್ಷತ್ರ ಡ್ಯಾನ್ಸ್ ಸಂಸ್ಥೆಯಿಂದ ನೃತ್ಯ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಿಸಿದ ಬೆಕ್ಕರೆ ಸತೀಶ್ ಆರಾಧ್ಯ

ಪಿರಿಯಾಪಟ್ಟಣ:25 ಆಗಸ್ಟ್ 2022

ನಂದಿನಿ ಮೈಸೂರು

ಪೋಷಕರು ತಮ್ಮ ಮಕ್ಕಳಿಗೆ ಪಠ್ಯದ ಜೊತೆ ಪಠ್ಯೆತರ ಆಸಕ್ತಿಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕರಿಸಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಹೇಳಿದರು.

ಪಟ್ಟಣದ ನಕ್ಷತ್ರ ಡ್ಯಾನ್ಸ್ ಸಂಸ್ಥೆ ವತಿಯಿಂದ ನಡೆದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು,  ಬಾಲ್ಯದಿಂದಲೇ ಮಕ್ಕಳಲ್ಲಿರುವ ಹಲವು ವಿಶೇಷ ಪಠ್ಯೇತರ ಚಟುವಟಿಕೆಗಳನ್ನು ಪೋಷಕರು ಪ್ರೋತ್ಸಾಹಿಸಿ ಉತ್ತಮ ಮಾರ್ಗದರ್ಶನ ನೀಡಿದಾಗ ಸಮಾಜದಲ್ಲಿ ಸಾಧನೆ ಮಾಡಬಹುದು ಎಂದರು. 


ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸಿ.ಎನ್ ವಿಜಯ್ ಅವರು ಮಾತನಾಡಿ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ನೃತ್ಯ ಗಾಯನ ಹಾಗೂ ಕರಾಟೆ ತರಗತಿಗಳು ಇಂದು ಗ್ರಾಮಾಂತರ ಪ್ರದೇಶಗಳಲ್ಲಿಯು ತೆರೆದು ಹಲವು ಪ್ರತಿಭೆಗಳು ತಮ್ಮ ಸಾಮರ್ಥ್ಯ ಹೊರ ಜಗತ್ತಿಗೆ ತೋರಿಸಲು ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.

ತೀರ್ಪುಗಾರರಾಗಿ ಆಗಮಿಸಿದ್ದ ಕುಶಾಲನಗರದ ನೃತ್ಯ ಸಂಯೋಜಕ ಪ್ರದೀಪ್ ಅವರು ಮಾತನಾಡಿ ಸ್ಪರ್ಧೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದರು.

ಸಮಾಜ ಸೇವಕ ಕೋಗಿಲವಾಡಿ ಮಂಜು ಅವರು ಮಾತನಾಡಿ ಯಾವುದೇ ಸ್ಪರ್ಧೆಗಳಲ್ಲಿ ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವಂತೆ ಕೋರಿದರು.

ವಿದ್ಯಾರ್ಥಿಗಳಿಗೆ ಸಬ್ ಜೂನಿಯರ್ ಹಾಗು ಜೂನಿಯರ್ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನ ಪತ್ರ ವಿತರಿಸಲಾಯಿತು.

ಈ ಸಂದರ್ಭ ನಕ್ಷತ್ರ ಡಾನ್ಸ್ ಸ್ಕೂಲ್ ನೃತ್ಯ ಸಂಯೋಜಕ ಪ್ರಸನ್ನ, ಚಿತ್ರಕಲಾ ಮಾಸ್ಟರ್ ಪವನ್, ಡ್ಯಾನ್ಸ್ ಸ್ಕೂಲ್ ವಿದ್ಯಾರ್ಥಿಗಳು ಹಾಗು ಪೋಷಕರು ಇದ್ದರು.

Leave a Reply

Your email address will not be published. Required fields are marked *