ಕೌಟಿಲ್ಯ ಶಾಲೆಯ 18ನೇ ವಾರ್ಷಿಕೋತ್ಸವ, ಕೌಟಿಲ್ಯ ಸಾಂಸ್ಕೃತಿಕ ಪರ್ವ – 2023-24 ಸಂಭ್ರಮ

ನಂದಿನಿ ಮೈಸೂರು

ಕೌಟಿಲ್ಯ ವಿದ್ಯಾಲಯ, ಕನಕದಾಸನಗರ, ದಟ್ಟಗಳ್ಳಿ, ಮೈಸೂರು. ವೈಭವದ ಕೌಟಿಲ್ಯ ಸಾಂಸ್ಕೃತಿಕ ಪರ್ವ 2023-24′ 18ನೇ ವರ್ಷದ ಶಾಲಾ ವಾರ್ಷಿಕೋತ್ಸವ ಆಚರಣೆ.

ನಗರದ ಕೌಟಿಲ್ಯ ವಿದ್ಯಾಲಯವು 2023-24ನೇ ಸಾಲಿನ 18ನೇ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ದಿನಾಂಕ 16 ಡಿಸೆಂಬರ್ 2023 ರ ಶನಿವಾರದಂದು ಮೈಸೂರು ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೌಟಿಲ್ಯ ಸಾಂಸ್ಕೃತಿಕ ಪರ್ವ -2023-24 ಕಾರ್ಯಕ್ರಮಕ್ಕೆ
ಮುಖ್ಯ ಅತಿಥಿಗಳಾಗಿ ಮೈಸೂರಿನ ಹೆಮ್ಮೆಯ ಜಿಲ್ಲಾಧಿಕಾರಿಗಳಾದಂತಹ ಡಾ. ರಾಜೇಂದ್ರ ಕೆ ವಿ, ಐ.ಎ.ಎಸ್ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಯುತರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ “ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಿಂದ ಆದಷ್ಟೂ ದೂರವಿದ್ದು ಅಧ್ಯಯನದ ಕಡೆ ಗಮನಹರಿಸಿ ತಂದೆ, ತಾಯಿಗೆ ಮತ್ತು ಓದಿದ ಶಿಕ್ಷಣ ಸಂಸ್ಥೆಗೆ ಹೆಸರು ಮತ್ತು ಕೀರ್ತಿ ತರಬೇಕು. ಹಾಗೇ ಸಂವಿಧಾನಾತ್ಮಕವಾಗಿ ಜಾರಿಯಿರುವ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ಅರಿತು ನಡೆಯಬೇಕು” ಎಂದು ವಿದ್ಯಾರ್ಥಿಗಳು ಮತ್ತು ಸಂಸ್ಥೆಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ಆಗಮಿಸಿದಂತಹ ಮತ್ತೊರ್ವ ಮುಖ್ಯ ಅತಿಥಿಗಳಾದ, ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಆದಂತಹ ಡಾ. ಎಸ್ ಎನ್ ವಿ ಎಲ್ ನರಸಿಂಹರಾಜುರವರು ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ “ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿಯವರು ಕೈಗೊಂಡಿರುವಂತಹ ಕಾರ್ಯಗಳನ್ನು ಶ್ಲಾಘಿಸುತ್ತಾ, ಶಾಲೆಯು ಮತ್ತಷ್ಟು ಅಭಿವೃದ್ಧಿಯನ್ನು ಹೊಂದಲಿ” ಎಂದು ಶುಭ ಹಾರೈಸಿದರು.

