ಮೈಸೂರು:15 ಅಕ್ಟೋಬರ್ 2021
ನ@ದಿನಿ
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿ ಮುಗಿದು ಉತ್ಸವಕ್ಕೆ ತೆರೆಬಿದ್ದ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರುಣನ ಅರ್ಭಟ ಜೋರಾಗಿ, ಜನ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳಿಸಿತು.
ಕೊರೊನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗಿದ್ದು, ಜಂಬೂ ಸವಾರಿ ಮೆರವಣಿಗೆ ಅರಮನೆ ಅಂಗಳಕ್ಕಷ್ಟೆ ಸೀಮಿತವಾಗಿತ್ತು. ಚಾಮುಂಡೇಶ್ವರಿ ವಿರಾಜಮಾನಳಾಗಿದ್ದ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಕುಮ್ಕಿ ಆನೆಗಳಾದ ಚೈತ್ರ, ಕಾವೇರಿ ಯೊಂದಿಗೆ ೬೦೦ ಮೀಟರ್ ಹೆಜ್ಜೆ ಹಾಕಿದನು. ಬಳಿಕ ಕೆಲವೇ ಸಮಯದಲ್ಲಿ ನಾಡಹಬ್ಬ ಮೈಸೂರು ದಸರಾಗೆ ತೆರೆಬಿತ್ತು.
ಜಂಬೂ ಸವಾರಿ ಮೆರವಣಿಗೆ ಮುಕ್ತಾಯಗೊಂಡು ಮುಸ್ಸಂಜೆ ೬.೧೫ರ ಸುಮಾರಿಗೆ ವರುಣನ ಸಿಂಚನ ಆರಂಭವಾಯಿತು. ಗುಡುಗು, ಮಿಂಚು, ಸಿಡಿಲಿನ ಆರ್ಭಟವಿಲ್ಲದೆ ಧೋ ಎಂದು ಸುರಿದ ಮಳೆಯ ಸುಮಾರು ೪೫ ನಿಮಿಷಗಳ ನಂತರ ಗುಡುಗು ಸಿಡಿಲಿನ ಅಬ್ಬರ ಕ್ರಮೇಣ ಜೋರಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವರುಣ ಸುರಿದ ದೃಶ್ಯ ಕಂಡು ಬಂದಿತು.
ಜಂಬೂ ಸವಾರಿ ದಿನ ಸಂಜೆ ೬.೩೦ಕ್ಕೆ ಹೊತ್ತಿಕೊಳ್ಳ ಬೇಕಿದ್ದ ದೀಪಾಲಂಕಾರವನ್ನೂ ತಡೆ ಹಿಡಿಯಲಾಗಿತ್ತು. ದೀಪಾಲಂಕಾರ ನೋಡಲು ಬೇರೆಡೆಯಿಂದ ಬಂದಿದ್ದವರಿಗೆ ನಿರಾಶೆಯಾಗಿತ್ತು.
ನಗರದ ಚಾಮರಾಜ ಜೋಡಿ ರಸ್ತೆ, ಕೆ.ಆರ್.ವೃತ್ತ, ಮಧುವನ, ಎಂ.ಜಿ.ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ಕೆಲವೆಡೆ ಮನೆಗಳಿಗೂ ನೀರು ನುಗ್ಗಿತು. ದೀಪಾಲಂಕಾರ ವೈರ್ ಕಟ್ ಆಗಿ ಕೆಲವೆಡೆ ದೀಪ ಉರಿಯುತ್ತಿಲ್ಲ. ಒಟ್ಟಾರೆ ಮಳೆಯಿಂದ ಜನ ಜೀವನ ಅಸ್ತವ್ಯಸ್ಥಗೊಂಡಿದೆ.