ನಂದಿನಿ ಮೈಸೂರು
*ಜನಪರ ಅಭಿವೃದ್ಧಿಗೆ ನಮ್ಮ ಸರ್ಕಾರ ಕಟಿಬದ್ಧ: ಸಚಿವ ಡಾ.ಹೆಚ್.ಸಿ.ಮಹದೇವಪ್ಪ*
ತಿ.ನರಸೀಪುರ,ಜು.2:- ಬಿಜೆಪಿಯ ಜನವಿರೋಧಿ ನೀತಿ ಹಾಗೂ ಆಡಳಿತ ವೈಫಲ್ಯದಿಂದ ಬೇಸತ್ತ ನಾಡಿನ ಜನರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಜನರ ನಿರೀಕ್ಷೆಯಂತೆ ನಮ್ಮ ಸರ್ಕಾರವು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ತಾಲ್ಲೂಕಿನ ಸೋಸಲೆ ಗ್ರಾಮದಲ್ಲಿ ಹೋಬಳಿ ಮತದಾರರಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕೃತಜ್ಞತಾ ಸಮಾರಂಭವನ್ನು ಉದ್ಘಾಟಿಸಿ, ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜನರ ಅಭಿವೃದ್ಧಿಗಾಗಿ ಹೋರಾಟ ನಡೆಸುವುದೇ ಕಾಂಗ್ರೆಸ್ ಪಕ್ಷದ ನಿಲುವಾಗಿದೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿಪರವಾಗಿ ಯಾವುದೇ ಕೆಲಸ ಮಾಡದ ಬಿಜೆಪಿಯು ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕೋಮುದ್ವೇಷ ಹರಡಿತ್ತು. ಅವರ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿಯೇ ಮರಿಚೀಕೆಯಾಗಿತ್ತು. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿದೆ. ಆಶ್ವಾಸನೆ ನೀಡಿರುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಮಾಡುವ ಮೂಲಕ ಜನರು ನೆಮ್ಮದಿಯಿಂದ ಜೀವನ ನಡೆಸುವಂತೆ ಆಡಳಿತ ನಡೆಸುತ್ತೇವೆ ಎಂದು ಭರವಸೆ ನೀಡಿದರು.
ಸಮಾಜದಲ್ಲಿ ಶಾಂತಿ ಕದಡುವ ಜನವಿರೋಧಿ ಕಾನೂನುಗಳನ್ನು ಬಿಜೆಪಿ ಜಾರಿಮಾಡಿತ್ತು. ನಮ್ಮ ಸರ್ಕಾರವು ಅಂತಹ ಅವೈಜ್ಞಾನಿಕ ಕಾನೂನುಗಳನ್ನು ಹಿಂಪಡೆದು ವೈವಿಧ್ಯತೆಯಲ್ಲಿ ಏಕತೆ ಒಳಗೊಂಡಿರುವ ಸಂವಿಧಾನದ ಆಶಯದಂತೆ ಆಡಳಿತ ನಡೆಸಲಿದೆ. ಜನರ ರಕ್ಷಣೆಗಾಗಿ ಕಾನೂನು ಜಾರಿಮಾಡುವುದೇ ಪ್ರಭುತ್ವ ಕರ್ತವ್ಯವಾಗಿದೆ ಎಂದು ಹೇಳಿದರು.
ಜಿಲ್ಲೆಯ ಅಭಿವೃಧ್ಧಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇನೆ. ಜನರಿಗೆ ಅನುಕೂಲವಾಗುವ ಎಲ್ಲಾ ಬಗೆಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ನೀರಾವರಿ ಯೋಜನೆ ಪಟ್ಟಿಮಾಡಿದ್ದೇನೆ. ರೈತರಿಗೆ ಉಪಯೋಗವಾಗುಂತೆ ಹೆಚ್ಚಿನ ಮಟ್ಟದಲ್ಲಿ ನೀರಾವರಿ ಸೌಲಭ್ಯ ದೊರಕಿಸಿಕೊಡಲಾಗುವುದು ಆಶ್ವಾಸನೆ ನೀಡಿದರು.
ಚುನಾವಣೆಯಲ್ಲಿ ತಾಲ್ಲೂಕಿನ ಎಲ್ಲಾ ಹೋಬಳಿಗಳಿಂದ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿ ಸಚಿವನಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದೀರಿ. ಎಲ್ಲಾ ಮತದಾರರ ಪ್ರೀತಿ, ವಿಶ್ವಾಸಕ್ಕೆ ಕೃತಜ್ಞನಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಯುವ ಮುಖಂಡರಾದ ಸುನೀಲ್ ಬೋಸ್ ಅವರು ಮಾತಾನಡಿ, ಚುನಾವಣೆ ಸಂದರ್ಭದಲ್ಲಿ ನನ್ನ ಹಾಗೂ ತಂದೆಯವರ ಮೇಲೆ ಅನೇಕ ಅಪಪ್ರಚಾರಗಳನ್ನು ಮಾಡಲಾಯಿತು. ಆದರೆ ಕ್ಷೇತ್ರದ ಎಲ್ಲಾ ಯುವಕರು, ಮಹಿಳೆಯರು, ಹಿರಿಯರು ಸೈನ್ಯಕಟ್ಟಿಕೊಂಡು ಕೆಲಸ ಮಾಡಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಅದಕ್ಕಾಗಿ ಎಲ್ಲಾ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಮಾಜಿ ಶಾಸಕಿ ಜೆ.ಸುನೀತ ವೀರಪ್ಪಗೌಡ ಮಾತನಾಡಿ, ಕ್ಷೇತ್ರದ ಜನರು ತಮ್ಮ ಮೇಲೆ ಅಪಾರವಾದ ನಿರೀಕ್ಷೆ ಇಟ್ಟಿದ್ದು, ಕ್ಷೆತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮುಖಂಡ ಮಹೇಶ್ ಸೋಸಲೆ ಮಾತನಾಡಿದರು. ಕಾಂಗ್ರಸ್ ಹಿರಿಯ ಮುಖಂಡರಾದ ಡಾ.ಕೆ.ಮಹದೇವು, ಯುವ ಮುಖಂಡರಾದ ಅನಿಲ್ ಬೋಸ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎನ್.ರವಿಕುಮಾರ್, ಕೆಪಿಸಿಸಿ ಸದಸ್ಯರಾದ ಮಲ್ಲಿಕಾರ್ಜುನಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಡಿ.ಬಸವರಾಜು, ಹೋಬಳಿಯ ಎಂಟು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಹದೇಶ್ವರ ಬಸ್ ಮಾಲೀಕರಾದ ವಜ್ರೇಗೌಡ, ಜಿ.ಪಂ. ಮಾಜಿ ಸದಸ್ಯರಾದ ಸದಸ್ಯರಾದ ಕೋಟೆ ರವಿ, ಮಂಗಳ ಮಹದೇವಸ್ವಾಮಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.