ಎಚ್.ಡಿ.ಕೋಟೆ:11 ಜುಲೈ 2022
ಕೇರಳದ ವೈನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಜಲಾಶಯದ ಮುಂಭಾಗದ ಸೇತುವೆ ಮುಳುಗಡೆ ಆಗಿದೆ.
ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ, ಎನ್. ಬೇಗೂರು ಗ್ರಾಮ ಪಂಚಾಯಿತಿ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಚಾರ ನಿರ್ಬಂಧ ಹೇರಿದಂತಾಗಿದ್ದು, ಜನತೆಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ, ಕಬಿನಿ ಜಲಾಶಯದ ಅಣೆಕಟ್ಟಿನ ಮೇಲ್ಬಾಗದ ಮೂಲಕ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸರಗೂರು, ಆಗತ್ತೂರು ಮೂಲಕ ಸಂಚಾರ ಮಾಡಲು ಸೂಚನೆ ಕೊಡಲಾಗಿದೆ.
ಪ್ರವಾಸಿಗರಿಗೆ ಜಲಾಶಯ ವೀಕ್ಷಣೆ ಮಾಡಲು ಅವಕಾಶವಿಲ್ಲ ಹಾಗಾಗಿ, ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ರಸ್ಟ್ ಗೇಟ್ ಮೂಲಕ ನೀರು ಬಿಟ್ಟಿರುವ ಸವಿಯನ್ನು ಸವಿಯಲು ಅಕ್ಕಪಕ್ಕದ ಗ್ರಾಮದ ಗ್ರಾಮಸ್ಥರ ಸೋಗಿನಲ್ಲಿ ಪ್ರವಾಸಿಗರು ಆಗಮಿಸಿ ಜಲಾಯಶಯದ ಗೇಟಿನ ಮುಂಭಾಗ ಜಮಾಯಿಸಿದ್ದು, ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಪೊಲೀಸರ ಮುಂದೆ ಮುಗಿ ಬೀಳುತ್ತಿದ್ದಾರೆ.
ಪೋಲಿಸರು ಸ್ಥಳೀಯರಿಗೆ ಮಾತ್ರ ಅವಕಾಶ ನೀಡುತ್ತಾರೆ, ಹೀಗಾಗಿ ಕೆಲವರ ಪರಿಚಯ ಇಲ್ಲದೇ ಇರುವುದರಿಂದ ಕೆಲ ಕಾಲ ಗೊಂದಲ ಉಂಟಾಗುತ್ತಿದೆ.
ಕ್ರಸ್ಟ್ ಗೇಟ್ ಮೂಲಕ 20 ಸಾವಿರ ಕ್ಯೂಸೆಕ್ ಹಾಗೂ 5ಸಾವಿರ ಕ್ಯೂಸೆಕ್ ವಿದ್ಯುತ್ ಉತ್ಪಾದನಾ ಘಟಕದಿಂದ ಬಿಡಲಾಗುತ್ತಿದ್ದು, ವಿದ್ಯುತ್ ಉತ್ಪಾದನಾ ಘಟಕದಿಂದ ಪ್ರತಿದಿನ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ.
ಜಲಾಶಯದ ಮಟ್ಟ 2282.65 ಅಡಿ ಇದ್ದು. ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದೆ. ಜಲಾಶಯದ ಸಂಗ್ರಹಣಾ ಸಾಮಥ್ರ್ಯ 19.52 ಟಿ.ಎಂ.ಸಿ ಆಗಿದ್ದು, ಹಾಲಿ ಇಂದು ಜಲಾಶಯದಲ್ಲಿ 18.50 ಟಿ.ಎಂ.ಸಿ ನೀರು ಸಂಗ್ರಹಗೊಂಡಿದೆ. ಜಲಾಶಯದ ಬಲದಂಡೆ ಮತ್ತು ಎಡದಂಡೆ ನಾಲೆಗಳಲ್ಲಿ ನೀರು ಬಿಡಲಾಗುತ್ತಿಲ್ಲ.
ಜಲಾಶಯದ ವ್ಯಾಪ್ತಿ ಮತ್ತು ಕೇರಳ ರಾಜ್ಯದ ವೈನಾಡು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಮುಂದಿನ 5 ರಿಂದ 6 ದಿನಗಳ ತನಕ ಮಳೆ ಇದೇ ರೀತಿಯಲ್ಲಿ ಮುಂದುವರೆಯಬಹುದು ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.
ಜಲಾಶಯದಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಜಲಾಶಯದಿಂದ ಬಿಡುವ ಸಂಭವ ಇದೆ. ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಜಲಾಶಯದ ಪ್ರಕಟಣೆ ತಿಳಿಸಿದೆ.
ಜಲಾಶಯದಿಂದ 35 ಸಾವಿರ ಕ್ಯೂಸೆಕ್ ನೀರನ್ನು ಬಿಟ್ಟರೆ ಮಾದಾಪುರ-ಕೆ. ಬೆಳತ್ತೂರು ಗ್ರಾಮಗಳ ನಡುವೆ ಕಬಿನಿ ನದಿಗೆ ಕಟ್ಟಲಾಗಿರುವ ಸೇತುವೆ, ಹೊಮ್ಮರಗಳ್ಳಿ ಗ್ರಾಮದ ಬಳಿ
ಕಬಿನಿ ನದಿಗೆ ಕಟ್ಟಿರುವ ಸೇತುವೆಗಳು ನೀರನಲ್ಲಿ ಮುಳುಗಡೆ ಆಗಲಿದೆ, ತಗ್ಗು ಪ್ರದೇಶದಲ್ಲಿ ಬೇಸಾಯ ಮಡಿರುವ ಸಾಕಷ್ಟು ಜಮೀನುಗಳ ಬೆಳೆಗಳ ನಷ್ಟ ಸಂಭವಿ ಸಲಿದ್ದು ಪ್ರವಾಹ ಭೀತಿ ಉಂಟಾಗಲಿದೆ.
ಸೇತುವೆ ನಿರ್ಮಾಣ;
ಕಬಿನಿ ಜಲಾಶಯದ ಮುಂಭಾಗದ ಸೇತುವೆ ಮತ್ತು ಕೊಲ್ಲೇಗೌಡನಹಳ್ಳಿ ವೃತ್ತದಿಂದ ಬಿದರಹಳ್ಳಿ ವೃತ್ತದ ವರೆಗಿನ ರಸ್ತೆ ನಿರ್ಮಾಣಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಕಬಿನಿಗೆ ಬಾಗೀನ ಬಿಡಲು ಆಗಮಿಸಿದ್ದ ಅಂದಿನ ಮುಖ್ಯ ಮಂತ್ರಿ ಯಡಿಯೂರಪ್ಪ ರೂ 50 ಕೋಟಿ ರೂ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು.
ಕಾಮಗಾರಿ ಪ್ರಗತಿಯಲ್ಲಿದೆ , 82 ಮೀಟರ್ ಅಂತರದಲ್ಲಿ ಮೂರು ದೊಡ್ಡ ಪಿಲ್ಲರ್ಗಳು ನಿರ್ಮಾಣವಾಗಿದೆ.
ರಸ್ತೆ ಕಾಮಗಾರಿ ಕೂಡ ನಡೆಯುತ್ತಿದ್ದು ಶೇ. 75 ರಷ್ಟು ರಸ್ತೆ ಕಾಮಗಾರಿಯಾಗಿದೆ.
25 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಜಲಾಶಯದ ಮುಂಭಾಗದ ಸೇತುವೆ ಮುಳುಗಡೆಯಾಗಿದೆ.