ಮೈಸೂರು:4 ನವೆಂಬರ್ 2021
ನಂದಿನಿ
ಕನ್ನಡ ಭಾಷೆಯು ಒಂದು ಭಾಷೆ ಮಾತ್ರವಲ್ಲದೆ ಕನ್ನಡಿಗರೆಲ್ಲರ ಬದುಕು ಕೂಡ ಹೌದು. ಎರಡು ಸಾವಿರ ವರ್ಷಗಳಿಗೂ ಹೆಚ್ಚು ಬಾಳಿ, ಬದುಕಿ ಕೋಟ್ಯಾಂತರ ನಾಲಿಗೆಗಳ ಮೇಲೆ ಅರಿಳಿರುವ ಇಂತಹ ಅದ್ಭುತ ಭಾಷೆಯ ಆಚರಣೆಯ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಜಿ.ಎಸ್.ಸೋಮಶೇಖರ್ ಜಿಗಣಿ ಅವರು ರಚಿಸಿರುವ ‘ಕನ್ನಡ ಕಸ್ತೂರಿ’ ಎಂಬ ವಿನೂತನ ಗೀತೆಯನ್ನು ಯೂಟ್ಯೂಬ್‌ನಲ್ಲಿ ಒಂದೇ ದಿನದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಿಸಿರುವ ಸಂಗೀತಪ್ರಿಯರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೀತೆಯ ಪರಿಕಲ್ಪನೆ, ನಿರ್ದೇಶನ ಹಾಗೂ ಸಂಯೋಜನೆಯನ್ನು ಸೋಮಶೇಖರ್ ಜಿಗಣಿ ಅವರು ಅತ್ಯದ್ಭುತವಾಗಿ ಕೈಗೊಂಡಿದ್ದು, ಹಲವು ಚಲನ ಚಿತ್ರಗಳಲ್ಲಿ ಕೊಳಲುವಾದನ ನೀಡಿರುವ ನೀತೂ ನಿನಾದ್ ಅವರು ಅತ್ಯುತ್ತಮವಾಗಿ ಸಂಗೀತ ನಿರ್ದೇಶನ ಮಾಡಿದ್ದಾರೆ. A2 ಎಂಟರ್ಟೈನ್ಮೆಂಟ್ ನಲ್ಲಿ ಬಿಡುಗಡೆಯಾಗಿರುವ ಈ ಗೀತೆಯನ್ನು ಗಾಯಕ ಆಲಾಪ್, ಎದೆತುಂಬಿ ಹಾಡುವೆನು ಮೊದಲ ಸಂಚಿಕೆಯ ವಿಜೇತರಾದ ಗಾಯಕಿ ಸಿಂಚನ ದೀಕ್ಷಿತ್ ಹಾಗೂ ಪ್ರಸ್ತುತ ಎದೆತುಂಬಿ ಹಾಡುವೆನಯ ಸಂಚಿಕೆಯ ಗಾಯಕಿ ರಶ್ಮಿ ಧರ್ಮೇಂದ್ರ ಅವರು ಇಂಪಾಗಿ ಹಾಡಿದ್ದಾರೆ.
ಅತ್ಯುತ್ತಮವಾದ ಸಾಹಿತ್ಯ, ಸಂಗೀತ, ಮನರಂಜಿಸುವ ನೃತ್ಯದ ಮೂಲಕ ಪ್ರೇಕ್ಷಕರ ಮನತಣಿಸುವಂತೆ ಮೂಡಿಬಂದಿರುವ ಗೀತೆಯನ್ನು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಅವರು ಬಿಡುಗಡೆ ಮಾಡಿದ್ದು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಐ.ಎ.ಎಸ್. ಹಾಗೂ ಜಿಲ್ಲಾ ಪಂಚಾಯತ್ ಸಿಇಒ ದಿವ್ಯಪ್ರಭು ಐ.ಎ.ಎಸ್ ಅವರು ಬೆಂಬಲ ಈ ಗೀತೆಗೆ ನೀಡಿದ್ದಾರೆ. ಅಲ್ಲದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಐ.ಎ.ಎಸ್, ಆಯುಕ್ತರಾದ ವಸಂತಕುಮಾರ್ ಐ.ಎ.ಎಸ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಡಾ.ನಾಗಲಾಂಬಿಕಾದೇವಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಂಗೇಗೌಡ ಅವರು ಪ್ರೋತ್ಸಾಹ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ತಾಲ್ಲೂಕು ಅಧಿಕಾರಿಗಳಾದ ಹರೀಶ್, ಸತೀಶ್, ವೆಂಕಟೇಶ್ ಅವರು ಸೇರಿದಂತೆ ನಿಯಲಪಾಲಕರು ಹೆಚ್ಚಿನ ಸಹಕಾರ ನೀಡಿದ್ದಾರೆ.
ಕೆ.ಆರ್.ಪೇಟೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಸನ್ನ ಅವರ ನೇತೃತ್ವದಲ್ಲಿ ವೃತ್ತಿಯಲ್ಲಿ ಶುಶ್ರೂಷಕಿ ಪ್ರವೃತ್ತಿಯಲ್ಲಿ ನೃತ್ಯ ಸಂಯೋಜಕಿ ಆಗಿರುವ ಅನಿತಾ ಮತ್ತು ರಘು ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಈ ಸುಂದರವಾದ ಹಾಡಿಗೆ ಹೆಜ್ಜೆ ಹಾಕಿರುವುದು ನೋಡುಗರ ಕಣ್ಣಿಗೆ ಹಬ್ಬ ಉಂಟುಮಾಡಿದೆ.
ಸಾಹಿತ್ಯಾಶಕ್ತರಾದ ಸೋಮಶೇಖರ್ ಜಿಗಣಿ ಅವರು ಕೆಲವು ತಿಂಗಳ ಹಿಂದೆಯಷ್ಟೇ ಸಂಗೀತ ನಿರ್ದೇಶಕ ನೀತೂ ನಿನಾದ್ ಹಾಗೂ ತಂಡದೊಂದಿಗೆ ಹೊಂಬಾಳೆ ಫಿಲಿಂಸ್ ಸಹಯೋಗದಲ್ಲಿ ‘ಕೊರೊನಾ ಗೆಲ್ಲೋಣ’ ಎಂಬ ಜಾಗೃತಿ ಮೂಡಿಸುವ ಗೀತೆಯನ್ನು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತಿ ಹಿನ್ನೆಲೆ ‘ಇವರೆ ಮಹಾನಾಯಕ’ ಎಂಬ ಶೀರ್ಷಿಕೆಯಡಿ ಮೂಡಿಬಂದ ಆಲ್ಬಂ ಗೀತೆಗಳು ಎಲ್ಲರನ್ನೂ ಮನಸೂರೆಗೊಳ್ಳುವಂತೆ ಮಾಡಿದ್ದು ವಿಶೇಷವಾಗಿದೆ.