ನಂದಿನಿ ಮೈಸೂರು
ಶಿಕ್ಷಣಕ್ಕೆ ಬೆಲೆ ಕಟ್ಟಿದಾಕ್ಷಣ ಗುರು-ಶಿಷ್ಯರ ಬಾಂಧವ್ಯ ಕಣ್ಮರೆಯಾಗುತ್ತದೆ : ರೋನಾಲ್ಡ್ ಗೋವಿಯಸ್
ಹನೂರು ಕ್ರಿಸ್ತರಾಜ ಪ್ರೌಢಶಾಲೆಯ 1997ನೇ ಸಾಲಿನ ವಿಧ್ಯಾರ್ಥಿಗಳಿಂದ ಗುರುವಂದನೆ, ರಜತ ಮಹೋತ್ಸವ ಕಾರ್ಯಕ್ರಮ
ಮೈಸೂರು : ಶಿಕ್ಷಣಕ್ಕೆ ಬೆಲೆ ಕಟ್ಟಲಾಗದು, ಒಂದು ವೇಳೆ ಇಂತಹ ಶಿಕ್ಷಣಕ್ಕೆ ಇಂತಿಷ್ಟು ಬೆಲೆ ಎಂದಾಕ್ಷಣ ಗುರು, ಶಿಷ್ಯರ ಬಾಂಧವ್ಯ ಕಣ್ಮರೆಯಾಗುತ್ತದೆ ಎಂದು ಹನೂರು ಪಟ್ಟಣದ ಕ್ರಿಸ್ತರಾಜ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ರೋನಾಲ್ಡ್ ಗೋವಿಯಸ್ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ಹನೂರು ಪಟ್ಟಣದ ಪ್ರತಿಷ್ಠಿತ ಕ್ರಿಸ್ತರಾಜ ಪ್ರೌಢಶಾಲೆಯ 1997ನೇ ಸಾಲಿನ ವಿಧ್ಯಾರ್ಥಿಗಳ ರಜತ ಮಹೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲವು ಶಾಲೆಗಳಲ್ಲಿ ಕೆಲವೊಮ್ಮೆ ನಡೆದಂತಹ ಸಣ್ಣ ಪುಟ್ಟ ಘಟನೆಗಳನ್ನು ಮುಂದಿಟ್ಟು ಪೋಷಕರು ತಮ್ಮ ಮಕ್ಕಳ ಮುಂದೆ ಶಿಕ್ಷಕರನ್ನು ಬೈಯುವಂತಹ ಕೆಲಸ ಮಾಡುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಶಿಕ್ಷಕರ ಕುರಿತು ಬರುವ ತಪ್ಪು ಕಲ್ಪನೆಗಳು ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುವ ಕಾರಣ ಗುರು ಶಿಷ್ಯರ ಬಾಂಧವ್ಯಕ್ಕೆ ಚ್ಯುತಿ ಬರುತ್ತದೆ. ಪೋಷಕರು ಮತ್ತು ಶಿಕ್ಷಕರ ಸಮಾನವಾದ ಪೋಷಣೆಯಿಂದ ಮಾತ್ರ ಉತ್ತಮ ವಿಧ್ಯಾರ್ಥಿ ರೂಪಿಸಲು ಸಾಧ್ಯ. ಅಕ್ಷರ ಅಭ್ಯಾಸದಿಂದ ಮಾತ್ರ ಶಿಕ್ಷಣ ಪೂರ್ತಿಯಾಗದು, ವಿಧ್ಯಾರ್ಥಿಗಳ ಬದುಕು ರೂಪಿಸುವುದು, ಅವರನ್ನು ಸುಸಂಸ್ಕøತರನ್ನಾಗಿ ಮಾಡಿ ಸಮಾಜಕ್ಕೆ ಅವರು ಕೊಡುಗೆಯಾಗುವ ರೀತಿಯಲ್ಲಿ ಬೆಳೆಸುವುದೂ ಕೂಡ ಶಿಕ್ಷಣದ ಭಾಗ ಎಂದರು.
ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ 1997ನೇ ಸಾಲಿನಲ್ಲಿ ಕಲಿತ ಮಕ್ಕಳು 25 ವರ್ಷಗಳ ನಂತರವೂ ನಮ್ಮನ್ನು ಗುರುತಿಸಿ ಗೌರವಿಸುತ್ತಿರುವುದು ಸಾರ್ಥಕ ಎನಿಸಿದೆ ಎಂದರು.
ನಿವೃತ್ತ ಶಿಕ್ಷಕ ಚಾನೇಶ್ವರ ರಾವ್ ಮಾತನಾಡಿ, ನಾವು ಕ್ರಿಸ್ತರಾಜ ಶಾಲೆಯ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಶಾಲೆಯ ನಿಯಮಗಳಿಗೆ ಬದ್ಧರಾಗಿದ್ದೇವು. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವ ಗುರಿಯೊಂದೇ ನಮ್ಮ ಮುಂದಿತ್ತು. ನಾಳೆ ಬೆಳಿಗ್ಗೆ ಉತ್ತಮವಾಗಿ ಪಾಠ ಮಾಡಬೇಕು ಎಂಬ ಆಲೋಚನೆ ಮಾಡಿಕೊಂಡು ರಾತ್ರಿ ನಿದ್ದೆ ಮಾಡುತ್ತಿದ್ದೆವು.
ಇದರಿಂದ ನಾವು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು. ನಿಮ್ಮ ನಡವಳಿಕೆ ನೋಡಿ ಅಂದು ನಮ್ಮ ಬೆರಳಿಗೆ ಅಂಟಿದ ಸೀಮೇ ಸುಣ್ಣದ ಧೂಳು ಸಾರ್ಥಕವಾಯಿತು ಎನಿಸಿದೆ ಎಂದರು.
ವಿಧ್ಯಾರ್ಥಿಗಳ ಪರವಾಗಿ ವೆಂಕಟೇಶ್ ಮಾತನಾಡಿ, ಇದೊಂದು ಭಾವನಾತ್ಮ ಸಂಬಂಧ. ಅವೀಸ್ಮರಣೀಯ ಕ್ಷಣ. 1997ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ 64 ವಿಧ್ಯಾರ್ಥಿಗಳಾದ ನಾವುಗಳು ಇಂದು ವಿವಿಧ ಹುದ್ದೆಗಳು, ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಎಲ್ಲರಿಗೂ ಅವರದೇ ಆದ ಕೆಲಸ ಕಾರ್ಯಗಳ ಒತ್ತಡಗಳು ಇದ್ದವು. ಆದಾಗ್ಯೂ ಗುರುವಂದನೆ ಎಂದಾಕ್ಷಣ ಎಲ್ಲರೂ ಒಟ್ಟಾಗಿ 25 ವರ್ಷಗಳ ನಂತರ ಇಲ್ಲಿ ಸೇರಿದ್ದೇವೆ. ಇದನ್ನು ಆಗಾಗ್ಗೆ ಮುಂದುವರಿಸುವ ಯೋಚನೆಯೂ ಇದೆ ಎಂದರು.
ಇದೇ ಸಂದರ್ಭದಲ್ಲಿ ಕ್ರಿಸ್ತರಾಜ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಗೌರವಿಸಲಾಯಿತು.
ಶಿಕ್ಷಕರಾದ ನಾಗರಾಜು, ವಿಷ್ಣುಕೀರ್ತಿ, ಮುರಳೀಧರ, ರಾಣಿ ಇನ್ನಿತರರು ಇದ್ದರು