‘ಮದುವೆ’ ಸಾರ್ಥಕ ಬದುಕಿಗೆ ಮುನ್ನುಡಿ: ಬನ್ನೂರು ರಾಜು

ನಂದಿನಿ ಮೈಸೂರು

‘ಮದುವೆ’ ಸಾರ್ಥಕ ಬದುಕಿಗೆ ಮುನ್ನುಡಿ: ಬನ್ನೂರು ರಾಜು

ಮೈಸೂರು: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಬಂಧನಕ್ಕೆ ವಿಶೇಷವಾದ ಮಹತ್ವವಿದ್ದು ಗಂಡು-ಹೆಣ್ಣಿನ ನಡುವಿನ ಏಳೇಳು ಜನುಮದಲ್ಲೂ ತೀರದ ಸಂಬಂಧವಿದೆಂದು ಇವತ್ತಿಗೂ ನಂಬಲಾಗಿದ್ದು ಮದುವೆ ಎನ್ನುವುದು ಪರಿಪೂರ್ಣವಾದ ಮಾನವ ಜನ್ಮದ ಪವಿತ್ರ ಜೀವನಕ್ಕೆ ಮುನ್ನುಡಿ ಬರೆಯುವ ವಧು-ವರರ ಪವಿತ್ರ ಬಂಧವೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ಪಟ್ಟರು.


ನಗರದ ಅಗ್ರಹಾರದ ಗನ್ ಹೌಸ್ ಹತ್ತಿರದ ವಿದ್ಯಾ ಭಾರತಿ ಕಲ್ಯಾಣ ಮಂಟಪದಲ್ಲಿ ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಶ್ರೀ ಬಸವೇ ಶ್ವರ ವಧು-ವರರ ವಿವಾಹ ವೇದಿಕೆಯು ಸಂಯುಕ್ತವಾಗಿ ಆಯೋಜಿಸಿದ್ದ ವೀರಶೈವ – ಲಿಂಗಾಯಿತ ವಧು-ವರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜೋಪಯೋಗಿ ಹಾಗೂ ಸಮುದಾಯೋಪಯೋಗಿ ಸೇವಾ ಕೈಂಕರ್ಯವಾದ ವಧು- ವರರ ಸಮಾವೇಶವು ಸ್ವಯಂವರದಂತಹ ಹೆಸರುಗಳಿಂದ ರಾಜ ಮಹಾರಾಜರಾಧಿಯಾಗಿ ಬಹು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದ್ದು ಈಗ ಕಾಲಕ್ಕೆ ತಕ್ಕಂತೆ ನವೀಕೃತಗೊಂಡು ವಿವಾಹ ಕಲ್ಯಾಣ ಕಾರ್ಯದಲ್ಲಿ ನಿರತವಾಗಿದ್ದು ಅಗತ್ಯವುಳ್ಳವರೆಲ್ಲರೂ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಮ್ಯಾರೇಜ್ ಇಸ್ ಮೇಡ್ ಇನ್ ಹೆವೆನ್ ಎನ್ನುತ್ತಾರೆ. ಒಂದು ಗಂಡಿಗೆ ಒಂದು ಹೆಣ್ಣು ಅಥವಾ ಒಂದು ಹೆಣ್ಣಿಗೆ ಒಂದು ಗಂಡೆಂಬಂತೆ ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದಂತೆ. ಹಾಗಂತ ಹೆಣ್ಣು ಹೆತ್ತವರಾಗಲಿ, ಅಥವಾ ಗಂಡು ಹೆತ್ತವರಾಗಲಿ, ಹಾಗು ಸ್ವತಃ ಮದುವೆಗೆ ಸಿದ್ಧವಾಗಿರುವ ವಧು-ವರ ರಾಗಲಿ ಸುಮ್ಮನಿದ್ದರಾದೀತೇ? ಈ ದಿಸೆಯಲ್ಲಿ ವಿವಾಹಕ್ಕಾಗಿ ವಧು-ವರರ ಹುಡುಕಾಟದ ಪ್ರಯತ್ನ ಮಾಡಬೇಕಲ್ಲವೇ? ಹಾಗಾಗಿ ಒಬ್ಬರಿಗಿಂತ ಇಬ್ಬರು ಲೇಸು,ಇಬ್ಬರಿಗಿಂತ ಇನ್ನಷ್ಟು ಜನರ ಪ್ರಯತ್ನ ಲೇಸೆಂಬಂತೆ ವಧು-ವರರ ಸಮಾವೇಶವು ಕಾರ್ಯನಿರ್ವಹಿಸುತ್ತಿದೆ. ಇಂತಹ ಸಮಾವೇಶಗಳು ಮದುವೆಗಳ ಜೊತೆ ಜೊತೆಗೆ ಸಮುದಾಯದ ಸಂಘಟನೆಗೂ ಪೂರಕವಾಗಿ ಕೆಲಸ ಮಾಡುತ್ತಿವೆ.ಕೆಲವು ಮಂದಿ ಹಾಗೂ ಕೆಲವು ಸಂಘಟನೆಗಳು ವಧು-ವರರ ವಿವಾಹ ವೇದಿಕೆಗಳನ್ನು ಮತ್ತು ಸಮಾವೇಶಗಳನ್ನು ವ್ಯಾಪಾರೀ ಕರಣ ಮಾಡಿಕೊಂಡಿದ್ದರೆ ಮತ್ತೆ ಕೆಲವರು ಯಾವುದೇ ಪ್ರತಿಫಲಾ ಪೇಕ್ಷೆಯನ್ನು ನಿರೀಕ್ಷಿಸದೆ ನಿಜವಾದ ಸೇವೆ ಮಾಡಿ ಕೊಂಡಿದ್ದಾರೆ. ಇಂತಹವರಲ್ಲಿ ಸೇವಾ ಮನೋಭಾವದ ವ್ಯಕ್ತಿತ್ವದ ಶ್ರೀ ಬಸವರಾಜೇಂದ್ರ ಸ್ವಾಮಿ ನೇತೃತ್ವದ ಶ್ರೀಬಸವೇಶ್ವರ ವಧು-ವರರ ವಿವಾಹ ವೇದಿಕೆಯು ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೆ ಎಂದ ಅವರು, ಈ ಸಂಸ್ಥೆಯ ಪ್ರಾಮಾಣಿಕ ಸೇವೆಯನ್ನು ಸಮಾಜ ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ ಪ್ರೋತ್ಸಾಹವನ್ನು ನೀಡಬೇಕಾಗಿದೆ ಎಂದು ಹೇಳಿದರು.

ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವ ರಾಜೇಂದ್ರ ಸ್ವಾಮಿ ಅವರು ಪ್ರಾಸ್ತವಿಕವಾಗಿ ಮಾತನಾಡಿ ವೀರಶೈವ ಲಿಂಗಾಯಿತ ವಧು – ವರರ ಸಮಾವೇಶದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಜ್ಯೋತಿರ್ಗಮಯ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಮಾದೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಬೆಮೆಲ್ ಉಮೇಶ್,ಹಿಮಾಂಶು ಮುಂತಾದವರಿದ್ದರು.

Leave a Reply

Your email address will not be published. Required fields are marked *