ಪಿರಿಯಾಪಟ್ಟಣ:22 ಆಗಸ್ಟ್ 2022
ನಂದಿನಿ ಮೈಸೂರು
ನಮಗೆ ಗೊತ್ತಿರದ ಹಲವು ವಿಷಯ ತಿಳಿಯಲು ಕಾರ್ಯಾಗಾರಗಳು ಸಹಾಯಕವಾಗಲಿವೆ ಎಂದು ಬಿಇಒ ಬಸವರಾಜು ಹೇಳಿದರು.
ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆ ಲಿಪಿಕ ನೌಕರರು ವಾಹನ ಚಾಲಕರು ಹಾಗೂ ಗ್ರೂಪ್ ಡಿ ನೌಕರರ ಸಂಘ ವತಿಯಿಂದ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು, ನಾವು ಕರ್ತವ್ಯ ನಿರ್ವಹಿಸುವ ಇಲಾಖೆಯ ಬಗ್ಗೆ ನಮಗೆ ಎಷ್ಟೇ ಮಾಹಿತಿಯಿದ್ದರೂ ಮತ್ತಷ್ಟು ಕಲಿಯಬೇಕು ಎನ್ನುವ ಹಂಬಲ ಪ್ರತಿಯೊಬ್ಬರಲ್ಲು ಇರಬೇಕು, ಕಚೇರಿ ಅನುಪಾಲನಾ ವರದಿ ಹಾಗೂ ಕಡತಗಳ ನಿರ್ವಹಣೆಗೆ ಸುಧೀರ್ಘ ಜ್ಞಾನವಿರಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಮೋಹನ್ ಕುಮಾರ್ ಅವರು ಮಾತನಾಡಿ ನಮ್ಮಲ್ಲಿರುವ ಇಲಾಖೆ ಬಗೆಗಿನ ಮಾಹಿತಿ ಜತೆಗೆ ಮತ್ತಷ್ಟು ಮಾಹಿತಿಗಳನ್ನು ತಿಳಿಸಿಕೊಡಲು ಕಾರ್ಯಾಗಾರ ಹಮ್ಮಿಕೊಂಡು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸಲಾಗುತ್ತಿದೆ ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಅವರು ಮಾತನಾಡಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಾಲ್ಲೂಕು ಶಿಕ್ಷಣ ಇಲಾಖೆ ಫಲಿತಾಂಶ ಹಾಗೂ ಪ್ರಗತಿಯಲ್ಲಿ ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಬಿಇಒ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ನಾಗೇಶ್ ಅವರು ಕಚೇರಿ ಮತ್ತು ಶಾಲೆಗಳಲ್ಲಿ ಕಡತಗಳ ನಿರ್ವಹಣೆ ಕಚೇರಿ ಟಿಪ್ಪಣಿ ಬರೆಯುವ ವಿಧಾನ ಅವಶ್ಯಕತೆ ಹಾಗೂ ತಪಾಸಣಾ ವರದಿಗೆ ಅನುಪಾಲನಾ ವರದಿ ತಯಾರಿಕೆಯ ಬಗ್ಗೆ ಹಾಗು ಅಕ್ಷರ ದಾಸೋಹ ವಿಭಾಗದ ಪ್ರಥಮ ದರ್ಜೆ ಸಹಾಯಕರಾದ ಬಿ.ಎಸ್ ಗುರುಮೂರ್ತಿ ಅವರು ಅಕ್ಷರ ದಾಸೋಹ ಪಿಎಫ್ ಎಂಎಸ್ ತಂತ್ರಾಂಶದ ನಿರ್ವಹಣೆ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
ಈ ವೇಳೆ ಭಾರತೀಯ ಸೇನೆಯಲ್ಲಿ ನಿವೃತ್ತರಾದ ನಂತರ ಬೆಟ್ಟದಪುರ ಪ್ರೌಢಶಾಲಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ವಿ.ಟಿ ಕೃಷ್ಣಕುಮಾರ್ ಹಾಗೂ ಬೆಣಗಾಲು ಸರ್ಕಾರಿ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಬಿ ಉಮೇಶ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಜೆ ಶಿವರಾಜು, ಲಿಪಿಕ ನೌಕರರ ಸಂಘದ ಗೌರವ ಅಧ್ಯಕ್ಷೆ ಯಮುನಾ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗಶೆಟ್ಟಿ, ಸರ್ಕಾರಿ ನೌಕರರ ಸಂಘದ ಖಜಾಂಚಿ ಅಣ್ಣೇಗೌಡ, ಕಾರ್ಯದರ್ಶಿ ಎಸ್.ಕೆ ಸ್ವಾಮಿಗೌಡ, ಇಸಿಒ ಸಿ.ಕೆ ಗಣೇಶ್, ಬಿಐಇಆರ್ ಟಿ ಪುಟ್ಟರಾಜು ಮತ್ತು ತಾಲ್ಲೂಕಿನ ವಿವಿಧೆಡೆಯ ಶಿಕ್ಷಣ ಇಲಾಖೆ ಸಿಬ್ಬಂದಿ ಹಾಜರಿದ್ದರು.