ನಂದಿನಿ ಮೈಸೂರು
*ನಾಗಚೈತನ್ಯ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್..ಕಾರ್ತಿಕೇಯ-2 ನಿರ್ದೇಶಕ ಜೊತೆ ಕೈ ಜೋಡಿಸಿದ ಟಾಲಿವುಡ್ ಯುವ ಸಾಮ್ರಾಟ್*
ಟಾಲಿವುಡ್ ಯುವ ಸಾಮ್ರಾಟ ನಾಗಚೈತನ್ಯ ಹೊಸ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಅದಕ್ಕಾಗಿ ಅವರು ಆಂಧ್ರಪ್ರದೇಶದ ಶ್ರೀಕಾಕುಳಂ ಹಳ್ಳಿಗೆ ಭೇಟಿ ನೀಡಿ ಮೀನುಗಾರರ ಸಮುದಾಯ ಭೇಟಿ ಮಾಡಿ ಕೆಲ ಸಮಯ ಅವರೊಟ್ಟಿಗೆ ಕಳೆದಿದ್ದಾರೆ. ಮೀನುಗಾರರ ಸಂಸ್ಕೃತಿ, ನೆಲ, ಭಾಷೆ, ಜೀವನಶೈಲಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಅಂದಹಾಗೇ ನಾಗಚೈತನ್ಯ ನಟಿಸುತ್ತಿರುವ 23 ನೇ ಚಿತ್ರ ಇದಾಗಿದ್ದು, ನೈಜ ಘಟನೆಯ ಸುತ್ತ ಇಡೀ ಕಥೆಯನ್ನು ಕಟ್ಟಿಕೊಡಲಾಗಿದೆ.
ಕಾರ್ತಿಕೇಯ-2 ನಂತಹ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಂದು ಮೊಂಡೇಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ NC23 ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದ್ದು, ಶೀಘ್ರದಲ್ಲೇ ಈ ಚಿತ್ರ ಸೆಟ್ಟೇರುತ್ತಿದೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದು, ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ.
#NC23 ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದ್ದು, ಇದೇ ತಿಂಗಳಿಂದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ನಾಗಚೈತನ್ಯ, ಚಂದೂ ಮೊಂಡೇಟಿ ಹಾಗೂ ಬನ್ನಿ ವಾಸ್ ನಿನ್ನೆ ವೈಜಾಗ್ ನಲ್ಲಿ ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಂದು ಶ್ರೀಕಾಕುಳಂ ಗ್ರಾಮಕ್ಕೆ ತೆರಳಿ ಮೀನುಗಾರರ ಕುಟುಂಬವನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ನಾಯಕ ನಾಗಚೈತನ್ಯ, “ಚಂದು ಅವರು 6 ತಿಂಗಳ ಹಿಂದೆ ಕಥೆಯನ್ನು ಹೇಳಿದ್ದರು. ನಾನು ತುಂಬಾ ಉತ್ಸುಕನಾಗಿದ್ದೇನೆ. ನೈಜ ಘಟನೆಗಳನ್ನು ಆಧರಿಸಿ ಅವರು ಕಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ವಾಸ್ ಮತ್ತು ಚಂದೂ ಎರಡು ವರ್ಷಗಳಿಂದ ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಥೆ ತುಂಬಾ ಸ್ಪೂರ್ತಿದಾಯಕವಾಗಿತ್ತು. ಮೀನುಗಾರರ ಜೀವನಶೈಲಿ, ಅವರ ಭಾಷೆ ಮತ್ತು ಹಳ್ಳಿಯ ಸೊಬಗನ್ನು ತಿಳಿಯಲು ನಾವು ಇಲ್ಲಿಗೆ ಬಂದಿದ್ದೇವೆ. ಪ್ರಿ-ಪ್ರೊಡಕ್ಷನ್ ಕೆಲಸಗಳು ಇಂದಿನಿಂದ ಪ್ರಾರಂಭವಾಗುತ್ತವೆ. ”
ಚಂದೂ ಮೊಂಡೇಟಿ, “ಕಾರ್ತಿಕ್ ಎಂಬ ಸ್ಥಳೀಯ ವ್ಯಕ್ತಿ 2018 ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ಸಿದ್ಧಪಡಿಸಿದ್ದಾರೆ. ಅವರು ಆರಂಭದಲ್ಲಿ ಅರವಿಂದ್ ಮತ್ತು ಬನ್ನಿ ವಾಸ್ ಅವರಿಗೆ ಕಥೆಯನ್ನು ಹೇಳಿದರು. ಕಥೆ ಕೇಳಿದಾಗ ಎಕ್ಸೈಟ್ ಆದೆ. ನಾವು ಕಳೆದ 2 ವರ್ಷಗಳಿಂದ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದೀಗ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಚೆನ್ನಾಗಿ ಬಂದಿದೆ. ಚೈತನ್ಯ ಕಥೆಯಿಂದ ಸಂತಸಗೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿಯೇ ಸಿನಿಮಾದ ಪ್ರೀ-ಪ್ರೊಡಕ್ಷನ್ ಆರಂಭಿಸಲು ನಾವು ಬಯಸಿದ್ದೇವೆ ಎಂದರು.
ಶೀಘ್ರದಲ್ಲೇ ಈ ಪ್ರಾಜೆಕ್ಟ್ ಅಪ್ ಡೇಟ್ ಬಗ್ಗೆ ತಿಳಿಸುವುದಾಗಿ ಚಿತ್ರತಂಡ ಹೇಳಿದೆ.