ಚಾಮುಂಡೇಶ್ವರಿ ಬಿಜೆಪಿ ಅಭ್ಯರ್ಥಿಯಾಗಿ ಕವೀಶ್‌ಗೌಡರಿಂದ ನಾಮಪತ್ರ ಸಲ್ಲಿಕೆ

ನಂದಿನಿ ಮೈಸೂರು

*ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರ,ಬೃಹತ್ ರೋಡ್ ಶೋ ನಡೆಸಿ ಕವೀಶ್‌ಗೌಡರಿಂದ ನಾಮಪತ್ರ ಸಲ್ಲಿಕೆ*

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಈ ಬಾರಿ ಹೇಗಾದರೂ ಸರಿಯೇ ಕಮಲ ಹಾರಿಸುವ ತವಕದಲ್ಲಿರುವ ಕವೀಶ್‌ಗೌಡ ಮಂಗಳವಾರ ಬೋಗಾದಿಯಲ್ಲಿ ಬೃಹತ್‌ ರೋಡ್‌ ಶೋ ಬಳಿಕ ದಂಪತಿ ಸಮೇತ ನಾಮಪತ್ರ ಸಲ್ಲಿಸಿದರು.
ಬೋಗಾದಿಯ ಅರಳಿಕಟ್ಟೆ ಗಣಪತಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಳಸ ಹೊತ್ತ ಮಹಿಳೆಯರು, ಸಾಂಸ್ಕೃತಿಕ ಕಲಾತಂಡದ ಮೆರವಣಿಗೆಯೊಂದಿಗೆ ನೂರಾರು ಪಕ್ಷದ ಕಾರ್ಯಕರ್ತರೊಂದಿಗೆ ಪಕ್ಷದ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಈ ವೇಳೆ ತೆರೆದ ವಾಹನದಲ್ಲಿ ಆಕಾಂಕ್ಷಿಗಳಾಗಿದ್ದ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್‌ ಹಾಗೂ ನಿಕಟಪೂರ್ವ ಅಧ್ಯಕ್ಷ ಅರುಣ್‌ಕುಮಾರ್‌ಗೌಡ ಮೊದಲಾದವರು ಪಾಲ್ಗೊಂಡಿದ್ದರು.

ಬಳಿಕ ನಜರ್‌ಬಾದ್‌ನಲ್ಲಿರುವ ತಾಲ್ಲೂಕು ಪಂಚಾಯಿತಿಯ ಚುನಾವಣಾ ಕಚೇರಿಗೆ ತೆರೆಳಿ ಪತ್ನಿ ಡಾ.ಪ್ರಜ್ಞಾ ಕವೀಶ್‌, ಸಹೋದರ ಅವಿಶ್‌ಗೌಡ, ಕ್ಷೇತ್ರದ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್‌, ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು ಅವರೊಟ್ಟಿಗೆ ನಾಮಪತ್ರ ಸಲ್ಲಿಸಿದರು. ಮೆರವಣಿಗೆ ಉದ್ದಕ್ಕೂ ನೂರಾರು ಮಂದಿ ಯುವಕರು ಬೈಕ್‌ ರ್ಯಾಲಿ ನಡೆಸಿ ಗಮನ ಸೆಳೆದರು.

ನಾಮಪತ್ರ ಸಲ್ಲಿಕೆ ಬಳಿಕ ಕವೀಶ್‌ಗೌಡ ಮಾತನಾಡಿ, ಬಿಜೆಪಿ ಪಕ್ಷ ನನ್ನಂತ ಯುವಕನನ್ನು ಗುರುತಿಸಿ ಶಕ್ತಿ ತುಂಬಿ ಜನಸೇವೆ ಮಾಡಲು ಅವಕಾಶ ಕೊಟ್ಟಿರುವುದು ಖುಷಿ ತರಿಸಿದೆ. ತುಂಬಾ ವಿಶೇಷವಾಗಿ ಪ್ರಧಾನಿ ನರೇಂದ್ರಮೋದಿ, ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಸರ್ಕಾರ ಯುವ ಜನತೆಗೆ ಹೆಚ್ಚಿನ ಉತ್ತೇಜನ ನೀಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಸರ್ಕಾರ ಯುವ ಸಮೂಹದ ವಿಧಾನಸಭೆಯಲ್ಲಿ ಧ್ವನಿ ಮಾಡಬೇಕೆಂದು ಬಯಸಿ ರಾಜ್ಯದಲ್ಲಿ 33 ಯುವ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಅದರಲ್ಲಿ ನನ್ನಗೂ ಅವಕಾಶ ಕೊಟ್ಟಿದೆ. ಹಿಂದೆ ಕ್ಷೇತ್ರದಲ್ಲಿ ಎನಾಗಿದೆ ಎಂಬುದನ್ನು ನೋಡಲು ಹೋಗುವುದಿಲ್ಲ. ಈ ಬಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟು ಮತಯಾಚಿಸುತ್ತೇನೆ. ಪಕ್ಷದ ಕಾರ್ಯಕರ್ತರೆ ಅಭ್ಯರ್ಥಿಯಾಗಿ ಪಕ್ಷ ಗೆಲ್ಲಿಸುವ ವಿಶ್ವಾಸವಿದೆ ಎಂದರು.

Leave a Reply

Your email address will not be published. Required fields are marked *