ರುದ್ರಭೂಮಿಯಲ್ಲಿ ಸೆಟ್ಟೇರಿದ ’ಕೊನೆಯ ನಿಲ್ದಾಣ’ ಚಿತ್ರ

ನಂದಿನಿ ಮೈಸೂರು

ರುದ್ರಭೂಮಿಯಲ್ಲಿ ಸೆಟ್ಟೇರಿದ ’ಕೊನೆಯ ನಿಲ್ದಾಣ’ ಚಿತ್ರ

ವಿಶೇಷ ಎನ್ನುವಂತೆ ’ಕೊನೆಯ ನಿಲ್ದಾಣ’ ಚಿತ್ರದ ಮುಹೂರ್ತ ಸಮಾರಂಭವು ಮೈಸೂರಿನ ವಿದ್ಯಾರಣ್ಯಪುರ ಲಿಂಗಾಯಿತರ ರುದ್ರಭೂಮಿಯಲ್ಲಿ ಸರಳವಾಗಿ ನಡೆಯಿತು. ಮೈಸೂರು ಮೇಯರ್ ಶಿವಕುಮಾರ್.ಎಂ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ನಂತರ ಮಾತನಾಡಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಚಿತ್ರ ಇದಾಗಿದ್ದು, ಜೀವನದ ಕೊನೆಯ ದಿನಗಳಲ್ಲಿ ಮನುಷ್ಯ ಮುಕ್ತಿಯನ್ನು ಹೊಂದುತ್ತಾನೆ. ಇದೇ ಊರಿನ ಆದರ್ಶ ಮಹಿಳೆ ನೀಲಮ್ಮನ ಕಥೆಯನ್ನು ಹೇಳಹೊರಟಿದ್ದಾರೆ ಎಂದು ತಿಳಿದುಬಂದಿದೆ ಅಂತ ಶುಭಹಾರೈಸಿದರು. ’ಹೆಣ್ಣು ಅಬಲೆಯಲ್ಲ’ ಎಂಬುದಾಗಿ ಅಡಿಬರಹದಲ್ಲಿ ಹೇಳಿಕೊಂಡಿದೆ.
ಅಮೇರಿಕಾದಲ್ಲಿರುವ ಕನ್ನಡಿಗ ಹರೀಶ್.ಎಸ್.ಕೋಲಾರ್ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಹಿರಿಯ ನಟ, ನಿರ್ದೇಶಕ ಎಂ.ಡಿ.ಕೌಶಿಕ್ ಆಕ್ಷನ್ ಕಟ್ ಹೇಳುವ ಜತೆಗೆ ಯೂಟ್ಯೂಬರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಹುಟ್ಟು ಸಾವು ಎನ್ನುವುದು ನಿರಂತರ ಪ್ರಕ್ರಿಯೆ. ಯಾರು ಶಾಶ್ವತವಾಗಿ ಇರಲಿಕ್ಕೆ ಆಗುವುದಿಲ್ಲ. ಆತನು ಪ್ರಪಂಚ ನಾಳುವ ದೊರೆಯಾಗಿದ್ದರೂ, ಅಥವಾ ರಸ್ತೆಯಲ್ಲಿ ಭಿಕ್ಷೆ ಬೇಡುವ ಭಿಕಾರಿಯಾಗಿದ್ದರೂ ಅಷ್ಟೇ. ಇಬ್ಬರಿಗೂ ಕಡೆಯ ನಿಲ್ದಾಣ ಇದೇ ಆಗಿರುತ್ತದೆ. ಹಿರಿಯ ಕವಿ ಡಿವಿಜಿ ಅವರ ’ಮಸಣಗಳು ಎಷ್ಟೋ ತೊಟ್ಟಿಲುಗಳೆಷ್ಟೋ ಧರೆಯೊಳಗೆ, ತೊಟ್ಟಿಲಿಗಳಷ್ಟೋ ಮಸಣಗಳಷ್ಟು ಧರೆಯೊಳಗೆ’ ಎಂಬ ಸಾಲುಗಳು ಮಂಕುತಿಮ್ಮನ ಕಗ್ಗದಲ್ಲಿ ಇರುವುದು ಚಿತ್ರಕ್ಕೆ ಸೂಕ್ತವಾಗಿದೆ. ಜೀವನಕ್ಕೆ ಬೇಕಾದ ತತ್ವಗಳು, ವೇದಾಂತ ಸಾಧ್ಯವಾದರೆ ಬದುಕು ಏನು ಎಂಬುದನ್ನು ಆರ್ಥ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಸ್ಪೂರ್ತಿಯನ್ನು ನಿರ್ದೇಶಕರು ಸಿನಿಮಾಕ್ಕೆ ತೆಗೆದುಕೊಂಡು ಚಿತ್ರಕಥೆಯನ್ನು ರಚಿಸಿದ್ದಾರೆ.
ಮೂರು ದಶಕಕ್ಕೂ ಹೆಚ್ಚು ಕಾಲ ರುದ್ರಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ತೋಡಿರುವ ನೀಲಮ್ಮ ರೀಲ್‌ದಲ್ಲಿ ಅದೇ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಾರಗಣದಲ್ಲಿ ಮಹೇಶ್‌ದೇವು, ಹಾಸನದ ಪೂಜಾರಘುನಂದನ್, ಮೀಸೆಆಂಜನಪ್ಪ, ಬಸವರಾಜಮೈಸೂರು, ಉಗ್ರಂಸುರೇಶ್, ನಾಣಿಹೆಬ್ಬಾಳ್, ಆನಂದ್‌ಬಾಬು, ಮಂಜುನಾಥ್.ಆರ್ ಹಾಗೂ ರಂಗಾಯಣದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಪ್ರೊ.ದೊಡ್ಡರಂಗೇಗೌಡ ಮತ್ತು ಆಸ್ಟ್ರೇಲಿಯಾದ ಕೃಷ್ಣಪ್ರಸಾದ್, ಅಮೇರಿಕಾದ ಮಧುಅಕ್ಕಿಹೆಬ್ಬಾಳ್ ಅರ್ಥಪೂರ್ಣ ಸಾಹಿತ್ಯಕ್ಕೆ ಮೂಡಲ್ ಕುಣಿಗಲ್‌ಕೆರೆ ಖ್ಯಾತಿಯ ರಾಮ್‌ಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದಾರೆ. ರಾಮ್‌ಪ್ರಸಾದ್, ಸುಪ್ರಿಯಾರಘುನಂದನ್, ಸಂಹಿತಾಹರೀಶ್ ಹಾಡುಗಳಿಗೆ ಧ್ವನಿಯಾಗಲಿದ್ದಾರೆ. ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ, ರಚನೆ-ಸಂಭಾಷಣೆ ಬಿ.ಶಿವಾನಂದ ಅವರದಾಗಿದೆ. ಸಂಪೂರ್ಣ ಚಿತ್ರೀಕರಣ ಸ್ಮಶಾನದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *