ನಂದಿನಿ ಮೈಸೂರು
ಸೆನ್ಸಾರ್ ಪಾಸಾದ ‘ಲೈನ್ ಮ್ಯಾನ್’ಗೆ ಸಿಕ್ತು ಯು ಸರ್ಟಿಫಿಕೇಟ
ಭಿನ್ನ, ಡಿಯರ್ ಸತ್ಯ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಕೊಡುಗೆ ‘ಲೈನ್ ಮ್ಯಾನ್’. ಟಕ್ಕರ್ ಹಾಗೂ ರನ್ ಆಂಟೋನಿ ಚಿತ್ರ ನಿರ್ದೇಶಿಸಿದ್ದ ರಘು ಶಾಸ್ತ್ರಿ ಈ ಚಿತ್ರದ ಸಾರಥಿ. ಈಗಾಗಲೇ ಶೂಟಿಂಗ್ ಮುಗಿಸಿರುವ ಲೈನ್ ಮ್ಯಾನ್ ಸೆನ್ಸಾರ್ ಪಾಸಾಗಿದ್ದು, ಯು ಸರ್ಟಿಫಿಕೇಟ್ ಸಿಕ್ಕಿದೆ.
ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ನಿರ್ಮಿಸುತ್ತಿರುವ ಲೈನ್ ಮ್ಯಾನ್ ಸಿನಿಮಾಗೆ ತ್ರಿಗುಣ್ ನಾಯಕ. ಆರ್.ಜಿ.ವಿ ನಿರ್ದೇಶನದ ‘ಕೊಂಡ’ ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್ ಇದು ನಾಯಕನಾಗಿ ಚೊಚ್ಚಲ ಹೆಜ್ಜೆ. ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದು, ಹಿರಿಯ ನಟಿ ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದ್ದಾರೆ.
ಹಳ್ಳಿ ಕಡೆ ದಿನಾ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್ ಸಂಬಂಧಿಸಿ ತೊಂದರೆ ಸರಿಪಡಿಸುವ ‘ಲೈನ್ ಮ್ಯಾನ್’ ಸುತ್ತ ಈ ಕಥೆ ನಡೆಯಲಿದೆ. ತ್ರಿಗುಣ್ ‘ಲೈನ್ ಮ್ಯಾನ್’ ಪಾತ್ರದಲ್ಲಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ.ಪಿ. , ಜೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಚಾಮರಾಜನಗರ ಚಂದಕವಾಡಿ ಶೂಟಿಂಗ್ ನಡೆಸಲಾಗಿದ್ದು, ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಸೆನ್ಸಾರ್ ಪಾಸಾಗಿರುವ ಲೈನ್ ಮ್ಯಾನ್ ಅಕ್ಟೋಬರ್ ಮೊದಲ ವಾರ ತೆರೆಗೆ ಬರಲಿದೆ