ಬೆಂಗಳೂರಿನ ಆರ್ ವಿ ಸಮೂಹ ಸಂಸ್ಥೆಗಳ ಟ್ರಸ್ಟಿ ಹಾಗೂ ಪ್ರಸಿದ್ಧ ಮಕ್ಕಳ ತಜ್ಞರು ಆದಂತಹ ಡಾ. ಪ್ರಕಾಶ್ ಎಂ. ಎಸ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಮ್ಮ ಅರ್ಥಪೂರ್ಣ ಮಾತುಗಳ ಮೂಲಕ ಶಾಲೆಯ ಪ್ರಗತಿ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಕೌಟಿಲ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಟಿ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ವ್ಯವಸ್ಥಾಪಕ ಟ್ರಸ್ಟಿ ಆದಂತಹ ಶ್ರೀಮತಿ ನೀತು ಬಾಬುರವರು, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶಶಿಕಲಾ ವಿ ಆರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದಂತಹ ಪೌರಾಣಿಕ ಹಾಗೂ ಪಾಶ್ಚಾತ್ಯ ಪರಿಕಲ್ಪನೆಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ಕೂಡಿದ್ದು ಅತಿಥಿಗಳು ಮತ್ತು ಸಭಿಕರ ಪ್ರಶಂಸೆಗೆ ಪಾತ್ರವಾದವು. ಸುವರ್ಣ ಕರ್ನಾಟಕ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ್ದ ಕನ್ನಡ ನೃತ್ಯ ಪ್ರದರ್ಶನವು ಅದ್ಭುತವಾಗಿ ಮೂಡಿ ಬರುವುದರ ಜೊತೆಗೆ ಇಡೀ ಸಭಾಂಗಣವೇ ಕರ್ನಾಟಕ ಬಾವುಟಗಳಿಂದ ಕಂಗೊಳಿಸುತ್ತಾ ಕನ್ನಡಮಯವಾಗಿತ್ತು. ಹಾಗೆಯೇ ಶಿವ ತಾಂಡವ, ದಶಾವತಾರ ಹುಲಿ ಕುಣಿತ, ನಾಟಕಗಳು, ಪ್ರಕೃತಿಯ ಐದು ಪಂಚಭೂತಗಳನ್ನು ಬಿಂಬಿಸುವಂತಹ ನೃತ್ಯ ಪ್ರದರ್ಶನವು ಅತ್ಯದ್ಭುತವಾಗಿತ್ತು.

“ಕಿರಿಯರ ಕೀರ್ತಿಗೆ, ಹಿರಿಯರ ಸ್ಫೂರ್ತಿ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದಂತಹ ಶ್ರೀ ಸುಬ್ಬಣ್ಣ ಅಯ್ಯಪ್ಪನ್ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿಗಳಿಂದ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಸೊಗಸಾಗಿ ಮೂಡಿಬಂದವು. ಈ ಬಾರಿ ನಮ್ಮ ಭಾರತದಲ್ಲಿ ನಡೆದಂತಹ ಜಿ 20 ಶೃಂಗಸಭೆಯ ಗೌರವಾರ್ಥವಾಗಿ ವಿವಿಧ ದೇಶಗಳ ಪ್ರತಿನಿಧಿಸುವಂತಹ ಸಾಂಪ್ರದಾಯಿಕ ನೃತ್ಯ ಪ್ರದರ್ಶನವು ಆಕರ್ಷಕವಾಗಿ ಮೂಡಿಬಂತು. ಕಿರಿಯರ ಕೀರ್ತಿಗೆ, ಹಿರಿಯರ ಸ್ಫೂರ್ತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ತಾತ, ಅಜ್ಜಿ ರಾಂಪ್ ವಾಕ್ ಮಾಡುವುದರ ಮೂಲಕ ನೆರೆದಿದ್ದ ಜನರ ಮನವನ್ನು ರಂಜಿಸಿದರು. ಒಟ್ಟಾರೆ ಕೌಟಿಲ್ಯ ಶಾಲೆಯ 18ನೇ ವಾರ್ಷಿಕೋತ್ಸವ, ಕೌಟಿಲ್ಯ ಸಾಂಸ್ಕೃತಿಕ ಪರ್ವ – 2023-24 ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ನಡೆಯಿತು.

Leave a Reply

Your email address will not be published. Required fields are marked *